ಮೈಸೂರು ದಸರಾ ಅಂಗಳದಲ್ಲಿ ಕರಾವಳಿಯ ಸಿರಿ: 150 ಜೋಡಿ ಕೋಣಗಳ ಅಂತಿಮ ಪಟ್ಟಿ ಬಿಡುಗಡೆ
x

ಮೈಸೂರು ದಸರಾ ಅಂಗಳದಲ್ಲಿ ಕರಾವಳಿಯ ಸಿರಿ: 150 ಜೋಡಿ ಕೋಣಗಳ ಅಂತಿಮ ಪಟ್ಟಿ ಬಿಡುಗಡೆ

ದಸರಾ ಕಂಬಳದಲ್ಲಿ ಭಾಗವಹಿಸಲು 72 ಅರ್ಜಿಗಳು ಸಲ್ಲಿಕೆಯಾಗಿದ್ದವು. ಜಾಗದ ಮಿತಿ, ಬಜೆಟ್ ಲಭ್ಯತೆಯನ್ನುಪರಿಗಣಿಸಿ ಕೋಣಗಳ ಸಂಖ್ಯೆಯನ್ನು 150ಕ್ಕೆ ಮಿತಿಗೊಳಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.


Click the Play button to hear this message in audio format

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು, ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿರುವಾಗಲೇ, ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಸದ್ದು ಮೈಸೂರಿನ ಮಣ್ಣಿನಲ್ಲಿ ಮೊಳಗಲು ವೇದಿಕೆ ಸಿದ್ಧವಾಗಿದೆ. 2026ರ ದಸರಾ ಸಂಭ್ರಮಕ್ಕೆ ಮೆರಗು ನೀಡಲು ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಐತಿಹಾಸಿಕ ದಸರಾ ಕಂಬಳವನ್ನು ಆಯೋಜಿಸಲಾಗಿದ್ದು, ಈ ಕ್ರೀಡಾ ಹಬ್ಬದಲ್ಲಿ ಪಾಲ್ಗೊಳ್ಳಲಿರುವ 150 ಜೋಡಿ ಕೋಣಗಳ ಅಂತಿಮ ಪಟ್ಟಿಯನ್ನು ಇದೀಗ ರಾಜ್ಯ ಕಂಬಳ ಅಸೋಸಿಯೇಷನ್ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಕರಾವಳಿಯ ಅವಿಭಾಜ್ಯ ಅಂಗವಾಗಿರುವ ಕಂಬಳವನ್ನು ರಾಜ್ಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಮೈಸೂರು ಜಿಲ್ಲಾಡಳಿತ ಮತ್ತು ಕಂಬಳ ಸಮಿತಿ ನಡೆಸಿದ ಪ್ರಯತ್ನಗಳು ಇದೀಗ ಫಲಕೊಟ್ಟಿವೆ. ದಸರಾ ಕಂಬಳದಲ್ಲಿ ಭಾಗವಹಿಸಲು ಒಟ್ಟು 172 ಅರ್ಜಿಗಳು ಆನ್‌ಲೈನ್ ಮತ್ತು ಭೌತಿಕವಾಗಿ ಸಲ್ಲಿಕೆಯಾಗಿದ್ದವು. ಆದರೆ, ಮೈಸೂರಿನಲ್ಲಿ ಕಂಬಳಕ್ಕಾಗಿ ನಿಗದಿಪಡಿಸಲಾದ ಜಾಗದ ಮಿತಿ ಮತ್ತು ಆಯೋಜನೆಯ ಬಜೆಟ್ ಲಭ್ಯತೆಯನ್ನು ಪರಿಗಣಿಸಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೋಣಗಳ ಸಂಖ್ಯೆಯನ್ನು 150ಕ್ಕೆ ಮಿತಿಗೊಳಿಸಲು ನಿರ್ಧರಿಸಲಾಯಿತು. ಈ ಆಯ್ಕೆ ಪ್ರಕ್ರಿಯೆಯು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಲವ-ಕುಶ ಕಂಬಳ ಜೋಡುಕರೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು. ಹಿರಿಯ ತೀರ್ಪುಗಾರರಾದ ವಿಜಯಕುಮಾರ್ ಕಂಗಿನಮನೆ, ರಾಜೀವ್ ಶೆಟ್ಟಿ ಎಡ್ತೂರು, ಕಂಬಳ ಉಸ್ತುವಾರಿ ಮುರಳೀಧರ ರೈ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸಿ, ಅರ್ಹ ಕೋಣಗಳನ್ನು ಆಯ್ಕೆ ಮಾಡಲಾಯಿತು.

ವಿಭಾಗವಾರು ಅಂತಿಮಗೊಂಡ ತಂಡಗಳ ವಿವರ

ದಸರಾ ಕಂಬಳದ ಕಣದಲ್ಲಿ ಕರಾವಳಿಯ ವೇಗದ ಕೋಣಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಲಿವೆ. ಆಯ್ಕೆಯಾಗಿರುವ 150 ಜೋಡಿ ಕೋಣಗಳನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಹಗ್ಗ ಹಿರಿಯ- 15 ಜೋಡಿ, ಹಗ್ಗ ಕಿರಿಯ - 20 ಜೋಡಿ, ನೇಗಿಲು ಹಿರಿಯ - 36 ಜೋಡಿ, ನೇಗಿಲು ಕಿರಿಯ - 55 ಜೋಡಿ (ಎಲೆಕ್ಟ್ರಾನಿಕ್ ಸೆನ್ಸಾರ್‌ನಲ್ಲಿ ಅತ್ಯುತ್ತಮ ಸಮಯ ದಾಖಲಿಸಿದ ಕೋಣಗಳಿಗೆ ಆದ್ಯತೆ), ಅಡ್ಡ ಹಲಗೆ (ಹಿರಿಯ)- 13 ಜೋಡಿ, ಕನೆ ಹಲಗೆ (ಹಿರಿಯ) - 11 ಜೋಡಿ. ಒಟ್ಟಾರೆಯಾಗಿ 150 ಜೋಡಿಗಳು ಮೈಸೂರಿನ ಮಣ್ಣಿನಲ್ಲಿ ಧೂಳೆಬ್ಬಿಸಲು ಸಜ್ಜಾಗಿವೆ. ವಿಶೇಷವಾಗಿ ನೇಗಿಲು ಕಿರಿಯ ವಿಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯ ಕೋಣಗಳು ಆಯ್ಕೆಯಾಗಿರುವುದು, ಯುವ ಕೋಣಗಳ ಸಾಮರ್ಥ್ಯವನ್ನು ಸಾಬೀತುಪಡಿಸಲು ದೊಡ್ಡ ವೇದಿಕೆಯಾಗಿ ಪರಿಣಮಿಸಲಿದೆ.

ಕೋಣಗಳ ಸಾಗಾಟ: ಶಿಸ್ತುಬದ್ಧ ವೇಳಾಪಟ್ಟಿ

ಕಂಬಳದ ಕೋಣಗಳು ಪುತ್ತೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸುವ ಸಿದ್ಧತೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಜಿಲ್ಲಾ ಕಂಬಳ ಸಮಿತಿ ಈ ಸಾಗಾಟದ ಜವಾಬ್ದಾರಿಯನ್ನು ಹೊತ್ತಿದೆ.

ಶನಿವಾರದಂದು ಪ್ರಯಾಣ ಬೆಳೆಸಲಾಗುತ್ತದೆ. ಬೆಳಿಗ್ಗೆ 8ಗಂಟೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಿಂದ ಎಲ್ಲಾ ವಾಹನಗಳ ಸಮೂಹ ಒಟ್ಟಾಗಿ ಮೈಸೂರಿನತ್ತ ಹೊರಡಲಿದೆ. ಇದೇ ವೇಳೆ ಮಾಲೀಕರಿಗೆ ಅಧಿಕೃತ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಮಧ್ಯಾಹ್ನ 12.30ಕ್ಕೆ ಕುಶಾಲನಗರಕ್ಕೆ ಆಗಮನವಾಗಲಿದ್ದು, ಕೋಣಗಳಿಗೆ ಅಲ್ಪಾವಧಿಯ ವಿಶ್ರಾಂತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ಕುಶಾಲನಗರದಿಂದ ಅಂತಿಮ ಹಂತದ ಪ್ರಯಾಣ ಆರಂಭವಾಗಲಿದ್ದು, ಸಂಜೆ 6.30ಕ್ಕೆ ಮೈಸೂರು ತಲುಪುವ ನಿರೀಕ್ಷೆ ಇದೆ. ಈ ಸುದೀರ್ಘ ಪ್ರಯಾಣದಲ್ಲಿ ಕೋಣಗಳ ಆರೋಗ್ಯದ ದೃಷ್ಟಿಯಿಂದ ಪಶುವೈದ್ಯಕೀಯ ತಂಡಗಳು ಸದಾ ಲಭ್ಯವಿರಲಿವೆ. ಕೋಣಗಳ ಮಾಲೀಕರು ಪ್ರಯಾಣಕ್ಕೂ ಮುನ್ನ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಪ್ರಾಣಿ ಆರೋಗ್ಯ ಪ್ರಮಾಣಪತ್ರ ಮತ್ತು ಸಾಗಾಣಿಕೆ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೋಣಗಳ ಮಾಲೀಕರಿಗೆ ಗೌರವಧನ

ಕಂಬಳದ ಕ್ರೀಡಾಳುಗಳನ್ನು ಮತ್ತು ಕೋಣಗಳ ಮಾಲೀಕರನ್ನು ಪ್ರೋತ್ಸಾಹಿಸಲು ಸರ್ಕಾರ ವಿಶೇಷ ಗೌರವಧನವನ್ನು ಪ್ರಕಟಿಸಿದೆ. ಹಿರಿಯ ವಿಭಾಗದ ಪ್ರತಿ ತಂಡಕ್ಕೆ 65 ಸಾವಿರ ರೂ., ಕಿರಿಯ ವಿಭಾಗದ ಪ್ರತಿ ತಂಡಕ್ಕೆ 50 ಸಾವಿರ ರೂ. ಘೋಷಿಸಲಾಗಿದೆ. ಈ ಗೌರವಧನವು ಕೋಣಗಳ ಆರೈಕೆ, ಪೋಷಣೆ ಮತ್ತು ಸಾಗಾಣಿಕೆ ವೆಚ್ಚವನ್ನು ಭರಿಸಲು ಮಾಲೀಕರಿಗೆ ಸಹಕಾರಿಯಾಗಲಿದೆ.

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, "ಮೈಸೂರು ದಸರಾ ಕಂಬಳ ಕೇವಲ ಒಂದು ಕ್ರೀಡೆಯಲ್ಲ, ಇದು ಕರಾವಳಿಯ ಸಾಂಸ್ಕೃತಿಕ ರಾಯಭಾರಿ. ಈ ಕ್ರೀಡೆಯನ್ನು ವಿಶ್ವದಾದ್ಯಂತ ಪರಿಚಯಿಸಲು ಮೈಸೂರು ವೇದಿಕೆಯಾಗಲಿದೆ. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಪಶುಪಾಲನಾ ಇಲಾಖೆಯು ನೀಡುತ್ತಿರುವ ಬೆಂಬಲ ಅಭೂತಪೂರ್ವವಾಗಿದೆ" ಎಂದು ತಿಳಿಸಿದರು. ಅಕ್ಟೋಬರ್ 18 ಮತ್ತು 19 ರಂದು ನಡೆಯಲಿರುವ ಈ ಕಾರ್ಯಕ್ರಮವು ಕರಾವಳಿಯ ಸಂಸ್ಕೃತಿ ಮತ್ತು ಮೈಸೂರಿನ ದಸರಾ ವೈಭವದ ಮಿಲನವಾಗಿದೆ. ಕೋಣಗಳ ಮಾಲೀಕರು ಶಿಸ್ತಿನಿಂದ ಪಾಲ್ಗೊಂಡು ಕಂಬಳದ ಘನತೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.

Read More
Next Story