ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಿದರೆ ತಪ್ಪೇನು; ಕಂಬಳ ತಜ್ಞ ರಾಜೀವ್‌ ಶೆಟ್ಟಿ ಪ್ರಶ್ನೆ
x

ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಿದರೆ ತಪ್ಪೇನು; ಕಂಬಳ ತಜ್ಞ ರಾಜೀವ್‌ ಶೆಟ್ಟಿ ಪ್ರಶ್ನೆ

ಕರಾವಳಿಯ ಸಾಂಸ್ಕೃತಿಕ ರಾಯಭಾರಿಯಾದ ಕಂಬಳವನ್ನು ದಸರಾದಲ್ಲಿ ಸೇರಿಸುವುದರಿಂದ ಹಬ್ಬದ ಮೆರಗು ಇನ್ನಷ್ಟು ಹೆಚ್ಚುತ್ತದೆ. ವಿದೇಶಿ ಪ್ರವಾಸಿಗರಿಗೂ ನಮ್ಮ ರಾಜ್ಯದ ವೈವಿಧ್ಯಮಯ ಸಂಸ್ಕೃತಿಯ ಪರಿಚಯವಾಗುತ್ತದೆ" ಎಂದು ರಾಜೀವ್‌ ಶೆಟ್ಟಿ ಪ್ರತಿಪಾದಿಸಿದ್ದಾರೆ.


ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ಆಯೋಜಿಸುವ ವಿಚಾರ ಇದೀಗ ರಾಜ್ಯ ರಾಜಕಾರಣ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಕೆಲವರು ದಸರಾದಲ್ಲಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರೆ, ಕರಾವಳಿ ಭಾಗದ ಕಂಬಳ ಸಮಿತಿ ಹಾಗೂ ಸರ್ಕಾರ ಇದನ್ನು ಕಟ್ಟುನಿಟ್ಟಾಗಿ ನಡೆಸಲು ನಿರ್ಧರಿಸಿದೆ. ಆದರೆ, ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ಕಂಬಳ ಆಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದಾರೆ.

ಕರಾವಳಿ ಕಂಬಳದ ಕುರಿತು ಕಂಬಳ ತಜ್ಞ ಯೆಡ್ತೂರು ರಾಜೀವ್‌ ಶೆಟ್ಟಿ “ದ ಫೆಡರಲ್‌ ಕರ್ನಾಟಕ”ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಕರಾವಳಿ ಭಾಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ವಿಶಿಷ್ಟ ಕಲೆಯನ್ನು ಮೈಸೂರಿಗೆ ತಂದು ದಸರಾ ಹೆಸರಿನಲ್ಲಿ ವಾಣಿಜ್ಯೀಕರಣ ಮಾಡುವುದು ಸರಿಯಲ್ಲ ಎಂದು ಹೇಳುವವರಿಗೆ ರಾಜೀವ್‌ ಶೆಟ್ಟಿ ತಿರುಗೇಟು ನೀಡಿದ್ದಾರೆ.

"ನಾಡಹಬ್ಬ ದಸರಾ ಎಂದರೆ ಅದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ, ಅದು ಇಡೀ ರಾಜ್ಯದ ಹಬ್ಬ. ಕರಾವಳಿಯ ಸಾಂಸ್ಕೃತಿಕ ರಾಯಭಾರಿಯಾದ ಕಂಬಳವನ್ನು ದಸರಾದಲ್ಲಿ ಸೇರಿಸುವುದರಿಂದ ಹಬ್ಬದ ಮೆರಗು ಇನ್ನಷ್ಟು ಹೆಚ್ಚುತ್ತದೆ. ವಿದೇಶಿ ಪ್ರವಾಸಿಗರಿಗೂ ನಮ್ಮ ರಾಜ್ಯದ ವೈವಿಧ್ಯಮಯ ಸಂಸ್ಕೃತಿಯ ಪರಿಚಯವಾಗುತ್ತದೆ" ಎಂದು ಪ್ರತಿಪಾದಿಸಿದ್ದಾರೆ.

ನೀರಿನ ಕೊರತೆಯ ಕುರಿತಾದ ಆತಂಕಕ್ಕೆ ಉತ್ತರಿಸಿದ ಅವರು, "ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿರುವಂತೆ, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕಂಬಳ ಆಯೋಜಿಸಲಾಗುತ್ತದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸಿದಾಗಲೂ ಇಂತಹುದೇ ವಿರೋಧವಿತ್ತು, ಆದರೆ, ಲಕ್ಷಾಂತರ ಜನರ ಸಮ್ಮುಖದಲ್ಲಿ ಅದು ಅತ್ಯಂತ ಯಶಸ್ವಿಯಾಗಿ ನಡೆಯಿತು. ಕೋಣಗಳ ಓಟದ ವೇಗದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಮೈಸೂರಿನ ಹವಾಮಾನವೂ ಕಂಬಳದ ಕೋಣಗಳಿಗೆ ಪೂರಕವಾಗಿದೆ" ಎಂದರು.

ರಾಜಕೀಯ ಸ್ವರೂಪ ಪಡೆದ ಜಾನಪದ ಕ್ರೀಡೆ ಕಂಬಳ ಉಳಿವಿಗಾಗಿ ಈ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಹೋರಾಡಿದ್ದವು. ಆದರೆ ಈಗ ದಸರಾ ವೇದಿಕೆಯಲ್ಲಿ ಇದನ್ನು ನಡೆಸುವ ವಿಚಾರ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಕಂಬಳ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕೆ ಬೆಂಗಳೂರಿನಲ್ಲಿ ದೊಡ್ಡ ಮನ್ನಣೆ ಸಿಕ್ಕ ಬೆನ್ನಲ್ಲೇ, ಇದೀಗ ಮೈಸೂರು ದಸರಾ ಕಂಬಳದ ಮೇಲೂ ಕರಾವಳಿ ಜನತೆ ಮತ್ತು ಕಂಬಳದ ಯಜಮಾನರು ಇಮ್ಮಡಿ ಉತ್ಸಾಹ ಇಟ್ಟುಕೊಂಡಿದ್ದಾರೆ.

Read More
Next Story