
ಅತ್ಯಾಚಾರ, ಕೊಲೆ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಮೈಸೂರು ನ್ಯಾಯಾಲಯ
ಮೈಸೂರು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಪಿ. ವಘಾಡೆ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 32 ವರ್ಷದ ಕಾರ್ತಿಕ್ ಎಂಬಾತನಿಗೆ ಈ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಲೂನ್ ಮಾರಾಟ ಮಾಡುತ್ತಿದ್ದ 9 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ಕಾರ್ತಿಕ್‌ಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಮೈಸೂರು ತ್ವರಿತಗತಿ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶರಾದ ಆನಂದ್ ಪಿ. ವಘಾಡೆ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 32 ವರ್ಷದ ಕಾರ್ತಿಕ್ ಎಂಬಾತನಿಗೆ ಈ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಕಳೆದ ದಸರಾ ಸಂಭ್ರಮದ ವೇಳೆ ಕಲಬುರಗಿಯಿಂದ ಮೈಸೂರಿಗೆ ಬಲೂನ್ ಮಾರಾಟ ಮಾಡಲು ಬಂದಿದ್ದ ಬಡ ಕುಟುಂಬವೊಂದು ದಸರಾ ವಸ್ತುಪ್ರದರ್ಶನದ ಸಮೀಪದ ಮೈದಾನದಲ್ಲಿ ಟೆಂಟ್ ಹಾಕಿಕೊಂಡು ವಾಸವಿತ್ತು. ಹಬ್ಬದ ನೈಜ ಸನ್ನಿವೇಶದ ನಡುವೆ, ರಾತ್ರಿ ವೇಳೆ ಬಾಲಕಿ ತಾಯಿ-ತಂದೆಯೊಂದಿಗೆ ಮಲಗಿದ್ದಾಗ ಆರೋಪಿ ಕಾರ್ತಿಕ್ ಆಕೆಯನ್ನು ಅಪಹರಿಸಿದ್ದ. ನಂತರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಭೀಕರವಾಗಿ ಕೊಲೆ ಮಾಡಿದ್ದ. ಮರುದಿನ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ರಾಜ್ಯಾದ್ಯಂತ ಜನಪ್ರತಿಭಟನೆ ಮತ್ತು ಆಕ್ರೋಶ ಭುಗಿಲೆದ್ದಿತ್ತು.
ತ್ವರಿತ ತನಿಖೆ, ನ್ಯಾಯದಾನ
ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಸಿದ್ದಲಿಂಗಪುರ ನಿವಾಸಿ, ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮೈಸೂರಿನ ತ್ವರಿತ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ್ ಪಿ. ವಘಾಡೆ ಅವರು ಕಳೆದ ಒಂದು ವರ್ಷದಿಂದ ಈ ಪ್ರಕರಣದ ವಿಚಾರಣೆ ನಡೆಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಕೆ.ಬಿ. ಜಯಂತಿ ಅವರು ಸಾಕ್ಷ್ಯಾಧಾರಗಳನ್ನು ಮಂಡಿಸಿದರು.
ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಧೀಶರು ಅತ್ಯಂತ ಕಠಿಣವಾದ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಈ ಪ್ರಕರಣವು ಬಾಲಕಿಯರ ರಕ್ಷಣೆ ಮತ್ತು ಇಂತಹ ಅಮಾನವೀಯ ಕೃತ್ಯ ಎಸಗುವವರಿಗೆ ಕಾನೂನಿನ ಭಯ ಹುಟ್ಟಿಸುವ ನಿಟ್ಟಿನಲ್ಲಿ ಮೈಲಿಗಲ್ಲಾಗಿದೆ. ನೊಂದ ಕುಟುಂಬಕ್ಕೆ ಕನಿಷ್ಠ ಮಟ್ಟದ ನ್ಯಾಯ ಸಿಕ್ಕಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

