ಸೆನ್ಸಾರ್ ಆಧಾರಿತ ನೀರಾವರಿ ಪದ್ಧತಿಯ ಅಳವಡಿಕೆ ಅಗತ್ಯ: ಸಚಿವ ನರೇಂದ್ರ ಸ್ವಾಮಿ
x

ಸೆನ್ಸಾರ್ ಆಧಾರಿತ ನೀರಾವರಿ ಪದ್ಧತಿಯ ಅಳವಡಿಕೆ ಅಗತ್ಯ: ಸಚಿವ ನರೇಂದ್ರ ಸ್ವಾಮಿ

ಪ್ರಸ್ತುತ ಮಳೆಯ ಅನಿಶ್ಚಿತತೆ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳ ಆಯ್ಕೆ ರೈತರಿಗೆ ಅತ್ಯಗತ್ಯ ಎಂದು ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.


Click the Play button to hear this message in audio format

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಅಂಗವಾಗಿ, ದಸರಾ ವಸ್ತು ಪ್ರದರ್ಶನದಲ್ಲಿ ಕೃಷಿ ಇಲಾಖೆಯು ಆಯೋಜಿಸಿರುವ ಕೃಷಿ ಪ್ರದರ್ಶನವು ರೈತರ ಪಾಲಿಗೆ ಜ್ಞಾನದ ಆಗರವಾಗಿದೆ. ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಉದ್ಘಾಟಿಸಿದ ಈ ಪ್ರದರ್ಶನವು, ರೈತರಿಗೆ ಆಧುನಿಕ ಬೇಸಾಯ ಪದ್ಧತಿಗಳು, ಅಲ್ಪಾವಧಿ ತಳಿಗಳ ಆಯ್ಕೆ ಮತ್ತು ತಾಂತ್ರಿಕತೆಯ ಅಳವಡಿಕೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡುತ್ತಿದೆ.

ಪ್ರಸ್ತುತ ಮಳೆಯ ಅನಿಶ್ಚಿತತೆ ಮತ್ತು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳ ಆಯ್ಕೆ ರೈತರಿಗೆ ಅತ್ಯಗತ್ಯ. ಈ ಪ್ರದರ್ಶನದಲ್ಲಿ ವಿವಿಧ ಬೆಳೆಗಳ ಅಲ್ಪಾವಧಿ ತಳಿಗಳನ್ನು ಪ್ರಾಯೋಗಿಕವಾಗಿ ತೋರಿಸಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾದ ಸೂರ್ಯಕಾಂತಿಯ ಕೆಬಿಎಸ್ ಎಚ್-90 ತಳಿಯು ಕೇವಲ 82 ದಿನಗಳಲ್ಲಿ 7.5 ಕ್ವಿಂಟಲ್ ಇಳುವರಿ ನೀಡುತ್ತದೆ. ವಿಶೇಷವಾಗಿ ಇದು ಬುಜು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಹರಳು ಬಿಸಿಎಚ್-162 ತಳಿಯು 100 ದಿನಗಳಲ್ಲಿ ಫಸಲು ನೀಡಲಿದ್ದು, ಎಕರೆಗೆ 6-8 ಕ್ವಿಂಟಲ್ ಇಳುವರಿ ಸಿಗುತ್ತದೆ. 100-105 ದಿನಗಳ ಅವಧಿಯ ರಾಗಿ ತಳಿಗಳು ನೀರಾವರಿಯಲ್ಲಿ 20-22 ಕ್ವಿಂಟಲ್ ಮತ್ತು ಖುಷ್ಕಿಯಲ್ಲಿ 17-19 ಕ್ವಿಂಟಲ್ ಇಳುವರಿ ನೀಡಬಲ್ಲವು. ಇಂದಾಫ್-9 ತಳಿಯು 95-100 ದಿನಗಳಲ್ಲೇ ಫಸಲು ನೀಡುವ ಸಾಮರ್ಥ್ಯ ಹೊಂದಿದೆ. ಭತ್ತದ ಕೆ.ಎಂ.ಪಿ-220 ತಳಿ 120-125 ದಿನಗಳಲ್ಲಿ 25-30 ಕ್ವಿಂಟಲ್ ಇಳುವರಿ ನೀಡಲಿದ್ದು, ಇದು ಶ್ರೀ ಪದ್ಧತಿಗೆ ಅತ್ಯಂತ ಸೂಕ್ತವಾಗಿದೆ. ಉದ್ದು ಎಲ್.ಜಿ.ಬಿ-791 ತಳಿಯು 75-80 ದಿನಗಳಲ್ಲಿ ಇಳುವರಿ ನೀಡಲಿದ್ದು, ರೋಗ ನಿರೋಧಕ ಗುಣ ಹೊಂದಿದೆ.

ಸಾವಯವ ಕೃಷಿ - ಮಣ್ಣಿನ ಆರೋಗ್ಯಕ್ಕೆ ಒತ್ತು

ರಾಸಾಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಈ ಕಾಲದಲ್ಲಿ, ಸಾವಯವ ಪದ್ಧತಿಯೇ ಉಳಿವಿನ ದಾರಿ ಎಂಬುದನ್ನು ಈ ಪ್ರದರ್ಶನ ಎತ್ತಿ ತೋರಿಸಿದೆ. ಡಯಾಂಜಾ ಮತ್ತು ಸಣಬಿನಂತಹ ಹಸಿರೆಲೆ ಗೊಬ್ಬರಗಳನ್ನು ಭೂಮಿಗೆ ಸೇರಿಸುವ ವಿಧಾನ, ದೇಸಿ ಹಸುವಿನ ಸಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಬಳಸಿ ತಯಾರಿಸುವ ಜೀವಾಮೃತದ ಮಹತ್ವವನ್ನು ವಿವರಿಸಲಾಗಿದೆ. ಜತೆಗೆ, ಬೇವಿನ ಸೊಪ್ಪು, ಸಗಣಿ ಮತ್ತು ಗಂಜಲದಿಂದ ತಯಾರಿಸುವ 'ನೀಮಾಸ್ತ್ರ'ವು ಗಿಡಹೇನು, ಬಿಳಿ ನೊಣದಂತಹ ಕೀಟಗಳನ್ನು ನಿಯಂತ್ರಿಸುವಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗಿದೆ.

ಡಿಜಿಟಲ್ ಕೃಷಿ - ಸೆನ್ಸಾರ್ ಆಧಾರಿತ ನೀರಾವರಿ

ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದರೆ ಸೆನ್ಸಾರ್ ಆಧಾರಿತ ನೀರಾವರಿ ಪದ್ಧತಿ. ಇದು ತಂತ್ರಜ್ಞಾನ ಕೃಷಿಗೆ ಹೇಗೆ ಸಾಥ್ ನೀಡುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಮಣ್ಣಿನಲ್ಲಿರುವ ತೇವಾಂಶವನ್ನು ಸೆನ್ಸಾರ್‌ಗಳು ಪತ್ತೆಹಚ್ಚಿ, ಅದಕ್ಕೆ ಅನುಗುಣವಾಗಿ ನೀರಾವರಿ ಯಂತ್ರಗಳಿಗೆ ಸಿಗ್ನಲ್ ಕಳುಹಿಸುತ್ತವೆ. ಅಗತ್ಯವಿದ್ದಾಗ ಮಾತ್ರ ನೀರು ಹರಿಯುತ್ತದೆ, ಇಲ್ಲದಿದ್ದರೆ ಪಂಪ್ ಆಫ್ ಆಗುತ್ತದೆ. ಇದರಿಂದ ಶೇ. 30-40ರಷ್ಟು ನೀರಿನ ಉಳಿತಾಯವಾಗುವುದಲ್ಲದೆ, ರೈತರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕ ಹೊಲದ ನೀರಾವರಿ ವ್ಯವಸ್ಥೆಯನ್ನು ನಿರ್ವಹಿಸಬಹುದಾಗಿದೆ. ಪ್ರದರ್ಶನದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ಪ್ರದರ್ಶಿಸಲಾಗಿದ್ದು, ಇವುಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಆಗುವ ಧನಾತ್ಮಕ ಪರಿಣಾಮಗಳ ಕುರಿತು ಇಲಾಖಾ ಸಿಬ್ಬಂದಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಇದು ಕೇವಲ ರೈತರಿಗೆ ಮಾತ್ರವಲ್ಲದೆ, ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರಿಗೂ ಉಪಯುಕ್ತವಾಗಿದೆ.

ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಈ ಪ್ರದರ್ಶನವನ್ನು ವೀಕ್ಷಿಸಿ, ರೈತರು ಸಂಪ್ರದಾಯಬದ್ಧ ಕೃಷಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಣ್ಣಿನ ಗುಣಧರ್ಮ ಮತ್ತು ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

Read More
Next Story