
ಕೆಎಸ್‌ಐಸಿಯಲ್ಲಿ ತಯಾರಾದ ರೇಷ್ಮೆ ಸೀರೆಗಳು
ಮೈಸೂರು ಸಿಲ್ಕ್ ಕಾರ್ಖಾನೆ ಮುಚ್ಚಲ್ಲ, ಜಾಗ ಮಾರಲ್ಲ; ಸಚಿವರ ಸ್ಪಷ್ಟನೆ
ಪ್ರತಿ ದಿನ 350 ರಿಂದ 400 ಸೀರೆ ತಯಾರಿಸಲಾಗುತ್ತಿದೆ. ಸೀರೆಗಳಿಗೆ ಬಹಳ ಬೇಡಿಕೆ ಇದೆ. ಡ್ಯಾಮೇಜ್ ಇದ್ದರೆ ಮಹಿಳೆಯರು ಸೀರೆಯನ್ನು ಖರೀದಿ ಮಾಡುವುದಿಲ್ಲ ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.ಪ
ರಾಜ್ಯದ ಸಾಂಸ್ಕೃತಿಕ ಪ್ರತೀಕವಾಗಿರುವ ಮೈಸೂರು ಸಿಲ್ಕ್ ಸೀರೆಗಳನ್ನು ನೇಯ್ಗೆ ಮಾಡುವ ಟಿ.ನರಸೀಪುರದ ಕಾರ್ಖಾನೆ ಸ್ಥಗಿತಗೊಳಿಸಲಾಗುವುದು ಎಂಬ ವದಂತಿ ನಡುವೆಯೇ ಸೀರೆಗಿರುವ ಬೇಡಿಕೆ ಹಾಗೂ ಲಾಭದ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳ ಶಾಸಕರು ಸರ್ಕಾರದ ಗಮನ ಸೆಳೆದರು.
ಸೋಮವಾರ(ಮಾ.9) ಆರಂಭವಾದ ಕಲಾಪದಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಹಾಗೂ ಜೆಡಿಎಸ್ ಸಭಾನಾಯಕ ಸುರೇಶ್ ಬಾಬು ಮಾತನಾಡಿ, ಕರ್ನಾಟಕ ರೇಷ್ಮೆ ಉದ್ಯಮ ನಿಗಮದಿಂದ ಸಿದ್ದವಾಗುವ ಹಾಗೂ ಮಾರಾಟವಾದ ಸೀರೆಗಳೆಷ್ಟು, ಅದರಿಂದ ಬಂದ ಲಾಭವೆಷ್ಟು, ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸೀರೆಗಳು ಸಿಗುತ್ತಿಲ್ಲ ಎಂಬ ಆರೋಪವೂ ಇದೆ ಎಂದರು.
ಜಾಗ ಮಾರಾಟಕ್ಕಿಲ್ಲ
ಇದಕ್ಕೆ ಉತ್ತರಿಸಿದ ಸಚಿವ ಕೆ.ವೆಂಕಟೇಶ್, ಪ್ರತಿ ದಿನ 350 ರಿಂದ 400 ಸೀರೆ ತಯಾರಿಸಲಾಗುತ್ತಿದೆ. ಸೀರೆಗಳಿಗೆ ಬಹಳ ಬೇಡಿಕೆ ಇದೆ. ಡ್ಯಾಮೇಜ್ ಇದ್ದರೆ ಮಹಿಳೆಯರು ಸೀರೆಯನ್ನು ಖರೀದಿ ಮಾಡುವುದಿಲ್ಲ. ಹಾಗಾಗಿ ಮಗ್ಗದ ಮೂಲಕ ನಿಧಾನವಾಗಿ ಗುಣಮಟ್ಟದ ಸೀರೆ ನೇಯಲಾಗುತ್ತಿದೆ. ಅಂಗಡಿಗಳ ಮುಂದೆ ಬೆಳಿಗ್ಗೆಯೇ ಎದ್ದು ಬಂದು ಸರತಿ ಸಾಲಿನಲ್ಲಿ ನಿಲ್ಲುವುದಿಲ್ಲ. ಹೊರ ರಾಜ್ಯ, ವಿದೇಶಗಳಿಂದಲೂ ಬೇಡಿಕೆ ಇದ್ದು, ಆನ್‌ಲೈನ್ ಮೂಲಕ ಸೇವೆ ನಿಲ್ಲಿಸಿ ಸ್ಥಳೀಯರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಟಿ. ನರಸೀಪುರದಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ಬಳಿ ಜಾಗ ಇದೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ಆ ಜಾಗ ಮಾರಾಟಕ್ಕಿಲ್ಲ. ಈ ಅತ್ಯಮೂಲ್ಯ ಜಾಗವನ್ನು ನಾವು ಉಳಿಸುತ್ತೇವೆ ಎಂದು ಸದನದಲ್ಲಿ ಘೋಷಣೆ ಮಾಡಿದರು.
ಕಾರ್ಖಾನೆ ಜಾಗ ಉಳಿಸಿ
ಕಾರ್ಖಾನೆಯಲ್ಲಿ ತರಬೇತಿ ಪಡೆಯುತ್ತಿರುವವರಿಗೆ 3 ಸಾವಿರ ರೂ. ವೇತನ ನೀಡಲಾಗುತ್ತಿದೆ. ಅವರಿಗೆ 8 ಸಾವಿರ ರೂ. ಗೆ ಹೆಚ್ಚಳ ಮಾಡಿ. 12 ಎಕರೆ ಜಾಗದಲ್ಲಿರೋ ಕೆಎಸ್‌ಐಸಿ ಮುಚ್ಚಲು ಹೊರಟಿದ್ದು, ಅದನ್ನ ಮೈದಾನ ಮಾಡಲು ಹೊರಟಿದ್ದಾರೆ. ಸರ್ಕಾರ ಮೊದಲು ಅದನ್ನು ನಿಲ್ಲಿಸಿ, ಕೆಎಸ್‌ಐಸಿ ಅಭಿವೃದ್ಧಿಪಡಿಸಬೇಕು. ಕೆಲವೇ ಕ್ಷಣದಲ್ಲಿ ಸೀರೆಗಳು ಖಾಲಿಯಾಗುತ್ತಿವೆ. ಸರ್ಕಾರಿ ಇಲಾಖೆಗಳು ಲಾಭ ಮಾಡುವುದೇ ಕಡಿಮೆ. ಈ ವೇಳೆ ಉತ್ತಮವಾಗಿರುವ ಕಾರ್ಖಾನೆಯನ್ನು ಮುಚ್ಚಬಾರದು. ಅದನ್ನ ಉಳಿಸಬೇಕು ಎಂದು ಆಗ್ರಹಿಸಿದರು.
ಕೆಎಸ್‌ಐಸಿ ಮುಚ್ಚದಂತೆ ಸಚಿವರ ಮನವಿ
ಸಚಿವ ಬೈರತಿ ಸುರೇಶ್ ಮಾತನಾಡಿ, ವಿದೇಶದಲ್ಲಿ ನಮ್ಮ ಸಂಬಂಧಿಕರು ಕೂಡ ಸೀರೆ ಕೇಳುತ್ತಿದ್ದಾರೆ. ಅಲ್ಲಿಂದಲೇ ರೇಷ್ಮೆ ಸೀರೆಗಾಗಿ ಬೇಡಿಕೆ ಇಡುತ್ತಿದ್ದಾರೆ. ನೀವು ಎಷ್ಟಾದರೂ ವೇತನ ಹೆಚ್ಚಳ ಮಾಡಿ, ಆದರೆ, ಕೆಎಸ್‌ಐಸಿ ಮುಚ್ಚಬಾರದು ಎಂದು ನನ್ನ ಮನವಿ ಎಂದರು.
ಏನಿದು ವಿವಾದ ?
ಟಿ. ನರಸೀಪುರದಲ್ಲಿ 13.5 ಎಕರೆಯಷ್ಟು ಭೂಮಿ ಹೊಂದಿರುವ ಕೆಎಸ್‌ಐಸಿ ಆವರಣದಲ್ಲಿ ಫಿಲೇಚರ್ ಘಟಕವಿದೆ. ಇದೇ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಸಂಬಂಧ ಆವರಣದ 5 ಎಕರೆ ಜಮೀನನ್ನು ಕಂದಾಯ ಇಲಾಖೆಯು ಇತ್ತೀಚೆಗಷ್ಟೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದೆ. ಆದರೆ, ಈ 5 ಎಕರೆ ಜಾಗವು ದಟ್ಟವಾದ ಮರಗಿಡಗಳಿಂದ ಕೂಡಿದ್ದು, ಕಿರು ಅರಣ್ಯದಂತಿದೆ. ಹಚ್ಚ ಹಸಿರಿನ ಭೂಮಿಯಲ್ಲಿರುವ ಕೆಎಸ್‌ಐಸಿ ಘಟಕದ ಆವರಣದೊಳಗಿನ 500ಕ್ಕೂ ಹೆಚ್ಚು ಮರಗಳನ್ನು ಕಡಿದು ಕ್ರೀಡಾಂಗಣ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಪರಿಸರಪ್ರೇಮಿಗಳು ಹೋರಾಟ ಆರಂಭಿಸಿದ್ದಾರೆ.
ಈ ಘಟಕದಲ್ಲಿ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಕೆಎಸ್‌ಐಸಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಮರಗಳಿಗೆ ಕೊಡಲಿ ಪೆಟ್ಟು ಬಿದ್ದರೆ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಜೊತೆಗೆ ಇಲ್ಲಿನ 40ಕ್ಕೂ ಹೆಚ್ಚು ಪಕ್ಷಿ ಸಂಕುಲಗಳು ಮತ್ತು 30ಕ್ಕೂ ಹೆಚ್ಚು ತಳಿಯ ಚಿಟ್ಟೆಗಳ ಆವಾಸಸ್ಥಾನವನ್ನೇ ಕಸಿದುಕೊಂಡಂತಾಗುತ್ತದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼ ವಿಶೇಷ ವರದಿ ಪ್ರಕಟಿಸಿತ್ತು.
Mysore Silk: ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ; ಭಾರೀ ವಿರೋಧ, ಮರಗಳ ರಕ್ಷಣೆಗೆ ಒತ್ತಾಯ

