
Congress Rift| ಒಂದು ಕುಟುಂಬಕ್ಕಾಗಿ ಅಹಿಂದ ಬಲಿ; ಕಾಂಗ್ರೆಸ್ ವಿರುದ್ಧ ಮುಸ್ಲಿಂ ಮುಖಂಡರ ಆಕ್ರೋಶ
ಕಾಂಗ್ರೆಸ್ ನಾಯಕರಾದ ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ವಿರುದ್ಧದ ಕ್ರಮಕ್ಕೆ ಮುಸ್ಲಿಂ ಸಮುದಾಯ ಕಿಡಿಕಾರಿದೆ. ಒಂದು ಕುಟುಂಬಕ್ಕಾಗಿ ಸಮುದಾಯದ ವಿರೋಧ ಕಟ್ಟಿಕೊಳ್ಳುತ್ತಿರುವ ನಡೆ ಸ್ವೀಕಾರ್ಹವಲ್ಲ.
ದಾವಣಗೆರೆ ದಕ್ಷಿಣ ಉಪಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರ ಪಕ್ಷದ ಮುಸ್ಲಿಂ ಮುಖಂಡರು ಪ್ರಚಾರ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ತಲೆದಂಡ ಮಾಡಿರುವುದಕ್ಕೆ ಮುಸ್ಲಿಂ ಸಮುದಾಯ ಕೆಂಡಮಂಡಲವಾಗಿದೆ. ಮುಸ್ಲಿಂ ಮುಖಂಡರ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ಕ್ರಮಕ್ಕೆ ಜಮೀಯತ್ ಉಲಮಾ ಹಿಂದ್ ರಾಜ್ಯ ಘಟಕದ ಅಧ್ಯಕ್ಷ ಮುಫ್ಟಿ ಇಫ್ತಿಕಾರ್ ಅಹ್ಮದ್ ಖಾಸ್ಮಿ ಹಾಗೂ ಇತರ ಮುಸ್ಲಿಂ ಧಾರ್ಮಿಕ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷಗಳಲ್ಲಿ ಶಿಸ್ತುಕ್ರಮ ಸಾಮಾನ್ಯ. ಆದರೆ, ಮುಸ್ಲಿಂ ನಾಯಕರ ವಿರುದ್ಧ ಯಾವುದೇ ನೋಟಿಸ್ ನೀಡದೇ, ವಿವರಣೆ ಪಡೆಯದೆ ಏಕಾಏಕಿ ಕ್ರಮ ಕೈಗೊಂಡಿರುವುದು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ವೈಫಲ್ಯವನ್ನು ತೋರಿಸುತ್ತದೆ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನದಿಂದ ಅಬ್ದುಲ್ ಜಬ್ಬಾರ್ ರಾಜೀನಾಮೆ ಪಡೆದ ರೀತಿ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಅವರನ್ನು ವಜಾಗೊಳಿಸಿದ ನಿರ್ಧಾರವು ಸಂಶಯದ ಆಧಾರಿತ ಸೇಡು ಎಂಬಂತೆ ಭಾಸವಾಗುತ್ತಿದೆ. ಸಮುದಾಯದ ಪ್ರಬಲ ನಾಯಕರನ್ನು ಹೀಗೆ ಹತ್ತಿಕ್ಕುವುದು ಇಡೀ ಸಮುದಾಯಕ್ಕೆ ನೀಡುವ ತಪ್ಪು ಸಂದೇಶವಾಗಿದೆ ಎಂದು ಉಲಮಾ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಡೆ ಸ್ವೀಕಾರ್ಹವಲ್ಲ
ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ ಮಾತನಾಡಿ, ಒಂದು ಕುಟುಂಬಕ್ಕಾಗಿ ಅಹಿಂದ ಸಮುದಾಯದ ವಿರೋಧ ಕಟ್ಟಿಕೊಳ್ಳುತ್ತಿರುವ ಕಾಂಗ್ರೆಸ್ ನಡೆ ಸ್ವೀಕಾರ್ಹವಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ನೊಟೀಸ್ ಜಾರಿ ಮಾಡಿ ಸ್ಪಷ್ಟೀಕರಣ ಪಡೆಯಬೇಕು. ಆದರೆ, ಏಕಾಏಕಿ ಕ್ರಮ ಕೈಗೊಳ್ಳಲಾಗಿದೆ. ಅಬ್ದುಲ್ ಜಬ್ಬಾರ್ ಅವರಿಂದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಹುದ್ದೆಯನ್ನು ಕಿತ್ತುಕೊಳ್ಳಲಾಯಿತು. ಇನ್ನು, ಬಾಗಲಕೋಟೆ ಉಪಚುನಾವಣೆಯ ಹೊಣೆಯನ್ನು ನಸೀರ್ ಅಹ್ಮದ್ ಅವರಿಗೆ ನೀಡಲಾಗಿತ್ತು. ಆದರೆ ಯಾವ ಕಾರಣಕ್ಕಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಮಾಡಲಾಯಿತು ಎಂಬುದು ಅರ್ಥವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯ ಬಿ.ವೈ. ರಾಘವೇಂದ್ರ ಪರ ಬಹಿರಂಗವಾಗಿಯೇ ಪ್ರಚಾರ ಮಾಡಿದ್ದರು ಎಂಬ ಆರೋಪವಿದೆ. ಆದರೂ, ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಜ್ಯ ಘಟಕ ಅವರ ವಿರುದ್ಧ ತುಟಿ ಬಿಚ್ಚಿಲ್ಲ. ಇದಕ್ಕೆ ಪ್ರತಿಯಾಗಿ, ಕೇವಲ ಅನುಮಾನದ ಮೇಲೆ ಮುಸ್ಲಿಂ ನಾಯಕರನ್ನು ಪಕ್ಷದಿಂದ ಹೊರಹಾಕುತ್ತಿರುವುದು ಕಾಂಗ್ರೆಸ್‌ನ ದ್ವಂದ್ವ ನಿಲುವನ್ನು ಎತ್ತಿ ತೋರಿಸುತ್ತದೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಹಿಡಿತ ಎಷ್ಟಿದೆ ಎಂದರೆ, ಅಲ್ಲಿನ ಶಾಸಕ ಸ್ಥಾನ, ಸಂಸದ ಸ್ಥಾನ ಮತ್ತು ಸಚಿವ ಸ್ಥಾನ ಎಲ್ಲವೂ ಒಂದೇ ಕುಟುಂಬದ ಪಾಲಾಗಿದೆ. 80 ಸಾವಿರ ಮುಸ್ಲಿಂ ಮತಗಳಿರುವ ಕ್ಷೇತ್ರದಲ್ಲಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನಿರಾಕರಿಸಿ, ಮತ್ತೆ ಶಾಮನೂರು ಅವರ ಮೊಮ್ಮಗನಿಗೆ ಟಿಕೆಟ್ ನೀಡಿರುವುದು ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ನೀಡುತ್ತಿರುವ ಆದ್ಯತೆಯನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ರಾಜಕಾರಣಕ್ಕೆ ಪೆಟ್ಟು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಗುರುತಿಸಿಕೊಂಡವರು. ಆದರೆ, ಇಂದು ಅದೇ ಅಹಿಂದ ವರ್ಗದ ಪ್ರಮುಖ ಭಾಗವಾದ ಮುಸ್ಲಿಮರು ತಮ್ಮ ಹಕ್ಕುಗಳಿಗಾಗಿ ಬೀದಿಗೆ ಇಳಿಯುವ ಪರಿಸ್ಥಿತಿ ಬಂದಿದೆ. ನಮ್ಮ ಸಮುದಾಯದ ಮತ ಬೇಕು, ಆದರೆ ನಾಯಕತ್ವ ಬೇಡ ಎನ್ನುವ ಕಾಂಗ್ರೆಸ್ ಧೋರಣೆಯು ಸಮುದಾಯದ ಯುವ ನಾಯಕರಲ್ಲಿ ಭ್ರಮನಿರಸನ ಉಂಟುಮಾಡುತ್ತಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದ ನಾಯಕರನ್ನೇ ಬಲಿಪಶು ಮಾಡುತ್ತಿರುವುದು ಕಾಂಗ್ರೆಸ್‌ಗೆ ದೀರ್ಘಕಾಲದಲ್ಲಿ ಮುಳುವಾಗಬಹುದು. ಬಾಗಲಕೋಟೆಯಲ್ಲಿ ಎಚ್.ವೈ. ಮೇಟಿ ಪುತ್ರನಿಗೆ ಟಿಕೆಟ್ ನೀಡಿರುವುದು ಕೂಡ ಕಾಂಗ್ರೆಸ್ ಹಳೆಯ ಸಾಂಪ್ರದಾಯಿಕ ಪರಿವಾರ ರಾಜಕಾರಣಕ್ಕೇ ಅಂಟಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಮನವೊಲಿಕೆ ಮಾಡುವತ್ತ ಗಮನಹರಿಸಿ
ಮೌಲಾನಾ ಖಾರಿ ಝುಲ್ಫಿಕರ್ ಅಹ್ಮದ್ ನೂರಿ ಮಾತನಾಡಿ, ದಾವಣಗೆರೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ನಿಲ್ಲಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅಶ್ವಾಸನೆ ನೀಡಿದ್ದರು. ಆದರೆ, ಟಿಕೆಟ್ ನೀಡಲಿಲ್ಲ. ಮುಸ್ಲಿಮರ ಅಸಮಾಧಾನ ಕಾಂಗ್ರೆಸ್ ಪಾಲಿಗೆ ಒಳ್ಳೆಯದಲ್ಲ. ಇದೇ ರೀತಿ ಪರಿಸ್ಥಿತಿ ಇದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೊಳಗಾಗಲಿದೆ. ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹ್ಮದ್ ಅವರ ಮನವೊಲಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ಗೆ ಸಂಕಷ್ಟವಾಗಬಹುದು
ಮುಸ್ಲಿಂ ಮುಖಂಡ ಮೌಲಾನಾ ಝೈನುಲ್ ಆಬಿದಿನ್ ಮಾತನಾಡಿ, ಉತ್ತರ ಪ್ರದೇಶ, ದೆಹಲಿ ಮತ್ತು ಗುಜರಾತ್‌ಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದೇ ಕಾರಣ. ಕರ್ನಾಟಕದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಬಲಿಷ್ಠವಾಗಿದೆ. ಆದರೆ, ಸಮುದಾಯದ ಬೇಡಿಕೆಗಳನ್ನು ಮತ್ತು ನಾಯಕರ ಗೌರವವನ್ನು ಕಡೆಗಣಿಸಿದರೆ, ಅಲ್ಲಿನ ಪರಿಸ್ಥಿತಿಯೇ ಇಲ್ಲಿಯೂ ಮರುಕಳಿಸಬಹುದು. ಅಲ್ಪಸಂಖ್ಯಾತರು ಪರ್ಯಾಯಗಳತ್ತ ಮುಖ ಮಾಡಿದರೆ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವುದು ಅಸಾಧ್ಯವಾಗುತ್ತದೆ. ಜನತಾ ನ್ಯಾಯಾಲಯ ಎಲ್ಲವನ್ನೂ ನೋಡುತ್ತಿದೆ. ಕಾಂಗ್ರೆಸ್ ತನ್ನನ್ನು ತಾನು ಜಾತ್ಯತೀತ ಪಕ್ಷ ಎಂದು ಕರೆದುಕೊಳ್ಳುವಾಗ, ಎಲ್ಲಾ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕು. ಒಂದು ಪ್ರಭಾವಿ ಲಿಂಗಾಯತ ಕುಟುಂಬವನ್ನು ತೃಪ್ತಿಪಡಿಸಲು ಇಡೀ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದು ಅಹಿಂದ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

