x

ಜಪಾನ್ Vs ಭಾರತ: ಬುಲೆಟ್ ರೈಲು ವಿವಾದ; ಜಪಾನ್ ಆರೋಪ, ಭಾರತದ ತಿರುಗೇಟು! ನಿಜಕ್ಕೂ ತಪ್ಪು ಯಾರದು?

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬ ಆರೋಪಕ್ಕೆ ಭಾರತ ಸ್ಪಷ್ಟನೆ ನೀಡಿದ್ದು, 2027ರ ವೇಳೆಗೆ ಮೊದಲ ಹಂತದ ಹೈ-ಸ್ಪೀಡ್ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದೆ.


Click the Play button to hear this message in audio format

ಭಾರತದ ಬಹುನಿರೀಕ್ಷಿತ ಮುಂಬೈ ಮತ್ತು ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಗೆ ಜಪಾನ್‌ನ ಸಹಕಾರ ಸಂಸ್ಥೆಯಾದ ‘ಜೈಕಾ’ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷ ಕೋಟಿಗೂ ಅಧಿಕ ಹಣವನ್ನು ಸಾಲವಾಗಿ ನೀಡಿದ್ದು, ಜಪಾನ್‌ನ ತಂತ್ರಜ್ಞಾನದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.

ಆದರೆ, ಇತ್ತೀಚೆಗೆ ಜಪಾನ್‌ನ ಮಾಜಿ ನ್ಯಾಯಾಂಗ ಸಚಿವರಾದ ಹಿಡಕಿ ಮಕಿಹಾರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಹೊಸ ವಿವಾದವನ್ನು ಹುಟ್ಟುಹಾಕಿದೆ. ಭಾರತೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ವಿಳಂಬವಾಗುತ್ತಿದೆ ಮತ್ತು ಭಾರತವು ಈ ಯೋಜನೆಯಿಂದ ದೂರ ಸರಿಯುತ್ತಿದೆ ಎಂದು ಅವರು ಆರೋಪಿಸಿದ್ದರು.

ಜಪಾನ್ ಮಾಜಿ ಸಚಿವರ ಈ ಹೇಳಿಕೆಗೆ ಭಾರತ ಸರ್ಕಾರದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಈ ಹೇಳಿಕೆಯು ಮಕಿಹಾರ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ವಾಸ್ತವಕ್ಕೆ ದೂರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಪಾನ್ ನೀಡಲಿರುವ ಅತ್ಯಾಧುನಿಕ ‘ಶಿಂಕಾನ್ಸೆನ್ E20 ಸರಣಿಯ ಬುಲೆಟ್ ರೈಲುಗಳು ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಜಪಾನ್‌ನಲ್ಲಿಯೇ ಅವು ೨೦೩೦ ರ ವೇಳೆಗೆ ಪೂರ್ಣಗೊಳ್ಳಲಿವೆ. ಆದರೆ, ಭಾರತವು ಈ ಯೋಜನೆಯ ಮೊದಲ ಹಂತವನ್ನು 2027 ರೊಳಗೇ ಆರಂಭಿಸಲು ಸಜ್ಜಾಗಿದೆ. ಹೀಗಾಗಿ 2030 ರಲ್ಲಿ ಸಿಗುವ ರೈಲುಗಳಿಗಾಗಿ ಕಾಯುವ ಬದಲು, ಅಂತರರಾಷ್ಟ್ರೀಯ ಗುಣಮಟ್ಟದ ಭಾರತೀಯ ಹೈ-ಸ್ಪೀಡ್ ರೈಲು ಮತ್ತು ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಮೊದಲೇ ಆರಂಭಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಭಾರತ ಸರ್ಕಾರ ತಿಳಿಸಿದೆ.

2012 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ನ ಅಂದಿನ ಪ್ರಧಾನಿ ಶಿಂಜೋ ಅಬೆ ಅವರು ಚಾಲನೆ ನೀಡಿದ್ದ ಈ ಯೋಜನೆಗೆ ಆರಂಭದಿಂದಲೂ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಸರ ಸಮಸ್ಯೆಗಳು ದೊಡ್ಡ ಸವಾಲಾಗಿದ್ದವು. ಮಹಾರಾಷ್ಟ್ರ ಮತ್ತು ಗುಜರಾತ್‌ನ ಹಲವು ಭಾಗಗಳಲ್ಲಿ ರೈತರು ಹಾಗೂ ಆದಿವಾಸಿಗಳ ಪ್ರತಿಭಟನೆಯಿಂದಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಸದ್ಯ ಈ ಯೋಜನೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಭಾರತದಲ್ಲಿ ಹೈ-ಸ್ಪೀಡ್ ರೈಲು ಸಂಚಾರದ ಕನಸು ನನಸಾಗುವ ಹಂತದಲ್ಲಿದೆ. ಮತ್ತೊಂದೆಡೆ, ಕರ್ನಾಟಕದಲ್ಲೂ ಬೆಂಗಳೂರು-ಚೆನ್ನೈ ಮತ್ತು ಮೈಸೂರು ನಡುವೆ ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಚಲಿಸುವ ಅತಿವೇಗದ ರೈಲು ಯೋಜನೆಗೆ ಕಾರ್ಯಸಾಧ್ಯತಾ ವರದಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳು ಚಾಲನೆ ಪಡೆದುಕೊಂಡಿದ್ದು, ಇಲ್ಲೂ ಕೂಡ ರೈತರ ವಿರೋಧದ ನಡುವೆಯೇ ಪ್ರಾಥಮಿಕ ಹಂತದ ಕೆಲಸಗಳು ಪ್ರಗತಿಯಲ್ಲಿವೆ.

ಈ ಬಗ್ಗೆ ದ ಫೆಡರಲ್‌ ಕರ್ನಾಟಕದ ʼಫೋಕಸ್‌ ಪುಲ್ಲರ್‌ʼ ವಿಶೇಷ ಕಾರ್ಯಕ್ರಮದಲ್ಲಿ ಈ ಬಗ್ಗೆ ವಿವರವಾಗಿ ವಿಶ್ಲೇಷಣೆ ಮಾಡಲಾಗಿದೆ.

Read More
Next Story