ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ : ಶಾಸಕಿ ನಯನಾ ಮೋಟಮ್ಮ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು
x

ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ : ಶಾಸಕಿ ನಯನಾ ಮೋಟಮ್ಮ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು

ಶಾಸಕಿ ನಯನಾ ಮೋಟಮ್ಮ ಅವರು ಹಲವು ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಸ್ವಪಕ್ಷಿಯರಲ್ಲೇ ಅಸಮಾಧಾನ ಸ್ಫೋಟಗೊಂಡಿದೆ.

ಶಾಸಕಿ ನಯನಾ ಮೋಟಮ್ಮ ಅವರ ಕಾರ್ಯವೈಖರಿ ವಿರುದ್ಧ ಮಾಜಿ‌ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಕುಮಾರಸ್ವಾಮಿ ಸೇರಿ 45ಕ್ಕೂ ಹೆಚ್ಚು ಹಿರಿಯ ಮುಖಂಡರು ಕೆಪಿಸಿಸಿ ಅಧ್ಯಕ್ಷರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಸುದೀರ್ಘ ದೂರಿನ ಪತ್ರದಲ್ಲಿ 16 ಅಂಶಗಳನ್ನು ಉಲ್ಲೇಖಿಸಲಾಗಿದೆ.

ಮೂಲ ಕಾಂಗ್ರೆಸ್ಸಿಗರ ಕಡೆಗಣನೆ?

ಶಾಸಕಿ ನಯನಾ ಮೋಟಮ್ಮ ಅವರು ಹಲವು ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

2023ರ ವಿಧಾನಸಭಾ ಚುನಾವಣೆ ನಂತರ ಪಕ್ಷಕ್ಕೆ ಸೇರ್ಪಡೆಯಾದ ಆರ್‌ಎಸ್‌ಎಸ್ ಹಾಗೂ ಬಜರಂಗದಳ ಹಿನ್ನೆಲೆಯವರೊಂದಿಗೆ ಶಾಸಕಿ ನಿಕಟ ಸಂಪರ್ಕ ಹೊಂದಿದ್ದು, ತಮ್ಮದೇ ಆದ ಪ್ರತ್ಯೇಕ ‘ಪಟಾಲಂ’ ಕಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆರ್‌ಎಸ್‌ಎಸ್ ಮತ್ತು ಬಜರಂಗದಳದ ಕಾರ್ಯಕರ್ತರೊಂದಿಗೆ ಸೇರಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಸ್ವಾಗತಿಸಿದ್ದಾರೆ ಎಂಬ ಆರೋಪವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಮೂಲ ಕಾಂಗ್ರೆಸಿಗರಿಗೆ ಕ್ಷೇತ್ರದಲ್ಲಿ ಯಾವುದೇ ಮಾನ್ಯತೆ ಹಾಗೂ ಅವಕಾಶ ನೀಡದ ಕಾರಣ, ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ. ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಸಂಘಟನೆಗೆ ಭಾರೀ ಹಿನ್ನಡೆ ತರಲಿದೆ" ಎಂದು ಮೂಡಿಗೆರೆ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಕಚೇರಿಗೂ ಬಾರದ ಶಾಸಕಿ

ಪಕ್ಷದ ಸಾಂಸ್ಥಿಕ ನಿಯಮಗಳ ಉಲ್ಲಂಘನೆ ಹಾಗೂ ಸಮನ್ವಯದ ಕೊರತೆಯ ಬಗ್ಗೆಯೂ ದೂರಿನಲ್ಲಿ ವಿವರಿಸಲಾಗಿದೆ. ನಯನಾ ಮೋಟಮ್ಮ ಅವರು ಶಾಸಕರಾಗಿ ಆಯ್ಕೆಯಾದ ದಿನದಿಂದ ಇಂದಿನವರೆಗೂ ಮೂಡಿಗೆರೆಯ ಅಧಿಕೃತ ಕಾಂಗ್ರೆಸ್ ಕಚೇರಿಗೆ ಕಾಲಿಟ್ಟಿಲ್ಲ. ಯಾವುದೇ ಸಮನ್ವಯ ಸಭೆಗಳನ್ನು ನಡೆಸಿಲ್ಲ. ಕೆಪಿಸಿಸಿ ಕೇಂದ್ರ ಕಚೇರಿಯಿಂದ ಬರುವ ಪ್ರಮುಖ ಸೂಚನೆಗಳನ್ನು ಮತ್ತು ಸಾಂಸ್ಥಿಕ ಸಭೆಗಳನ್ನು ಅವರು ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿದ್ದಾರೆ ಎಂದು ದೂರಲಾಗಿದೆ.

ಶಿಸ್ತುಕ್ರಮಕ್ಕೆ ಹೆಚ್ಚಿದ ಒತ್ತಾಯ

ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಯಾವುದೇ ಅನುಮೋದನೆ ಅಥವಾ ಸಮಾಲೋಚನೆ ನಡೆಸದೆ, ಚುನಾವಣಾ ಆಯೋಗಕ್ಕೆ ನೀಡಬೇಕಾದ ಬಿಎಲ್‌ಎ-2 ನೇಮಕಾತಿ ಪಟ್ಟಿಯನ್ನು ಶಾಸಕರು ಏಕಪಕ್ಷೀಯವಾಗಿ ಸಿದ್ಧಪಡಿಸಿ ಸಲ್ಲಿಸಿದ್ದಾರೆ. ಅಲ್ಲದೆ, ಸ್ಥಳೀಯ ಸಂಘಟನೆಗಳನ್ನು ಬದಿಗೊತ್ತಿ ತಮ್ಮ ವೈಯಕ್ತಿಕ ಹಿಂಬಾಲಕರನ್ನೇ ಹೋಬಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಹಿರಿಯ ನಾಯಕರು ದೂರಿನ ಪಟ್ಟಿಯಲ್ಲಿ ವಿವರಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದು, ಕೆಪಿಸಿಸಿ ಅಧ್ಯಕ್ಷರು ತಕ್ಷಣವೇ ಮಧ್ಯಪ್ರವೇಶಿಸಿ ಶಾಸಕಿಯ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ ಮೂಡಿಗೆರೆ ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಈ ಭಿನ್ನಮತ ಮುಂಬರುವ ದಿನಗಳಲ್ಲಿ ಜಿಲ್ಲಾ ರಾಜಕಾರಣದಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read More
Next Story