ಮುಡಾ ಹಗರಣ: ಬಿ ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟ್‌ಗೆ ಇ.ಡಿ ಅರ್ಜಿ ಸಲ್ಲಿಕೆ
x

ಮುಡಾ ಹಗರಣ: 'ಬಿ' ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟ್‌ಗೆ ಇ.ಡಿ ಅರ್ಜಿ ಸಲ್ಲಿಕೆ

ಲೋಕಾಯುಕ್ತ ತನಿಖಾಧಿಕಾರಿಗಳು ತನಿಖೆಯ ವೇಳೆ ಅನೇಕ ಪ್ರಮುಖ ಅಂಶಗಳನ್ನು ಕಡೆಗಣಿಸಿದ್ದಾರೆ. ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಮಹತ್ವದ ಅಂಶಗಳನ್ನು ಲೋಕಾಯುಕ್ತರು ಗಣನೆಗೆ ತೆಗೆದುಕೊಂಡಿಲ್ಲ.


Click the Play button to hear this message in audio format

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಮೂಲಕ ಕ್ಲೀನ್ ಚೀಟ್ ನೀಡಿತ್ತು. ಆದರೆ, ಈಗ ಜಾರಿ ನಿರ್ದೇಶನಾಲಯ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಈ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಂಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಸೇರಿದ 3 ಎಕರೆ 16 ಗುಂಟೆ ಜಮೀನು ವಿವಾದಕ್ಕೆ ಕಾರಣವಾಗಿದೆ. ಮೈಸೂರಿನ ಕೆಸರೆ ಗ್ರಾಮದ ಈ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿತ್ತು. ಬದಲಿಗೆ, ನಿಯಮಗಳ ಉಲ್ಲಂಘನೆ ಮಾಡಿ, ಆ ಜಾಗದ ಮೌಲ್ಯಕ್ಕಿಂತಲೂ ಹೆಚ್ಚಿನ ಮೌಲ್ಯದ (ಸುಮಾರು 56 ಕೋಟಿ ರೂ.) 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ಈ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರಿನ ಆಧಾರದ ಮೇಲೆ, ರಾಜ್ಯಪಾಲರು ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ಹೋಗಿದ್ದರು. ಆದರೆ ಹೈಕೋರ್ಟ್ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದು, ಪೊಲೀಸ್ ತನಿಖೆಗೆ ಅನುಮತಿ ನೀಡಿತು. ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು, ಮಾಜಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ನ್ಯಾಯಾಲಯ ಈ ವರದಿಯನ್ನು ಅಂಗೀಕರಿಸಿತ್ತು.

ಈಗ ಇ.ಡಿ ಪ್ರವೇಶಿಸಿರುವುದು ಏಕೆ?

ಲೋಕಾಯುಕ್ತದ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದ ಬೆನ್ನಲ್ಲೇ, ಈಗ ಜಾರಿ ನಿರ್ದೇಶನಾಲಯ ಸಹ ಎಂಟ್ರಿ ಕೊಟ್ಟಿದೆ. ಇಡಿ ಪರ ವಾದ ಮಂಡಿಸಿದ ಎಎಸ್‌ಜಿ ಅರವಿಂದ್ ಕಾಮತ್, ಹೈಕೋರ್ಟ್‌ನಲ್ಲಿ ಕಠಿಣ ವಾದಗಳನ್ನು ಮಂಡಿಸಿದ್ದಾರೆ.

ಲೋಕಾಯುಕ್ತ ತನಿಖಾಧಿಕಾರಿಗಳು ತನಿಖೆಯ ವೇಳೆ ಅನೇಕ ಪ್ರಮುಖ ಅಂಶಗಳನ್ನು ಕಡೆಗಣಿಸಿದ್ದಾರೆ. ಇ.ಡಿ ನಡೆಸಿದ ಪ್ರತ್ಯೇಕ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಮಹತ್ವದ ಅಂಶಗಳನ್ನು ಲೋಕಾಯುಕ್ತ ಪೊಲೀಸರು ಗಣನೆಗೆ ತೆಗೆದುಕೊಂಡಿಲ್ಲ. ಈ ಪ್ರಕರಣದಲ್ಲಿ ನಡೆದಿರುವ ಕಾನೂನು ಬಾಹಿರ ಡಿನೋಟಿಫಿಕೇಷನ್ ಮತ್ತು ಭೂ ಪರಿವರ್ತನೆಯ ಬಗ್ಗೆ ಲೋಕಾಯುಕ್ತ ತನಿಖೆ ಸಮರ್ಪಕವಾಗಿಲ್ಲ ಎಂದು ಇ.ಡಿ ವಾದಿಸಿದೆ.

ಪ್ರಕರಣದ ಪ್ರಮುಖ ತಿರುವುಗಳು

ತನಿಖೆ ಮುಕ್ತಾಯಗೊಳಿಸಿ, ಮಾಜಿ ಸಿಎಂಗೆ ಕ್ಲೀನ್ ಚೀಟ್ ನೀಡಲಾಗಿತ್ತು. ವಿಶೇಷ ನ್ಯಾಯಾಲಯ ಬಿ ರಿಪೋರ್ಟ್ ಅಂಗೀಕರಿಸಿದ್ದನ್ನು ರದ್ದುಗೊಳಿಸಬೇಕು ಮತ್ತು ಸ್ವತಂತ್ರ ತನಿಖಾ ಸಂಸ್ಥೆಯಿಂದ ಹೊಸದಾಗಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈಗ ಇ.ಡಿಯೇ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ತನಿಖೆಯ ಲೋಪಗಳನ್ನು ಎತ್ತಿ ತೋರಿಸಿರುವುದು ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಹೆಚ್ಚಿಸುವ ಲಕ್ಷಣಗಳನ್ನು ತೋರಿಸಿದೆ.

ಬುಧವಾರ ವಿಚಾರಣೆ ಮುಂದೂಡಿಕೆ

ಹೈಕೋರ್ಟ್ ಏಕಸದಸ್ಯ ಪೀಠವು ಜಾರಿ ನಿರ್ದೇಶನಾಲಯದ ವಾದವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಂಕೀರ್ಣತೆಯನ್ನು ಗಮನಿಸಿ, ವಿಚಾರಣೆಯನ್ನು ಬುಧವಾರಕ್ಕೆ (ಸೆ.2) ಮುಂದೂಡಲಾಗಿದೆ. ಒಂದು ವೇಳೆ ಹೈಕೋರ್ಟ್, ಇ.ಡಿ ಮಂಡಿಸಿರುವ ವಾದವನ್ನು ಒಪ್ಪಿಕೊಂಡು ಲೋಕಾಯುಕ್ತದ ಬಿ ರಿಪೋರ್ಟ್ ಅನ್ನು ತಿರಸ್ಕರಿಸಿದರೆ ಅಥವಾ ಮರುತನಿಖೆಗೆ ಆದೇಶಿಸಿದರೆ, ಅದು ಮಾಜಿ ಸಿಎಂ ಪಾಲಿಗೆ ದೊಡ್ಡ ರಾಜಕೀಯ ಮತ್ತು ಕಾನೂನು ಸವಾಲಾಗಲಿದೆ.

Read More
Next Story