ಪ್ರಾಕೃತಿಕ ವಿಕೋಪಗಳ ಮೇಲೆ ನಿಗಾ: ಜಿಲ್ಲಾಉಸ್ತುವಾರಿ ಸಚಿವರನ್ನು ನೇಮಿಸಿದ ಸರ್ಕಾರ
x

ಪ್ರಾಕೃತಿಕ ವಿಕೋಪಗಳ ಮೇಲೆ ನಿಗಾ: ಜಿಲ್ಲಾಉಸ್ತುವಾರಿ ಸಚಿವರನ್ನು ನೇಮಿಸಿದ ಸರ್ಕಾರ

ವಿಕೋಪ ಸಂಭವಿಸಿದ ತಕ್ಷಣವೇ ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಅನುದಾನ ಮತ್ತು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಮಾರ್ಗದರ್ಶನ ನೀಡಲು ಜಿಲ್ಲಾ ಉಸ್ತುವಾರಿ ಸಚಿವರನ್ನು ನಿಯೋಜನೆ ಮಾಡಲಾಗಿದೆ.


Click the Play button to hear this message in audio format

ರಾಜ್ಯ ಸರ್ಕಾರವು ರಾಜ್ಯದಲ್ಲಿನ ಪ್ರಾಕೃತಿಕ ವಿಕೋಪಗಳ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮತ್ತು ಅವುಗಳ ಮೇಲೆ ನಿಕಟ ನಿಗಾವಹಿಸಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಕುರಿತು ರಾಜ್ಯ ಸರ್ಕಾರವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಪ್ರಾಕೃತಿಕ ವಿಕೋಪ ನಿರ್ವಹಣಾ ಉಸ್ತುವಾರಿಯನ್ನು ಸಚಿವರನ್ನು ನಿಯೋಜನೆ ಮಾಡಿ ಆದೇಶಿಸಲಾಗಿದೆ.

ಮುಂಗಾರು ಮತ್ತು ಹಿಂಗಾರು ಮಳೆಯ ಸಂದರ್ಭದಲ್ಲಿ ಕೆಲವು ಜಿಲ್ಲೆಗಳು ಪ್ರವಾಹ, ಭೂಕುಸಿತದಂತಹ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತವೆ. ಇಂತಹ ತುರ್ತು ಸಂದರ್ಭಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ತುರ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಸರ್ಕಾರದ ಉನ್ನತ ಮಟ್ಟದ ನಾಯಕರ ನೇರ ಮೇಲ್ವಿಚಾರಣೆ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅನುಮೋದನೆಯ ಮೇರೆಗೆ, ರಾಜ್ಯಪಾಲರ ಆದೇಶಾನುಸಾರ ಈ ನೇಮಕವನ್ನು ಮಾಡಲಾಗಿದೆ.

ಜಿಲ್ಲಾವಾರು ಉಸ್ತುವಾರಿಗಳ ಹಂಚಿಕೆ

ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ರಾಜ್ಯದ ಪ್ರಮುಖ ಸಚಿವರುಗಳಿಗೆ ಜಿಲ್ಲೆಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ತುಮಕೂರು ಮತ್ತು ಚಿತ್ರದುರ್ಗ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಮತ್ತು ಮಂಡ್ಯ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ವಿಜಯಪುರ ಮತ್ತು ಬಾಗಲಕೋಟೆ, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರ ಮತ್ತು ಹಾಸನ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಬೀದರ್ ಮತ್ತು ಗದಗ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ, ಧಾರವಾಡ ಮತ್ತು ಹಾವೇರಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿ ಮತ್ತು ಯಾದಗಿರಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರಿಗೆ ರಾಯಚೂರು ಮತ್ತು ಕೊಪ್ಪಳ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಮತ್ತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.

ಉಸ್ತುವಾರಿ ಸಚಿವರ ಜವಾಬ್ದಾರಿಗಳೇನು?

ತಮ್ಮ ಉಸ್ತುವಾರಿಯಲ್ಲಿರುವ ಜಿಲ್ಲೆಗಳಲ್ಲಿನ ಹವಾಮಾನ ವೈಪರೀತ್ಯಗಳು, ನದಿಗಳ ನೀರಿನ ಮಟ್ಟ ಮತ್ತು ಭೂಕುಸಿತದ ಭೀತಿಯಿರುವ ಪ್ರದೇಶಗಳ ಮೇಲೆ ನಿರಂತರ ನಿಗಾ ವಹಿಸುವುದು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರುವುದು. ವಿಕೋಪ ಸಂಭವಿಸಿದ ತಕ್ಷಣವೇ ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಅನುದಾನ ಮತ್ತು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಮಾರ್ಗದರ್ಶನ ನೀಡುವುದು. ಅಪಾಯಕಾರಿ ವಲಯಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವುದಾಗಿದೆ. ಸರ್ಕಾರದ ಈ ಕ್ರಮವು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶ ಹೊಂದಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಮುಂದಿನ ಸರ್ಕಾರದ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ.

Read More
Next Story