
ಸಾಂದರ್ಭಿಕ ಚಿತ್ರ
Drinking Water| ರಾಜ್ಯದಲ್ಲಿ ಮುಂಗಾರು ಕೊರತೆ ಭೀತಿ; ಕುಡಿಯುವ ನೀರಿನ ನಿರ್ವಹಣೆಗೆ ಕಸರತ್ತು
ಪ್ರಸ್ತುತ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 321.93 ಟಿ.ಎಂ.ಸಿ ನೀರು ಲಭ್ಯವಿದ್ದು (ಶೇ. 36ರಷ್ಟು), ಇದು ಜುಲೈ ಮಧ್ಯದವರೆಗಿನ ಕುಡಿಯುವ ನೀರಿನ ಅಗತ್ಯಕ್ಕೆ ಸಾಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಹಾಗೂ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು, ಮೇವು ಪೂರೈಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಕೈಗೊಂಡಿರುವ ಸಿದ್ಧತೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆಸಿದ ಮಹತ್ವದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಟಾಸ್ಕ್ ನೀಡಿದ್ದಾರೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಸಲಹೆ ನೀಡಿದ್ದಾರೆ.
ಜಲಾಶಯಗಳಲ್ಲಿ ನೀರಿನ ಸ್ಥಿತಿಗತಿ ಹೇಗಿದೆ?
ಪ್ರಸ್ತುತ, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 321.93 ಟಿ.ಎಂ.ಸಿ ನೀರು ಲಭ್ಯವಿದ್ದು (ಶೇ. 36ರಷ್ಟು), ಇದು ಜುಲೈ ಮಧ್ಯದವರೆಗಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲಿದೆ. ನೀರಾವರಿಗಿಂತ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅನಗತ್ಯ ನೀರಿನ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ನೀಡಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಆದ್ಯತೆ ಮೇರೆಗೆ ಬಾಡಿಗೆಗೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಅಧಿಕಾರಿಗಳು ಪ್ರತಿಕ್ರಿಯಿಸಿ, ರಾಜ್ಯದ 114 ತಾಲೂಕುಗಳ 598 ಗ್ರಾಮ ಪಂಚಾಯತ್‌ಗಳಲ್ಲಿ ನೀರಿನ ಸಮಸ್ಯೆಯಿದ್ದು, 129 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದು ಸಿಎಂ ಗಮನ ಸೆಳೆದರು.
ಜಿಲ್ಲಾಧಿಕಾರಿಗಳೇ ನೇರ ಹೊಣೆ
ರಾಜ್ಯದ ಐದು ಜಿಲ್ಲೆ ಹೊರತುಪಡಿಸಿ ಉಳಿದೆಡೆ ಮಳೆ ಕೊರತೆಯಾಗುವ ಸಾಧ್ಯತೆಯಿದೆ. "ಕುಡಿಯುವ ನೀರಿಗೆ ತೊಂದರೆಯಾದರೆ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಕಂದಾಯ, ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು," ಎಂದು ಸಿಎಂ ಎಚ್ಚರಿಸಿದ್ದಾರೆ.
ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ತಾಲೂಕು ಮತ್ತು ವಾರ್ಡ್ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲು ಆದೇಶಿಸಿದರು.
ಬಿಸಿಗಾಳಿ ಮುನ್ನೆಚ್ಚರಿಕೆ
ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ತೀವ್ರ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅನುದಾನದ ಕೊರತೆಯಿಲ್ಲ. ಅಗತ್ಯವಿರುವ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕವಿದೆ. ಹೀಗಾಗಿ ವ್ಯಾಪಾರಿಗಳು ರಸಗೊಬ್ಬರ ದಾಸ್ತಾನು ಮಾಡುವುದನ್ನು ತಡೆಯಲು ಚೆಕ್‌ಪೋಸ್ಟ್ ತಪಾಸಣೆ ಬಿಗಿಗೊಳಿಸಬೇಕು. ಬೇರೆ ರಾಜ್ಯಗಳಿಗೆ ರಸಗೊಬ್ಬರ ಸಾಗಾಟವಾಗದಂತೆ ನೋಡಿಕೊಳ್ಳಬೇಕು. ಹಾವೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬರ ಮಾರಾಟ ಬೆಲೆ ಏರಿಕೆಯಾಗಿರುವ ಬಗ್ಗೆ ತನಿಖೆ ನಡೆಸಿ, ಅರ್ಹ ರೈತರಿಗೆ ಯೂರಿಯಾ, ಡಿಎಪಿ ಸಿಗುವಂತೆ ಖಾತ್ರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಮತ್ತು ಮೂಲಸೌಕರ್ಯ
ಕಲುಷಿತ ನೀರು ಪೂರೈಕೆಯಾಗಿ ಆರೋಗ್ಯ ಸಮಸ್ಯೆ ಉಂಟಾಗದಂತೆ ಜಿಲ್ಲಾಧಿಕಾರಿಗಳು ನಿಗಾ ವಹಿಸಬೇಕು. ಎಲ್ಲಾ ಆರ್‌ಓ ಘಟಕಗಳು 24/7 ಕೆಲಸ ಮಾಡಬೇಕು. ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ನೀಡಲು ಇಂಧನ ಇಲಾಖೆಯು ಠೇವಣಿಗಾಗಿ ಕಾಯದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

