ಕಿಯೋಸ್ಕ್‌ನಲ್ಲಿ ಕೂತು ವಿಡಿಯೋ ನೋಡುವ ಪೊಲೀಸರಿಂದಲೇ ಸಂಚಾರ ದಟ್ಟಣೆ; ಮೋಹನ್ ದಾಸ್ ಪೈ ಕಿಡಿ
x

ಕಿಯೋಸ್ಕ್‌ನಲ್ಲಿ ಕೂತು ವಿಡಿಯೋ ನೋಡುವ ಪೊಲೀಸರಿಂದಲೇ ಸಂಚಾರ ದಟ್ಟಣೆ; ಮೋಹನ್ ದಾಸ್ ಪೈ ಕಿಡಿ

ಬೆಂಗಳೂರಿನಾದ್ಯಂತ ಟ್ರಾಫಿಕ್ ಸಿಗ್ನಲ್‌ಗಳು ಆಟೋಮ್ಯಾಟಿಕ್ ಆಗಿ ಆನ್ ಮತ್ತು ಆಫ್ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೋಹನ್‌ದಾಸ್‌ ಪೈ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.


ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆಯ ವಿರುದ್ಧ ಉದ್ಯಮಿ ಮೋಹನ್ ದಾಸ್ ಪೈ ತೀವ್ರ ಬೇಸರ ಹೊರಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಗರದ ಪೊಲೀಸರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ರಸ್ತೆಗಳಲ್ಲಿ ಕಾಣಿಸಿಕೊಳ್ಳಬೇಕಾದ ಸಂಚಾರಿ ಪೊಲೀಸರು ಕಿಯೋಸ್ಕ್ ಒಳಗೆ ಕುಳಿತು ಮೊಬೈಲ್‌ನಲ್ಲಿ ವಿಡಿಯೋ ವೀಕ್ಷಿಸುವುದರಲ್ಲಿ ಮಗ್ನರಾಗಿರುತ್ತಾರೆ . ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದಲೇ ಸಾರ್ವಜನಿಕರು ನಿತ್ಯ ಸಂಚಾರ ದಟ್ಟಣೆಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ.

ಕೈಯಿಂದ ಸಿಗ್ನಲ್ ನಿಯಂತ್ರಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು. ಬೆಂಗಳೂರಿನಾದ್ಯಂತ ಟ್ರಾಫಿಕ್ ಸಿಗ್ನಲ್‌ಗಳು ಆಟೋಮ್ಯಾಟಿಕ್ ಆಗಿ ಆನ್ ಮತ್ತು ಆಫ್ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಿಗ್ನಲ್ ಜಂಪ್ ಮಾಡುವುದು ಹಾಗೂ ಒನ್‌ ವೇ ರಸ್ತೆಗಳಲ್ಲಿ ರಾಂಗ್ ಸೈಡ್ ಮೂಲಕ ವಾಹನಗಳು ಸಾಗುತ್ತಿದ್ದು, ನಗರದಲ್ಲಿ ಟ್ರಾಫಿಕ್ ರೂಲ್ಸ್ ಕೇಳೋರೇ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು ನಗರದ ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಮೋಹನ್ ದಾಸ್ ಪೈ ಅವರು ತಮ್ಮ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ, ಗೃಹಸಚಿವರು, ಪೊಲೀಸ್ ಆಯುಕ್ತರು, ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಜಿಬಿಎ ಕಮಿಷನರ್ ಅವರನ್ನು ಟ್ಯಾಗ್ ಮಾಡಿ, ಕೂಡಲೇ ಮಧ್ಯಪ್ರವೇಶಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

Read More
Next Story