ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ದೊಡ್ಡ ಸಂಚಲನ ಮೂಡಿಸಿದೆ.
ಸಿಸಿಬಿ (CCB) ಅಧಿಕಾರಿಗಳು ಕಾರಾಗೃಹದ ಮೇಲೆ ನಡೆಸಿದ ದಿಢೀರ್ ದಾಳಿ ವೇಳೆ ಈ ಮೊಬೈಲ್ ಪತ್ತೆಯಾಗಿದೆ. ಜೈಲಿನೊಳಗೆ ಮೊಬೈಲ್ ಬಳಕೆಯಾಗಿರುವ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಸಿಸಿಬಿ ಇನ್ಸ್‌ಪೆಕ್ಟರ್ ಸುಬ್ರಮಣ್ಯಸ್ವಾಮಿ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಮಂಗಳವಾರ ರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ 90ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಭಾಗವಹಿಸಿದ್ದರು. ಪ್ರತಿ ಬ್ಯಾರಕ್‌ಗೂ ತೆರಳಿ ಪೊಲೀಸರು ಸುದೀರ್ಘವಾಗಿ ಪರಿಶೀಲನೆ ನಡೆಸಿದ್ದು, ಮೊಬೈಲ್ ಸೇರಿದಂತೆ ಜೈಲು ನಿಯಮಗಳಿಗೆ ವಿರುದ್ಧವಾಗಿ ಬಳಸಲಾಗುತ್ತಿದ್ದ ವಸ್ತುಗಳಿಗಾಗಿ ಶೋಧ ನಡೆಸಿದ್ದಾರೆ.
ವಿಚಾರಣೆ ವೇಳೆ ಕೈದಿಗಳ ಹೇಳಿಕೆ
ಸಿಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದ ಕೊಠಡಿಯಲ್ಲಿ ಸಜಾ ಕೈದಿ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾ ಕೈದಿ ಪ್ರತಾಪ್ ರೈ ಇದ್ದರು. ಕೊಠಡಿಯಲ್ಲಿ ಸಿಕ್ಕ ಮೊಬೈಲ್, ಚಾರ್ಜರ್, ಪೆನ್‌ಡ್ರೈವ್ ಮತ್ತು ನೋಟ್‌ಬುಕ್ ಬಗ್ಗೆ ವಿಚಾರಿಸಿದಾಗ, ನೋಟ್‌ಬುಕ್ ತಮ್ಮದೆಂದು ಪ್ರಜ್ವಲ್ ರೇವಣ್ಣ ಹಾಗೂ ಮೊಬೈಲ್, ಚಾರ್ಜರ್, ಪೆನ್‌ಡ್ರೈವ್ ತಮ್ಮದೆಂದು ಪ್ರತಾಪ್ ರೈ ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಮ್ಮ ವಕೀಲರು ಮತ್ತು ಸಂಬಂಧಿಕರಿಗೆ ಕರೆ ಮಾಡಲು ಇಬ್ಬರೂ ಈ ಮೊಬೈಲ್ ಬಳಸುತ್ತಿದ್ದುದಾಗಿ ತಿಳಿಸಿದ್ದಾರೆ.
ಫೋನ್‌ನಲ್ಲಿ ವಾಟ್ಸಪ್, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ
ಅಧಿಕಾರಿಗಳು ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಪ್ಲಿಕೇಷನ್‌ಗಳ ಜೊತೆಗೆ ನೆಟ್‌ಫ್ಲಿಕ್ಸ್ (Netflix) ಮತ್ತು ಪ್ರೈಮ್ ವಿಡಿಯೋ (Prime Video) ಆಪ್‌ಗಳನ್ನು ಡೌನ್‌ಲೋಡ್ ಮಾಡಿರುವುದು ಕಂಡುಬಂದಿದೆ. ಈ ಎಲ್ಲಾ ಆಪ್‌ಗಳು ಪಾಸ್‌ವರ್ಡ್‌ನಿಂದ ಲಾಕ್ ಆಗಿದ್ದು, ಅವುಗಳ ಪಾಸ್‌ವರ್ಡ್ ಕೇಳಿದಾಗ ಇಬ್ಬರೂ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ತಕ್ಷಣವೇ ಅಧಿಕಾರಿಗಳು ಮಹಜರ್ (ಪಂಚನಾಮೆ) ನಡೆಸಿ ಮೊಬೈಲ್, ಚಾರ್ಜರ್, ಪೆನ್‌ಡ್ರೈವ್ ಹಾಗೂ ನೋಟ್‌ಬುಕ್ ವಶಪಡಿಸಿಕೊಂಡಿದ್ದಾರೆ.
ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲು
ಕೇಂದ್ರ ಕಾರಾಗೃಹದೊಳಗೆ ನಿಷೇಧಿತ ವಸ್ತುಗಳಾದ ಮೊಬೈಲ್, ಚಾರ್ಜರ್ ಮತ್ತು ಪೆನ್‌ಡ್ರೈವ್‌ಗಳನ್ನು ಅನಧಿಕೃತವಾಗಿ ತರಿಸಿ ಬಳಕೆ ಮಾಡಿರುವುದು ಸ್ಪಷ್ಟವಾಗಿರುವುದರಿಂದ, ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರೈ ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಿಂದೆಯೂ ಜೈಲಿನಲ್ಲಿ ಅಕ್ರಮ ವಸ್ತುಗಳ ಪತ್ತೆ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯಗಳು ಸಿಗುತ್ತಿವೆ ಎಂಬ ಆರೋಪಗಳು ಈ ಹಿಂದೆಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ವಿವಿಧ ಹಂತಗಳಲ್ಲಿ ನಡೆದ ತಪಾಸಣೆಗಳ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾರ್ಜರ್‌ಗಳು ಹಾಗೂ ಇಯರ್‌ಫೋನ್‌ಗಳಂತಹ ವಸ್ತುಗಳು ಪತ್ತೆಯಾಗಿದ್ದವು.
ಇದರ ಜತೆಗೆ ಶೂಗಳು, ದಿಂಬುಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು ಮತ್ತು ಕುರ್ಚಿಗಳಂತಹ ಜೈಲು ನಿಯಮಗಳಿಗೆ ವಿರುದ್ಧವಾಗಿ ಇರಿಸಲಾಗಿದ್ದ ವಸ್ತುಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಹಿಂದಿನ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಸುಮಾರು ಎರಡು ಟ್ರ್ಯಾಕ್ಟರ್‌ಗಳಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು ಎನ್ನಲಾಗಿದೆ.
ಜೈಲಿನೊಳಗೆ ಇಂತಹ ವಸ್ತುಗಳು ಪ್ರವೇಶಿಸಲು ಕೆಲ ಅಧಿಕಾರಿಗಳು ಅಥವಾ ಸಿಬ್ಬಂದಿಯ ಸಹಕಾರವಿದೆಯೇ ಎಂಬ ಆರೋಪಗಳೂ ಈ ಹಿಂದೆ ಕೇಳಿಬಂದಿದ್ದವು. ಇದೀಗ ಮತ್ತೆ ಮೊಬೈಲ್‌ಗಳು ಪತ್ತೆಯಾಗಿರುವುದು ಜೈಲಿನ ಭದ್ರತೆ ಮತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿಸಿಬಿ ತನಿಖೆಯ ಬಳಿಕ ಮೊಬೈಲ್‌ಗಳ ಬಳಕೆ ಮತ್ತು ಅವುಗಳ ಹಿಂದಿರುವ ವ್ಯಕ್ತಿಗಳ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.