ಬಲಾಢ್ಯ ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ಬೇಡ : ಕೆ.ಶಿವಕುಮಾರ್
x

ಬಲಾಢ್ಯ ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ಬೇಡ : ಕೆ.ಶಿವಕುಮಾರ್

ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಮೃತಪಟ್ಟರೆ ಶವಸಂಸ್ಕಾರ ಮಾಡಲು ಜಾಗವಿಲ್ಲದ ದುಸ್ಥಿತಿ ಇದ್ದು, ಮತ್ತೆ ಭೂ ಸುಧಾರಣಾ ಕ್ರಾಂತಿಯಾಗಬೇಕಿದೆ ಎಂದು ಎಂಎಲ್‌ಸಿ ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.


Click the Play button to hear this message in audio format

ರಾಜ್ಯದ ಸರ್ಕಾರಿ ಭೂಮಿಯ ಹಂಚಿಕೆ ಮತ್ತು ನಿರ್ವಹಣೆಯು ಇದೀಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಿರಬೇಕಾದ ಸರ್ಕಾರಿ ಭೂಮಿಯು ಪ್ರಭಾವಿ ಮತ್ತು ಬಲಾಢ್ಯ ಸಂಸ್ಥೆಗಳ ಪಾಲಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್, ರಾಜ್ಯದಲ್ಲಿ ಮತ್ತೊಂದು "ಭೂ ಸುಧಾರಣಾ ಕ್ರಾಂತಿ" ಆಗಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ. ಶಿವಕುಮಾರ್ ಅವರು, ಸರ್ಕಾರದ ಭೂಮಿಯ ಹಂಚಿಕೆಯಲ್ಲಿನ ತಾರತಮ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ನಂಜನಗೂಡಿನ ನೇರಳೆ, ಕೊಳ್ಳೇಗಾಲದ ಮಾಂಬಳ್ಳಿಯಂತಹ ಗ್ರಾಮಗಳಲ್ಲಿ ಬಡವರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಅವರು ಸದನದ ಗಮನಕ್ಕೆ ತಂದರು. ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಮೃತಪಟ್ಟರೆ ಶವಸಂಸ್ಕಾರ ಮಾಡಲು ಜಾಗವಿಲ್ಲದ ದುಸ್ಥಿತಿ ಇದೆ. ಸ್ಮಶಾನಗಳ ಕೊರತೆಯಿಂದಾಗಿ ಜನರು ನದಿಯ ದಂಡೆಗಳಲ್ಲಿ ಶವಗಳನ್ನು ಹೂಳುವಂತಹ ಅಮಾನವೀಯ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕಡೆ ಬಡವರಿಗೆ ಅಂತಿಮ ಸಂಸ್ಕಾರಕ್ಕೂ ಜಾಗವಿಲ್ಲ, ಅತ್ತ ಕಡೆ ಸರ್ಕಾರವು ಸಾವಿರಾರು ಎಕರೆ ಜಮೀನನ್ನು ಪ್ರಭಾವಿ ಸಂಸ್ಥೆಗಳಿಗೆ ಧಾರೆ ಎರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಕಿಅಂಶಗಳ ಆತಂಕಕಾರಿ ಚಿತ್ರಣ

ಕಂದಾಯ ಇಲಾಖೆಯ ಅಧಿಕೃತ ಮಾಹಿತಿಯನ್ನು ಆಧರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅರಣ್ಯ ಮತ್ತು ಕೃಷಿ ಭೂಮಿಯನ್ನು ಹೊರತುಪಡಿಸಿದರೂ, ಸದ್ಯ 3,25,177 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ. ಇದುವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ 3,730 ಸಂಸ್ಥೆಗಳಿಗೆ ಈ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಆದರೆ, ಈ ಹಂಚಿಕೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲದಿರುವುದು ಮತ್ತು ಉದ್ದೇಶಿತ ಉದ್ದೇಶಕ್ಕೆ ಭೂಮಿ ಬಳಕೆಯಾಗದಿರುವುದು ದೊಡ್ಡ ಹಗರಣಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ದುರುಪಯೋಗದ ಪರ್ವ: ಬಲಾಢ್ಯರ ಅಟ್ಟಹಾಸ

ಹಿಂದೂ ಮತ್ತು ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳು, ಬಲಾಢ್ಯ ಶೈಕ್ಷಣಿಕ ಸಾಮ್ರಾಜ್ಯಗಳನ್ನು ನಡೆಸುತ್ತಿರುವ ಟ್ರಸ್ಟ್‌ಗಳು ಮತ್ತು ಹಲವು ಎನ್‌ಜಿಒಗಳು ನಿರ್ದಿಷ್ಟ ಯೋಜನೆಗಾಗಿ ಭೂಮಿ ಪಡೆದು, ನಂತರ ಅದನ್ನು ವಾಣಿಜ್ಯ ಬಳಕೆಗೆ ಅಥವಾ ರಿಯಲ್ ಎಸ್ಟೇಟ್ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಹಲವು ಸಂಸ್ಥೆಗಳು ಸರ್ಕಾರಿ ಭೂಮಿಯನ್ನು ಪಡೆದು ದಶಕಗಳಾದರೂ ಯಾವುದೇ ಕಟ್ಟಡ ಅಥವಾ ಯೋಜನೆಗಳನ್ನು ನಿರ್ಮಿಸದೆ ಹಾಗೆಯೇ ಖಾಲಿ ಬಿಟ್ಟಿವೆ. ಇದು ಸಾರ್ವಜನಿಕ ಆಸ್ತಿಯ ನೇರ ಲೂಟಿಯಾಗಿದೆ ಎಂದು ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಭೂಮಿಯ ಹಕ್ಕು ದೊರಕಿಸಿಕೊಟ್ಟಿತ್ತು. ಇಂದು ಅದೇ ರೀತಿಯ ಮತ್ತೊಂದು ಕ್ರಾಂತಿಯ ಅಗತ್ಯವಿದೆ. ಸರ್ಕಾರಿ ಭೂಮಿಯನ್ನು ಬಲಾಢ್ಯರಿಗೆ ನೀಡುವ ಬದಲು, ಭೂ ರಹಿತರಿಗೆ, ಸ್ಮಶಾನಗಳ ನಿರ್ಮಾಣಕ್ಕೆ, ನವೋದ್ಯಮಗಳಿಗೆ ಮತ್ತು ಸಾಮಾಜಿಕ ನ್ಯಾಯದಡಿ ಅಗತ್ಯವಿರುವ ಹೊಸ ಶೈಕ್ಷಣಿಕ ಸಂಸ್ಥೆಗಳಿಗೆ ಮಾತ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು, ಪ್ರಕರಣದ ಗಂಭೀರತೆಯನ್ನು ಒಪ್ಪಿಕೊಂಡರು. ಸದಸ್ಯರು ಅತ್ಯಂತ ಪ್ರಸ್ತುತವಾದ ಮತ್ತು ಸೂಕ್ಷ್ಮವಾದ ವಿಷಯವನ್ನು ಸದನದ ಗಮನಕ್ಕೆ ತಂದಿದ್ದಾರೆ. ನಿರ್ದಿಷ್ಟ ಉದ್ದೇಶಕ್ಕಾಗಿ ಭೂಮಿ ಪಡೆದು, ಅದನ್ನು ದುರುಪಯೋಗ ಮಾಡಿಕೊಂಡಿರುವ ಸಂಸ್ಥೆಗಳನ್ನು ಈಗಾಗಲೇ ಗುರುತಿಸಲಾಗುತ್ತಿದ್ದು, ಅಂತಹ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ನೋಟಿಸ್ ನೀಡಲಾಗುತ್ತಿದೆ. ಸರ್ಕಾರಿ ಭೂಮಿಯ ಅಕ್ರಮ ಒತ್ತುವರಿಯನ್ನು ತಡೆಯಲು ಮತ್ತು ಭೂಮಿಯನ್ನು ಹಂಚಿಕೆ ಮಾಡಿದ ನಂತರ ಅದು ಉದ್ದೇಶಿತ ಕೆಲಸಕ್ಕೆ ಬಳಕೆಯಾಗುತ್ತಿದೆಯೇ? ಅಥವಾ ಇಲ್ಲವೇ? ಎಂಬುದನ್ನು ನೈಜ ಸಮಯದಲ್ಲಿ ಪತ್ತೆಹಚ್ಚಲು ನಾವು ಅತ್ಯಾಧುನಿಕ ಸಾಫ್ಟ್‌ವೇರ್ ಅನ್ನು ರೂಪಿಸುತ್ತಿದ್ದೇವೆ. ಈ ತಂತ್ರಜ್ಞಾನದ ಮೂಲಕ ಪ್ರತಿ ಎಕರೆ ಭೂಮಿಯ ಮೇಲೆ ಕಣ್ಗಾವಲು ಇಡಲಾಗುವುದು ಎಂದರು.

Read More
Next Story