ನಾಯಕತ್ವದ ಕೊರತೆ: ಕಾಗದದ ಮೇಲಷ್ಟೇ ಉಳಿದ ಮೈತ್ರಿ ಬಲ
x

ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಆಘಾತ

ನಾಯಕತ್ವದ ಕೊರತೆ: ಕಾಗದದ ಮೇಲಷ್ಟೇ ಉಳಿದ ಮೈತ್ರಿ ಬಲ

ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಆಘಾತ. ಅಡ್ಡಮತದಾನದಿಂದ ಬಿಜೆಪಿ-ಜೆಡಿಎಸ್ ದೌರ್ಬಲ್ಯ ಜಗಜ್ಜಾಹೀರು; ಐದನೇ ಅಭ್ಯರ್ಥಿ ಗೆಲ್ಲಿಸಿ ಶಕ್ತಿ ಪ್ರದರ್ಶಿಸಿದ ಡಿಕೆ ಶಿವಕುಮಾರ್.


Click the Play button to hear this message in audio format

ರಾಜಕೀಯದಲ್ಲಿ ಸಂಖ್ಯೆಗಳೇ ಎಲ್ಲ ಎಂದುಕೊಳ್ಳುತ್ತೇವೆ. ಆದರೆ ಸಮರ್ಥ ನಾಯಕತ್ವ ಇಲ್ಲದಿದ್ದರೆ ಆ ಸಂಖ್ಯೆಗಳು ಕೇವಲ ಕಾಗದದ ಮೇಲಷ್ಟೇ ಉಳಿಯುತ್ತವೆ ಎಂಬುದಕ್ಕೆ ಕರ್ನಾಟಕದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವೇ ದೊಡ್ಡ ಉದಾಹರಣೆ. ಗದ್ದುಗೆ ಮೇಲಿರುವ ನಾಯಕರಿಗೆ ತಮ್ಮದೇ ಶಾಸಕರ ಮೇಲಿನ ಹಿಡಿತ ತಪ್ಪಿದಾಗ ಏನಾಗುತ್ತದೆ ಎಂಬುದನ್ನು ಈ ರಿಸಲ್ಟ್ ಜಗಜ್ಜಾಹೀರು ಮಾಡಿದೆ. ಇಲ್ಲಿ ಸೋತಿದ್ದು ಕೇವಲ ಬಿಜೆಪಿ-ಜೆಡಿಎಸ್ ಒಮ್ಮತದ ಅಭ್ಯರ್ಥಿ ಮಾತ್ರವಲ್ಲ, ಬದಲಿಗೆ ಆ ಪಕ್ಷಗಳ ನಾಯಕತ್ವ ಕೂಡ. ಕುಟುಂಬ ಪಾರುಪತ್ಯದ ಜೆಡಿಎಸ್‌ನಲ್ಲಿ ಯಾರು ಯಾರ ಮಾತನ್ನು ಕೇಳುತ್ತಾರೆ ಎಂಬುದು ಒಂದು ಕಥೆಯಾದರೆ, ಶಿಸ್ತಿನ ಪಕ್ಷ ಎನಿಸಿಕೊಂಡ ಬಿಜೆಪಿಯಲ್ಲೂ ಶಾಸಕರ ಮೇಲಿನ ಕಂಟ್ರೋಲ್ ತಪ್ಪಿರುವುದು ಈಗ ಬಯಲಾಗಿದೆ.

ಡಿಕೆಶಿ ರಣತಂತ್ರ ಮತ್ತು ಏಳನೇ ಸ್ಥಾನದ ರಾಜಕೀಯ ಟ್ವಿಸ್ಟ್

ವಿಧಾನಸಭೆಯ ಒಟ್ಟು ಸದಸ್ಯರ ಬಲ ಪರಿಗಣಿಸಿದರೆ ತಲಾ ನಾಲ್ಕು ಕಾಂಗ್ರೆಸ್ ಹಾಗೂ ಎರಡು ಬಿಜೆಪಿ ಸ್ಥಾನಗಳ ಗೆಲುವು ಮೊದಲೇ ನಿಶ್ಚಿತವಾಗಿತ್ತು. ಆದರೆ ಅಸಲಿ ರಾಜಕೀಯ ಟ್ವಿಸ್ಟ್ ಶುರುವಾಗಿದ್ದು ಏಳನೇ ಸ್ಥಾನದಲ್ಲಿ. ಜೆಡಿಎಸ್ ತನ್ನ 18 ಶಾಸಕರ ಬಲದಿಂದ ಸ್ವತಂತ್ರವಾಗಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಡಿಕೆ ಶಿವಕುಮಾರ್ ಅವರು ಹೈ-ರಿಸ್ಕ್ ತಗೊಂಡು ವಿನಯ್ ಕಾರ್ತಿಕ್ ಅವರನ್ನು ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಶಾಸಕರು ವಿಪಕ್ಷಗಳ ಆಮಿಷಕ್ಕೆ ಒಳಗಾಗದಂತೆ ರೆಸಾರ್ಟ್ ರಾಜಕೀಯ, ಪ್ರತ್ಯೇಕ ತಂಡಗಳಾಗಿ ವಿಧಾನಸೌಧಕ್ಕೆ ಕರೆತರುವ ಮೂಲಕ ಹದ್ದಿನ ಕಣ್ಣಿಟ್ಟಿದ್ದರು. ಅಂತಿಮವಾಗಿ ವಿನಯ್ ಕಾರ್ತಿಕ್ ಬರೋಬ್ಬರಿ 32 ಮತಗಳನ್ನು ಪಡೆದು ಗೆದ್ದು ಬೀಗಿದರು. ಈ ಮೂಲಕ ಸಿದ್ದರಾಮಯ್ಯ ಅವರ ನಂತರವೂ ತಾವೇ ಅಧಿಪತಿ ಎಂಬುದನ್ನು ಡಿಕೆಶಿ ಸಾಬೀತುಪಡಿಸಿದ್ದಾರೆ.

ಜೆಡಿಎಸ್ ಪಾಳಯದಲ್ಲಿ ನಡುಕ: ಕುಮಾರಸ್ವಾಮಿಗೆ ಶಾಕ್

ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಗೋವಿಂದರಾಜು ಅವರಿಗೆ ಗೆಲ್ಲಲು ಕನಿಷ್ಠ 28 ವೋಟ್‌ಗಳು ಬೇಕಿದ್ದವು. ಆದರೆ ಅವರಿಗೆ ಸಿಕ್ಕಿದ್ದು ಕೇವಲ 14 ಮತಗಳು ಮಾತ್ರ! ಅಂದರೆ 18 ಶಾಸಕರನ್ನು ಹೊಂದಿರುವ ಜೆಡಿಎಸ್, ತನ್ನ ಸ್ವಂತ ಶಾಸಕರ ಮತಗಳನ್ನೇ ಉಳಿಸಿಕೊಳ್ಳಲು ವಿಫಲವಾಗಿದೆ. ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ದೆಹಲಿಗೆ ಹೋದ ನಂತರ ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ನಾಯಕರೇ ಇಲ್ಲದಂತಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗದಿದ್ದಕ್ಕೆ ಜಿ.ಟಿ. ದೇವೇಗೌಡರು ಅಸಮಾಧಾನಗೊಂಡಿದ್ದರೆ, ನೇಮಕಗೊಂಡ ಸಿ.ವಿ. ಸುರೇಶ್ ಬಾಬು ಎಲ್ಲ ಶಾಸಕರನ್ನು ಒಟ್ಟಿಗೆ ಕೊಂಡುಹೋಗುವಲ್ಲಿ ವಿಫಲರಾಗಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಸ್ವತಃ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. "ಅತಿಯಾಗಿ ನಂಬಿಕೆ ಇಡತಕ್ಕಂತದ್ದು ಸೂಕ್ತ ಅಲ್ಲ ಅಂತಕಂತದ್ದು ಒಂದು ಸಂದೇಶ ಕೆಲವರು ಕೊಟ್ಟಿದ್ದಾರೆ. ನೆನ್ನೆ ಚುನಾವಣೆಯಲ್ಲಿ ಯಾರು ಕ್ರಾಸ್ ವೋಟ್ ಮಾಡಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ನನ್ನ ಹತ್ರ ಇದೆ. ಅದರಿಂದ ನಾನೇನು ವಿಚಲಿತನಾಗಿಲ್ಲ. ಯಾರ್ಯಾರು ಆಟ ಆಡಿದ್ದಾರೆ ಅನ್ನೋದನ್ನು ಇಟ್ಕೊಂಡು, ನನ್ನ ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಗಣಿಸಿ ಮುಂದಿನ ತೀರ್ಮಾನ ಮಾಡ್ತೇನೆ,'' ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯಲ್ಲೂ 'ಅಶಿಸ್ತು': ವಿಜಯೇಂದ್ರ ನಾಯಕತ್ವಕ್ಕೆ ಸವಾಲು

ಮೈತ್ರಿಕೂಟದ ದೊಡ್ಡಣ್ಣ ಎನಿಸಿಕೊಂಡ ಬಿಜೆಪಿಯ ಕಥೆ ಇನ್ನು ವಿಚಿತ್ರವಾಗಿದೆ. ಬಿಜೆಪಿ ತನ್ನ ಪಕ್ಕಾ ವೋಟ್‌ಗಳಲ್ಲೇ ಕನಿಷ್ಠ ನಾಲ್ಕರಿಂದ ಐದು ಮತಗಳನ್ನು ಕಳೆದುಕೊಂಡಿದೆ. ರಘು ಕೌಟಿಲ್ಯ ಅವರಿಗೆ 29 ಹಾಗೂ ಲಿಂಗರಾಜ್ ಪಾಟೀಲ್ ಅವರಿಗೆ 27 ವೋಟ್ ಬಂದಿದ್ದು, ಗೆಲುವಿನ ಕೋಟಾ ತಲುಪಲು ಅಧಿಕೃತ ಅಭ್ಯರ್ಥಿಗಳೇ ಒದ್ದಾಡಬೇಕಾಯಿತು. ಜೆಡಿಎಸ್‌ಗೆ ಯಾರು ಅಡ್ಡ ಮತದಾನ ಮಾಡಬಹುದು ಎಂಬ ಸುಳಿವಿತ್ತು, ಆದರೆ ಬಿಜೆಪಿಗೆ ಕೊನೆಕ್ಷಣದವರೆಗೂ ಇದರ ಅರಿವೇ ಇರಲಿಲ್ಲ. ಇದು ರಾಜ್ಯಾಧ್ಯಕ್ಷ ಬಿ.ವಿ. ವಿಜಯೇಂದ್ರ ಅವರಿಗೆ ತಮ್ಮ ಶಾಸಕರ ಮೇಲೆ ಹಿಡಿತವಿಲ್ಲವೇ ಹಾಗೂ ಪಕ್ಷದಲ್ಲಿ ಒಳಗೊಳಗೇ ಬಣ ರಾಜಕೀಯ ಮತ್ತು 'ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್' ನಡೆಯುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ದಾರಿ ಇಲ್ಲದವರಿಗೆ ದಾರಿ ತೋರಿಸಿದ ಸರ್ಕಾರ'

ವಿಪಕ್ಷಗಳ ಈ ಭಿನ್ನಮತವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ಈ ಹಿಂದೆ ಸೋಮಶೇಖರ್ ಮತ್ತು ಹೆಬ್ಬಾರ್ ಅವರನ್ನು ಬಿಜೆಪಿಯವರು ಉಚ್ಚಾಟನೆ ಮಾಡಿ ಕಳುಹಿಸಿದಾಗ, ಅಪಮಾನ ಎದುರಿಸಿದವರನ್ನು ಮಧ್ಯದಾರಿಯಲ್ಲಿ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, "ದಾರಿ ಇಲ್ಲದವರಿಗೆ ದಾರಿ ತೋರಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ" ಎಂದು ಪಂಚ್ ಡೈಲಾಗ್ ಹೊಡೆದಿದ್ದಾರೆ. ಇದು ಒಳಗಡೆ ನಡೆದ 'ಆಪರೇಷನ್ ಹಸ್ತ'ಕ್ಕೆ ಸಾಕ್ಷಿಯಾಗಿದೆ. ಪೇಪರ್ ಮೇಲೆ ಮೈತ್ರಿ ಇರಬಹುದು, ಆದರೆ ಶಾಸಕರ ಮೇಲೆ ಹತೋಟಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ಈ ಎಂಎಲ್ಸಿ ಎಲೆಕ್ಷನ್ ತೋರಿಸಿಕೊಟ್ಟಿದೆ. ಈ ರಿಸಲ್ಟ್ ಮೂಲಕ ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟದ 'ಸೋಲಿಸಲಾಗದ ಇಮೇಜ್'ಗೆ ದೊಡ್ಡ ಪೆಟ್ಟು ಬಿದ್ದಿರುವುದಂತೂ ಸತ್ಯ.

Read More
Next Story