ಆಡಳಿತ ವೈಫಲ್ಯದ ಆರೋಪ: ಕೆಡಿಪಿ ಸಭೆಯನ್ನು ಬಹಿಷ್ಕರಿಸಿದ ಶಾಸಕ ಶರಣಗೌಡ ಕಂದಕೂರು
x

ಆಡಳಿತ ವೈಫಲ್ಯದ ಆರೋಪ: ಕೆಡಿಪಿ ಸಭೆಯನ್ನು ಬಹಿಷ್ಕರಿಸಿದ ಶಾಸಕ ಶರಣಗೌಡ ಕಂದಕೂರು

101 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಯಾದಗಿರಿ, ಗುರುಮಠಕಲ್ ತಾಲೂಕುಗಳನ್ನು ಕೈಬಿಟ್ಟಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರಾಜ್ಯದ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಗುರುಮಠಕಲ್ ಹಾಗೂ ಯಾದಗಿರಿ ತಾಲೂಕುಗಳನ್ನು ಹೊರಗಿಟ್ಟಿರುವುದನ್ನು ಖಂಡಿಸಿ, ಆಡಳಿತದ ಲೋಪದೋಷಗಳ ವಿರುದ್ಧ ದನಿ ಎತ್ತಿರುವ ಶಾಸಕ ಶರಣಗೌಡ ಕಂದಕೂರು, ಕೆಡಿಪಿ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಶಾಸಕ ಕಂದಕೂರು, ಈ ವರ್ಷ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ಕ್ಷೇತ್ರದಲ್ಲೂ ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿದರೂ, ಸರ್ಕಾರ ಪ್ರಕಟಿಸಿದ 101 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಕೈಬಿಟ್ಟಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7 ಮತ್ತು 8ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕೆ.ಡಿ.ಪಿ. ಸಭೆಯನ್ನು ಬಹಿಷ್ಕರಿಸುವುದಾಗಿ ಅವರು ತಿಳಿಸಿದ್ದಾರೆ.

ಜಿಲ್ಲೆಯ ದುಸ್ಥಿತಿಯ ಆರೋಪಗಳು

ಶಾಸಕ ಶರಣಗೌಡ ಕಂದಕೂರು ಪತ್ರದಲ್ಲಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿರುವ ಹಾಗೂ ಆಡಳಿತ ವ್ಯವಸ್ಥೆ ಕುಸಿದಿರುವ ಹತ್ತು ಹಲವು ಗಂಭೀರ ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜಿಲ್ಲೆಯ ರೈತರಿಗೆ ನಿರಂತರವಾಗಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಕೊರತೆಯಿಂದ ನೀರಾವರಿ ಹೊಂದಿರುವ ರೈತರೂ ಸಂಕಷ್ಟಕ್ಕೀಡಾಗಿದ್ದಾರೆ. ಇದಲ್ಲದೆ, ಟ್ರಾನ್ಸ್‌ಫಾರ್ಮರ್ ಕೊರತೆ ಬಗ್ಗೆ ಕೇಳಿದರೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿದೆ. ರೋಗಿಗಳು ಅಲ್ಲಿಗೆ ಹೋದರೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಜೀವ ಉಳಿಸುವ ಔಷಧಗಳೇ ಇಲ್ಲದಿದ್ದರೆ ಬಡ ರೋಗಿಗಳ ಗತಿಯೇನು? ಎಂದು ಶಾಸಕರು ಪ್ರಶ್ನಿಸಿದ್ದಾರೆ.

ಕಾನೂನು-ಸುವ್ಯವಸ್ಥೆ ಹಾಗೂ ಮರಳು ಮಾಫಿಯಾ

ಜಿಲ್ಲೆಯ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಅಕ್ರಮ ಮರಳು ಮಾಫಿಯಾ, ಬೂದಿ ಸಾಗಾಣಿಕೆಯ ವಾಹನಗಳ ಹಾವಳಿ ಹಾಗೂ ಮಟಕಾ ದಂಧೆಗಳು ನಿರಾತಂಕವಾಗಿ ನಡೆಯುತ್ತಿವೆ. ದೂರು ನೀಡಲು ಹೋದವರಿಗೆ ನ್ಯಾಯ ಸಿಗುತ್ತಿಲ್ಲ, ಪೊಲೀಸ್ ಠಾಣೆಗಳೇ ಜನಸಾಮಾನ್ಯರಿಗೆ ಭಯ ಹುಟ್ಟಿಸುವ ತಾಣಗಳಾಗಿವೆ ಎಂದು ಆರೋಪಿಸಿದ್ದಾರೆ. ಮಳೆಯ ಅಭಾವದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಜಲಜೀವನ್ ಮಿಷನ್‌ನಂತಹ ಯೋಜನೆಗಳು ಕಾಗದದ ಮೇಲೆಯೇ ಇವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸ್ವಚ್ಛತೆ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ವಿಫಲರಾಗಿದ್ದಾರೆ. 10 ಲಕ್ಷ ರೂಪಾಯಿ ಅನುದಾನವಿದೆ ಎಂದು ಹೇಳುವ ಅಧಿಕಾರಿಗಳು, ವಾಸ್ತವದಲ್ಲಿ ಖಾತೆಗಳಲ್ಲಿ ಹಣವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ನೆನೆಗುದಿಗೆ ಹಾಕಿದ್ದಾರೆ.

ಭ್ರಷ್ಟಾಚಾರದ ಆರೋಪ

ನಗರಸಭೆ, ಪುರಸಭೆ ಹಾಗೂ ಕಂದಾಯ ಕಚೇರಿಗಳಲ್ಲಿ ಯಾವುದೇ ಕೆಲಸವಾಗಬೇಕೆಂದರೂ ಲಂಚ ನೀಡಲೇಬೇಕಾದ ಅನಿವಾರ್ಯತೆ ಇದೆ. ಜನಸಾಮಾನ್ಯರು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತಿದ್ದಾರೆ ಎಂದು ಶಾಸಕರು ದೂರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಪೋಷಕರು ಖಾಸಗಿ ಶಾಲೆಯ ದುಬಾರಿ ಫೀಸು ಕಟ್ಟಲಾಗದೆ ಪರದಾಡುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಅನಕ್ಷರತೆ ಹೆಚ್ಚಾಗುತ್ತಿದೆ. ತಮ್ಮ ಮತಕ್ಷೇತ್ರದ ಕಡೆಚೂರು-ಬಾದ್ಯಾಪುರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸಿದ ಗ್ಯಾಸ್ ಸೋರಿಕೆ ದುರಂತದಲ್ಲಿ ಮೂವರು ಮೃತಪಟ್ಟಿದ್ದಾರೆ. ಇಷ್ಟಾದರೂ ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸದೆ ಕೇವಲ ಸಿಬ್ಬಂದಿಗಳ ಮೇಲೆ ಪ್ರಕರಣ ಹಾಕಲಾಗಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಡಿಪಿ ಸಭೆ ಬಹಿಷ್ಕಾರ: ಮುಂದಿನ ನಡೆ ಏನು?

ಕೇವಲ ವಿರೋಧಪಕ್ಷದ ಶಾಸಕನಾಗಿ ಮಾತ್ರವಲ್ಲದೆ, ಜಿಲ್ಲೆಯ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಜಿಲ್ಲೆಯ ಈ ದುಸ್ಥಿತಿಯನ್ನು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ತಿಳಿಸುವುದು ತಮ್ಮ ಕರ್ತವ್ಯ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಪಿ) ಕಾರ್ಯದರ್ಶಿಗಳು ಅಧಿಕಾರಿಗಳನ್ನು ಆಡಳಿತಕ್ಕೆ ಒಳಪಡಿಸುವಲ್ಲಿ ವಿಫಲರಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ರೈತರು ಮತ್ತು ಸಾರ್ವಜನಿಕರ ಪರವಾಗಿ ನಾನು ಸಭೆಯನ್ನು ಬಹಿಷ್ಕರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story