ವರ್ಷಕ್ಕೆ ಕನಿಷ್ಠ 8 ಸಭೆ ನಡೆಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ
x

ವರ್ಷಕ್ಕೆ ಕನಿಷ್ಠ 8 ಸಭೆ ನಡೆಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ

ಆಡಳಿತಾತ್ಮಕ ಲೋಪಗಳ ವಿರುದ್ಧ ಸಚಿವ ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಧಿಕಾರಗಳು ನಿಯಮಿತವಾಗಿ ಸಭೆ ನಡೆಸದ ಕಾರಣ ಅನೇಕ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿವೆ.


Click the Play button to hear this message in audio format

ರಾಜ್ಯದ ನಗರ ಪ್ರದೇಶಗಳ ಯೋಜಿತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಾಗರಿಕರಿಗೆ ಕಾಲಮಿತಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ನಗರಾಭಿವೃದ್ಧಿ ಪ್ರಾಧಿಕಾರಗಳು ತಮ್ಮ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳಬೇಕೆಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದ 34 ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯನಿರ್ವಹಣೆ ಮತ್ತು ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಸಭೆಗಳ ವಿಳಂಬ ಮತ್ತು ಆಡಳಿತಾತ್ಮಕ ಲೋಪಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಧಿಕಾರಗಳು ನಿಯಮಿತವಾಗಿ ಸಭೆ ನಡೆಸದ ಕಾರಣ ಅನೇಕ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕೆಲವು ಪ್ರಾಧಿಕಾರಗಳು ವರ್ಷಕ್ಕೆ ಕೇವಲ 2-3 ಸಭೆಗಳನ್ನು ನಡೆಸುತ್ತಿವೆ. ಇದು ಅತ್ಯಂತ ಗಂಭೀರ ವಿಚಾರ. ನಾಗರಿಕರ ಸೌಲಭ್ಯಗಳಿಗೆ ಸಂಬಂಧಿಸಿದ ವಿಷಯಗಳು ಸಕಾಲದಲ್ಲಿ ತೀರ್ಮಾನವಾಗಲು ಪ್ರತಿ ತಿಂಗಳು ಸಭೆ ನಡೆಯಲೇಬೇಕು. ವರ್ಷಕ್ಕೆ ಕನಿಷ್ಠ 8 ಸಭೆಗಳನ್ನಾದರೂ ನಡೆಸಿ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.

ಖಾಸಗಿ ಮಾದರಿಯಲ್ಲಿ ವಸತಿ ಸಂಕೀರ್ಣಗಳ ನಿರ್ಮಾಣ

ರಾಜ್ಯದಲ್ಲಿ ವಸತಿ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ವಸತಿ ಇಲಾಖೆಯು ಪೂರ್ಣ ಪ್ರಮಾಣದಲ್ಲಿ ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಪ್ರಾಧಿಕಾರಗಳೇ ಖಾಸಗಿ ಅಪಾರ್ಟ್‌ಮೆಂಟ್‌ಗಳ ಮಾದರಿಯಲ್ಲಿ ಆಧುನಿಕ ವಸತಿ ಸಂಕೀರ್ಣಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಹಂಚುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಲಭ್ಯವಿರುವ ಭೂಮಿಯನ್ನು ಸಮರ್ಥವಾಗಿ ಬಳಸಿಕೊಂಡು ಯೋಜಿತ ವಸತಿ ಯೋಜನೆಗಳನ್ನು ರೂಪಿಸುವುದು ಪ್ರಾಧಿಕಾರಗಳ ಆದ್ಯತೆಯಾಗಬೇಕು ಎಂದರು. ನಗರಗಳ ಅಸಮರ್ಪಕ ಬೆಳವಣಿಗೆಯನ್ನು ತಡೆಯಲು ವೈಜ್ಞಾನಿಕ ಯೋಜನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಚಿವರು, ಹಳೆಯ ಮಾಸ್ಟರ್ ಪ್ಲಾನ್‌ಗಳನ್ನು ತಕ್ಷಣವೇ ಪರಿಷ್ಕರಿಸುವಂತೆ ಸೂಚಿಸಿದರು. ಎಲ್ಲಾ ಪ್ರಾಧಿಕಾರಗಳು ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ಮಾಸ್ಟರ್ ಪ್ಲಾನ್ ತಯಾರಿಸಬೇಕು. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಈಗಾಗಲೇ ಮಾಸ್ಟರ್ ಪ್ಲಾನ್ ಆಗಿದೆ. ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯನ್ನು ಹೊರಗಿಟ್ಟು, ಆಯಾ ಪ್ರದೇಶದ ಭೌಗೋಳಿಕತೆಗನುಗುಣವಾಗಿ ಯೋಜನೆಗಳನ್ನು ರೂಪಿಸಬೇಕು ಎಂದು ನಿರ್ದೇಶಿಸಿದರು.

ಕೆರೆಗಳ ಅಭಿವೃದ್ಧಿ: ಸೌಂದರ್ಯಕ್ಕಿಂತ ಜಲಸಂಗ್ರಹ ಮುಖ್ಯ

ಇತ್ತೀಚಿನ ದಿನಗಳಲ್ಲಿ ಕೆರೆಗಳ ಅಭಿವೃದ್ಧಿ ಎಂದರೆ ಕೇವಲ ಸೌಂದರ್ಯೀಕರಣ ಎನ್ನುವಂತಾಗಿದೆ. ಆದರೆ, ನೀರಿನ ಸಂಗ್ರಹದ ಕಡೆಗೆ ಗಮನ ಹರಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ, ನೀರಿಲ್ಲದ ಕೆರೆಗೆ ಸೌಂದರ್ಯೀಕರಣದ ಅಗತ್ಯವಿಲ್ಲ. ಕೆರೆಗಳನ್ನು ಹೂಳೆತ್ತುವುದು, ಕೊಳಚೆ ನೀರು ಸೇರದಂತೆ ತಡೆಯುವುದು ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಮಾರ್ಗಸೂಚಿಗಳನ್ನು ಬದಲಾಯಿಸಿಕೊಳ್ಳಿ ಎಂದು ಸೂಚಿಸಿದರು. ಪ್ರಾಧಿಕಾರಗಳ ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಆರ್ಥಿಕ ಇಲಾಖೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಬಾರದು ಎಂದು ಎಚ್ಚರಿಸಿದರು. ಇನ್ನು ಕಟ್ಟಡ ನಿರ್ಮಾಣ ಪರವಾನಗಿ ವಿಳಂಬವಾಗುತ್ತಿರುವುದರಿಂದ ಜನರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ವಿನಾಕಾರಣ ಫೈಲ್‌ಗಳನ್ನು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿವೇಶನ ಹಂಚಿಕೆಯಾದವರಿಗೆ ಟೈಟಲ್ ಡೀಡ್ ನೀಡುವಲ್ಲಿನ ವಿಳಂಬಕ್ಕೆ ಪರಿಹಾರ ನೀಡಿದ ಸಚಿವರು, ಅಧಿಕೃತವಾಗಿ ನಿವೇಶನ ಹಂಚಿಕೆಯಾಗಿದ್ದರೂ ಟೈಟಲ್ ಡೀಡ್ ಪಡೆಯಲು ತೊಂದರೆಯಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ನಿವೇಶನ ವಾಪಸ್ ಪಡೆಯುವ ಕ್ರಮ ಸರಿಯಲ್ಲ. ಬದಲಿಗೆ, ನಿಯಮಾನುಸಾರ ದಂಡ ವಿಧಿಸಿ ಟೈಟಲ್ ಡೀಡ್ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಿ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಡಿಸಿ ಮತ್ತು ಸಿಇಒಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ನಗರಗಳ ಯೋಜಿತ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದೇ ವಿಷಯವನ್ನು ಪುನರುಚ್ಚರಿಸಿದ ಸಚಿವರು, ನಗರಗಳು ಕಾಂಕ್ರೀಟ್ ಕಾಡಾಗಬಾರದು. ಯೋಜಿತ ನಗರಾಭಿವೃದ್ಧಿ ಸಾರ್ವಜನಿಕರ ಮೂಲಭೂತ ಹಕ್ಕು. ಪ್ರಾಧಿಕಾರಗಳು ಇನ್ನು ಮುಂದೆ ಜನಸ್ನೇಹಿಯಾಗಿ ಮತ್ತು ಕಾಲಮಿತಿಯಲ್ಲಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಈ ಸಭೆಯು ರಾಜ್ಯದ ನಗರಾಭಿವೃದ್ಧಿ ವಲಯದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡಿದೆ. ಸಚಿವರ ಈ ಖಡಕ್ ಸೂಚನೆಗಳಿಂದಾಗಿ ಮುಂದಿನ ದಿನಗಳಲ್ಲಿ ಪ್ರಾಧಿಕಾರಗಳು ತಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿವೆ.

Read More
Next Story