ಸಂಚಾರ ದಟ್ಟಣೆ, ಸೈಬರ್ ಅಪರಾಧಗಳಿಗೆ ಕಡಿವಾಣ: ಹೊಸ ನೀಲಿ ನಕ್ಷೆ ಸಿದ್ಧಪಡಿಸಲು ಆದೇಶ
x

ಸಂಚಾರ ದಟ್ಟಣೆ, ಸೈಬರ್ ಅಪರಾಧಗಳಿಗೆ ಕಡಿವಾಣ: ಹೊಸ ನೀಲಿ ನಕ್ಷೆ ಸಿದ್ಧಪಡಿಸಲು ಆದೇಶ

ಅರ್ಬನ್ ಮೊಬಿಲಿಟಿ ಮಿಷನ್ ಕೇವಲ ಮೂಲಸೌಕರ್ಯಕ್ಕೆ ಸೀಮಿತವಾಗದೆ, ವ್ಯವಸ್ಥಿತ ಲೋಪದೋಷಗಳನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ. 2-3 ದಿನಗಳಲ್ಲಿ ಈ ಕುರಿತ ನೀಲಿ ನಕ್ಷೆ ಬಿಡುಗಡೆಯಾಗಲಿದೆ.


Click the Play button to hear this message in audio format

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಒಂದು ಜಟಿಲವಾದ ಸವಾಲು. ಕೇವಲ ರಸ್ತೆಗಳ ವಿಸ್ತರಣೆ ಅಥವಾ ಹೊಸ ಮೇಲ್ಸೇತುವೆಗಳ ನಿರ್ಮಾಣದಿಂದ ಮಾತ್ರ ಈ ಸಮಸ್ಯೆ ಬಗೆಹರಿಯದು ಎಂಬ ವಾಸ್ತವವನ್ನು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಒಪ್ಪಿಕೊಂಡಿದ್ದು, 'ಬೆಂಗಳೂರು ಅರ್ಬನ್ ಮೊಬಿಲಿಟಿ ಮಿಷನ್'ನ ಸ್ಥಾಪನೆ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಈ ಮಿಷನ್ ಕೇವಲ ಮೂಲಸೌಕರ್ಯಕ್ಕೆ ಸೀಮಿತವಾಗದೆ, ವ್ಯವಸ್ಥಿತ ಲೋಪದೋಷಗಳನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ. ಬಿಎಂಟಿಸಿ, ಬಿಎಂಆರ್‌ಸಿಎಲ್ ಮತ್ತು ಖಾಸಗಿ ಸಾರಿಗೆ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಈ ತಂಡ ಕೆಲಸ ಮಾಡಲಿದೆ. ಮುಂದಿನ 2-3 ದಿನಗಳಲ್ಲಿ ಈ ಯೋಜನೆಯ ಸಂಪೂರ್ಣ ನೀಲಿ ನಕ್ಷೆ ಬಿಡುಗಡೆಯಾಗಲಿದ್ದು, ಇದು ಸಂಚಾರ ದಟ್ಟಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮೈಲಿಗಲ್ಲಾಗಲಿದೆ.

ಪೊಲೀಸ್ ವ್ಯವಸ್ಥೆಯು ಸಮಾಜದ ಭರವಸೆಯ ಕೇಂದ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿಗಳು ರೌಡಿಗಳೊಂದಿಗೆ ಹೊಂದಿರುವ ಅತಿನಿಕಟ ಸಂಬಂಧದ ಕುರಿತು ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಸಚಿವರು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ‘ಆಂಟಿ ರೌಡಿ ಸ್ಕ್ವಾಡ್’ಗಳನ್ನು ಬಲಪಡಿಸಲಾಗುವುದು. ಪೊಲೀಸ್ ಅಧಿಕಾರಿಗಳು ರೌಡಿಗಳ ಜನ್ಮದಿನದ ಆಚರಣೆಗಳಲ್ಲಿ ಭಾಗವಹಿಸುವುದು, ಅವರೊಂದಿಗೆ ಊಟದ ಮೇಜಿನ ಹಂಚಿಕೊಳ್ಳುವುದು ಅಥವಾ ಸಾರ್ವಜನಿಕವಾಗಿ ಅವರೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಳ್ಳುವಂತಹ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಪೊಲೀಸ್ ಮತ್ತು ಸಮಾಜಘಾತುಕ ಶಕ್ತಿಗಳ ನಡುವಿನ ಅಂತರವು ಭದ್ರತೆಯ ದೃಷ್ಟಿಯಿಂದ ಅತ್ಯಗತ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸೈಬರ್ ಅಪರಾಧಗಳ ತಡೆ: ತಂತ್ರಜ್ಞಾನದ ಸಮನ್ವಯ

ಬೆಂಗಳೂರು ಜಾಗತಿಕ ಮಟ್ಟದಲ್ಲಿ 4ನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿರುವ ಕಾರಣ, ಇಲ್ಲಿ ಸೈಬರ್ ಅಪರಾಧಿಗಳ ಸಂಖ್ಯೆಯೂ ಹೆಚ್ಚಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಐಟಿ-ಬಿಟಿ ಇಲಾಖೆ ಮತ್ತು ಗೃಹ ಇಲಾಖೆಗಳ ನಡುವೆ ಸೇತುವೆ ನಿರ್ಮಿಸಲಾಗುವುದು. ಸೈಬರ್ ಸುರಕ್ಷತೆಯನ್ನು ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಬಲಪಡಿಸಲಾಗುವುದು. ಮುಂದಿನ ವಾರ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ, ‘ಸೇಫ್ಟಿ ಗಾರ್ಡ್ ರೈಲ್ಸ್’ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಇದು ಸೈಬರ್ ವಂಚನೆಗಳನ್ನು ತಡೆಯುವಲ್ಲಿ ಮತ್ತು ನಾಗರಿಕರ ಡಿಜಿಟಲ್ ಆಸ್ತಿಯನ್ನು ರಕ್ಷಿಸುವಲ್ಲಿ ಹೊಸ ಭರವಸೆ ಮೂಡಿಸಲಿದೆ ಎಂದರು.

ಮಾದಕ ದ್ರವ್ಯ ಮುಕ್ತ ಬೆಂಗಳೂರು: ಗಡಿ, ಆಂತರಿಕ ಭದ್ರತೆ

ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗೃಹ ಇಲಾಖೆಯು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ನೆರೆ ರಾಜ್ಯಗಳಿಂದ ಬರುವ ಸಣ್ಣ ಪ್ರಮಾಣದ ಸೈಕೋಟ್ರೋಪಿಕ್ ಮಾತ್ರೆಗಳನ್ನು ನಿಯಂತ್ರಿಸಲು, ರಾಜ್ಯದ ಗಡಿ ಭಾಗಗಳಲ್ಲಿ ಅತ್ಯಾಧುನಿಕ ಟೆಸ್ಟಿಂಗ್ ಕಿಟ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಅಲ್ಲದೆ, ನಗರದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಮೇಲೆ ನಿಗಾ ವಹಿಸಲು ಮತ್ತು ಕಾನೂನುಬಾಹಿರವಾಗಿ ವಾಸ್ತವ್ಯ ಹೂಡಿದವರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚಿಸಲಾಗುತ್ತಿದೆ. ಜಾಗತಿಕ ಮಟ್ಟದ ಅತ್ಯುತ್ತಮ ಪೊಲೀಸ್ ಮಾದರಿಗಳನ್ನು ಅಧ್ಯಯನ ಮಾಡಿ, ಮುಂದಿನ ಎರಡು ವಾರಗಳಲ್ಲಿ ಮಾದಕ ದ್ರವ್ಯ ತಡೆಗೆ ಸಮಗ್ರ ನೀಲಿ ನಕ್ಷೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ನ್ಯಾಯಾಲಯಗಳಲ್ಲಿ ಪ್ರಕರಣಗಳು ದಶಕಗಳ ಕಾಲ ಬಾಕಿ ಉಳಿಯಲು ಪ್ರಮುಖ ಕಾರಣ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿನ ವಿಳಂಬ. ದೂರು ದಾಖಲಾದ ನಂತರ ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಚಾರ್ಜ್ ಶೀಟ್ ಸಲ್ಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಚಿವರು ನಿರ್ದೇಶಿಸಿದ್ದಾರೆ. ಪ್ರಾಸಿಕ್ಯೂಷನ್‌ನಲ್ಲಿ ತಾರತಮ್ಯ ಎಸಗುವ ಅಥವಾ ತನಿಖೆಯಲ್ಲಿ ವಿಳಂಬ ಮಾಡುವ ಪ್ರತಿಯೊಂದು ಘಟನೆಯನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದರು.

Read More
Next Story