
ಶಾಲಾ ಪಠ್ಯದಲ್ಲಿ ಅಂತರ್ಜಲ ಅಧ್ಯಾಯ ಅಳವಡಿಕೆಗೆ ರಾಜ್ಯ ಸರ್ಕಾರದ ಒತ್ತಾಯ
ಮೇಲ್ಮೈ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಮಾನವ ಕುಲವು ಅಂತರ್ಜಲವನ್ನೇ ನಂಬಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ವಾಸ್ತವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಬೇಕು.
ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮದಲ್ಲಿ ಅಂತರ್ಜಲ ಕುರಿತ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಎನ್‌ಸಿಇಆರ್‌ಟಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಜಲ ಸಂಪನ್ಮೂಲಗಳು ಎಂಬ ಅಧ್ಯಾಯವಿದೆ. ಆದರೆ, ಈ ಅಧ್ಯಾಯವು ಸಂಪೂರ್ಣವಾಗಿ ಮೇಲ್ಮೈ ಜಲಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡಿದ್ದು, ಅಂತರ್ಜಲದ ಗಂಭೀರತೆಯನ್ನು ಮರೆತಿದೆ. ಇಂದಿನ ಪರಿಸ್ಥಿತಿಯಲ್ಲಿ ಮೇಲ್ಮೈ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಮಾನವ ಕುಲವು ಅಂತರ್ಜಲವನ್ನೇ ನಂಬಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ವಾಸ್ತವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಬೇಕೆಂದು ಪ್ರತಿಪಾದಿಸಿದ್ದಾರೆ.
ಅಂತರ್ಜಲದ ಅವಲಂಬನೆ
ಭೂಮಿಯ ಮೇಲೆ ಲಭ್ಯವಿರುವ ಒಟ್ಟು ದ್ರವರೂಪದ ಸಿಹಿನೀರಿನಲ್ಲಿ ಸುಮಾರು ಶೇ. 97ರಷ್ಟು ಅಂತರ್ಜಲದ ರೂಪದಲ್ಲಿದೆ. ದೇಶದ ಶೇ. 50ರಷ್ಟು ಗೃಹಬಳಕೆ ಮತ್ತು ಶೇ. 25ರಷ್ಟು ಕೃಷಿ ಚಟುವಟಿಕೆಗಳು ಅಂತರ್ಜಲವನ್ನೇ ಅವಲಂಬಿಸಿವೆ. ಪ್ರತಿವರ್ಷ ನೀರಿನ ಬಳಕೆಯು ಶೇ. 1ರಷ್ಟು ಹೆಚ್ಚಾಗುತ್ತಿದ್ದು, ಹವಾಮಾನ ಬದಲಾವಣೆಯಿಂದಾಗಿ ಮಳೆ ಅಭಾವ ಉಂಟಾಗಿ ಮೇಲ್ಮೈ ಜಲದ ಲಭ್ಯತೆ ಕುಸಿಯುತ್ತಿದೆ. ಕಳೆದ ಎರಡು ದಶಕಗಳಲ್ಲಿ ಅತಿ-ಬಳಕೆಯಿಂದ ಅಪಾಯದ ಅಂಚಿನಲ್ಲಿರುವ ಪ್ರದೇಶಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜತೆಗೆ, ಅಂತರ್ಜಲ ಕಲುಷಿತಗೊಳ್ಳುತ್ತಿದ್ದು, ಗುಣಮಟ್ಟವು ಕುಸಿಯುತ್ತಿರುವುದು ಮುಂದಿನ ಪೀಳಿಗೆಗೆ ಗಂಭೀರ ಜಲಕ್ಷಾಮದ ಎಚ್ಚರಿಕೆಯ ಗಂಟೆಯಾಗಿದೆ.
ಜಾಗತಿಕ ಮಾದರಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳು
ವಿಶ್ವಸಂಸ್ಥೆಯು ನಿಗದಿಪಡಿಸಿರುವ 169 ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ 53 ಗುರಿಗಳು ನೇರವಾಗಿ ಅಂತರ್ಜಲಕ್ಕೆ ಸಂಬಂಧಿಸಿವೆ. ವಿಶೇಷವಾಗಿ ಗುರಿ 6 (ಶುದ್ಧ ನೀರು ಮತ್ತು ನೈರ್ಮಲ್ಯ) ಮತ್ತು 13 (ಹವಾಮಾನ ಕ್ರಿಯೆ) ಅಂತರ್ಜಲದ ಸಂರಕ್ಷಣೆಯನ್ನು ಕಡ್ಡಾಯಗೊಳಿಸಿವೆ. ಅಮೆರಿಕದ ಶಾಲಾ ಪಠ್ಯಗಳಲ್ಲಿ ಈಗಾಗಲೇ ಅಂತರ್ಜಲದ ಇಂಗುವಿಕೆ, ಪೆರ್ಮಿಯಬಲಿಟಿ, ಅಂತರ್ಜಲ ಹರಿವು ಹಾಗೂ ಕಲುಷಿತಗೊಳ್ಳುವಿಕೆಯ ಬಗ್ಗೆ ವಿಸ್ತೃತ ಅಧ್ಯಾಯಗಳನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ಭಾರತದಲ್ಲೂ ಪಠ್ಯಕ್ರಮವನ್ನು ನವೀಕರಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
ಪಠ್ಯದಲ್ಲಿ ಇರಬೇಕಾದ ಪ್ರಮುಖ ವಿಷಯಗಳು
ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಡಿಯಲ್ಲಿ, 2027-28ನೇ ಸಾಲಿಗೆ ಹೊಸ ಪಠ್ಯಪುಸ್ತಕ ಸಿದ್ಧವಾಗುತ್ತಿದೆ. ಈ ಹೊಸ ಪಠ್ಯದಲ್ಲಿ ಕೆಲವೊಂದು ವಿಷಯಗಳನ್ನು ಒಳಗೊಂಡ 'ಅಂತರ್ಜಲ' ಅಧ್ಯಾಯವನ್ನು ಸೇರಿಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಮಳೆನೀರು ಕೊಯ್ಲು ಮತ್ತು ಕೃತಕ ಅಂತರ್ಜಲ ಮರುಪೂರಣ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ. ನಿರ್ಮಿತ ಜೌಗು ಪ್ರದೇಶಗಳು ಮತ್ತು ಹಸಿರು ಮೇಲ್ಛಾವಣಿಯಂತಹ ಪ್ರಕೃತಿ ಆಧಾರಿತ ಪರಿಹಾರಗಳು. ಅಂತರ್ಜಲ ನಕ್ಷೆ ಮತ್ತು ಮಾಡೆಲಿಂಗ್ ಬಗ್ಗೆ ತಿಳುವಳಿಕೆ. ಐಒಟಿ ಮತ್ತು ರಿಮೋಟ್ ಸೆನ್ಸಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ಜಲಶಕ್ತಿ ಸಚಿವಾಲಯ, ಕೇಂದ್ರ ಅಂತರ್ಜಲ ಮಂಡಳಿ ಮತ್ತು ನೀತಿ ಆಯೋಗದ ನೀರು ಸಂರಕ್ಷಣಾ ಯೋಜನೆಗಳ ಮಾಹಿತಿ ಇರಬೇಕು ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎನ್.ಎಸ್. ಭೋಸರಾಜು, ಭವಿಷ್ಯದ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇವಲ ಸರ್ಕಾರಿ ಯೋಜನೆಗಳು ಸಾಲದು. ನಮ್ಮ ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆಯ ನೈಜ ಮಹತ್ವವನ್ನು ಶಾಲಾ ಹಂತದಲ್ಲೇ ತಿಳಿಸಿಕೊಡಬೇಕಿದೆ. ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಜಾಗತಿಕ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ರಾಜ್ಯ ಸರ್ಕಾರದ ಈ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

