
ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ಸಚಿವ ಎಂ.ಬಿ. ಪಾಟೀಲ್ ಆಗ್ರಹ
ಬೆಂಗಳೂರು-ಶಿವಮೊಗ್ಗ ಮಾರ್ಗವನ್ನು ಉಡಾನ್ ಯೋಜನೆಯಡಿ ಮುಂಬರುವ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸಬೇಕು. ಕಮರ್ಷಿಯಲ್ ಸೇವೆಯನ್ನು ಪುನರಾರಂಭಿಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಮಲೆನಾಡು ಮತ್ತು ಮಧ್ಯ ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಜೀವನಾಡಿಯಾಗಿರುವ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆಯನ್ನು ಪುನರಾರಂಭಿಸುವಂತೆ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ. ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಸ್ಥಗಿತಗೊಂಡಿರುವ ಈ ವಿಮಾನ ಸೇವೆಯನ್ನು ಉಡಾನ್ ಯೋಜನೆಯಡಿ ಮುಂಬರುವ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸುವಂತೆ ಅವರು ಕೋರಿದ್ದಾರೆ.
ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣವು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಮೂಲಕ ಅಭಿವೃದ್ಧಿಪಡಿಸಲಾದ ಈ ನಿಲ್ದಾಣವನ್ನು 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ಉತ್ತರ ಕನ್ನಡ ಸೇರಿದಂತೆ ವಿಶಾಲವಾದ ಮಲೆನಾಡು ಹಾಗೂ ಮಧ್ಯ ಕರ್ನಾಟಕ ಭಾಗದ ಜನರಿಗೆ ಇದು ಅತ್ಯಂತ ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ನಿಲ್ದಾಣ ಆರಂಭವಾದ ಕೆಲವೇ ದಿನಗಳಲ್ಲಿ ಇಂಡಿಗೋ ಸಂಸ್ಥೆಯು ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನಯಾನ ಸೇವೆ ಆರಂಭಿಸಿತ್ತು. ಪ್ರಯಾಣಿಕರಿಂದಲೂ ಈ ಮಾರ್ಗಕ್ಕೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ ಸಮಾಧಾನಕರವಾಗಿತ್ತು. ಆದರೆ, ಕಾರ್ಯಾಚರಣೆಯ ತಾಂತ್ರಿಕ ಅಡಚಣೆಗಳು ಮತ್ತು ನಿರಂತರ ಆರ್ಥಿಕ ಬೆಂಬಲದ ಕೊರತೆಯಿಂದಾಗಿ ಈ ಸೇವೆ ಇದೀಗ ಸ್ಥಗಿತಗೊಂಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಾಣಿಜ್ಯೋದ್ಯಮಿಗಳಿಗೆ ಬೆಂಗಳೂರಿನ ಸಂಪರ್ಕ ಕಡಿತಗೊಂಡಿದೆ. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳು ಮತ್ತು ಮಲೆನಾಡಿನ ಪ್ರವಾಸೋದ್ಯಮಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಯಾಣ ಕಷ್ಟಕರವಾಗಿದೆ. ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವ ರೋಗಿಗಳಿಗೆ ನೇರ ವಿಮಾನ ಸೌಲಭ್ಯವಿಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ದೇಶ-ವಿದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ. ಶಿವಮೊಗ್ಗ ಮತ್ತು ಸುತ್ತಮುತ್ತಲ ಪ್ರದೇಶಗಳು ಪ್ರವಾಸೋದ್ಯಮದ ದೃಷ್ಟಿಯಿಂದ ಅದ್ಭುತ ಸಾಮರ್ಥ್ಯವನ್ನು ಹೊಂದಿವೆ. ಜೋಗ ಜಲಪಾತ, ಆಗುಂಬೆ, ಸಾಗರದ ಸಿಗಂದೂರು, ಶರಾವತಿ ಹಿನ್ನೀರು ಪ್ರದೇಶಗಳು ಮತ್ತು ಮಲೆನಾಡಿನ ಕಾಫಿ-ಅಡಿಕೆ ಬೆಳೆಗಳ ಪ್ರದೇಶವು ದೇಶದ ಪ್ರಮುಖ ತಾಣಗಳಾಗಿವೆ. ಈ ಪ್ರದೇಶದ ಪ್ರಗತಿ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಸುಸ್ಥಿರ ವಿಮಾನಯಾನ ಸಂಪರ್ಕ ಅತ್ಯಗತ್ಯ ಎಂದಿದ್ದಾರೆ.
ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಮೂಲಸೌಕರ್ಯ
ಸಚಿವರಿಗೆ ಬರೆದ ಪತ್ರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಇರುವ ಸೌಲಭ್ಯಗಳ ಕುರಿತು ಉಲ್ಲೇಖಿಸಿದ್ದಾರೆ. ಮಾನದಂಡಗಳಿಗನುಗುಣವಾದ ಆಧುನಿಕ ಟರ್ಮಿನಲ್ ಕಟ್ಟಡ. ಸುಧಾರಿತ ಎಆರ್‌ಎಫ್‌ಎಫ್ ಸೇವೆಗಳು. ತಾಂತ್ರಿಕ ವ್ಯವಸ್ಥೆಗಳು ಸಂಪೂರ್ಣ ಸಿದ್ಧವಾಗಿವೆ. ಪ್ರಸ್ತುತ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಮತ್ತು ಇತರೆ ಸೌಕರ್ಯಗಳ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಇದು ರಾತ್ರಿಯ ವೇಳೆಯಲ್ಲೂ ಮತ್ತು ಎಲ್ಲಾ ಹವಾಮಾನಗಳಲ್ಲೂ ವಿಮಾನಗಳ ಹಾರಾಟಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ಕೇಂದ್ರಕ್ಕೆ ಸಚಿವರ ನಾಲ್ಕು ಪ್ರಮುಖ ಬೇಡಿಕೆಗಳು
ಸಚಿವ ಎಂ.ಬಿ. ಪಾಟೀಲ್ ತಮ್ಮ ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ನಾಲ್ಕು ನಿರ್ದಿಷ್ಟ ಕೋರಿಕೆಗಳನ್ನು ಸಲ್ಲಿಸಿದ್ದಾರೆ. ಬೆಂಗಳೂರು-ಶಿವಮೊಗ್ಗ ಮಾರ್ಗವನ್ನು ಉಡಾನ್ ಯೋಜನೆಯಡಿ ಮುಂಬರುವ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸಬೇಕು. ವಿಮಾನಯಾನ ಸಂಸ್ಥೆಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹ ನೀಡಲು ಅಗತ್ಯವಿರುವ ವಿಜಿಬಲಿಟಿ ಗ್ಯಾಪ್ ಫಡಿಂಗ್ (ವಿಜಿಎಫ್) ಒದಗಿಸಬೇಕು. ಪ್ರಾದೇಶಿಕ ವಿಮಾನಗಳು ಅಥವಾ ಟರ್ಬೊಪ್ರೊಪ್ ವಿಮಾನಗಳ ಬಳಕೆ ಸೇರಿದಂತೆ ಕಾರ್ಯಾಚರಣೆಯ ಸರಳೀಕರಣಕ್ಕೆ ಅವಕಾಶ ನೀಡಬೇಕು. ಕಮರ್ಷಿಯಲ್ ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ಕೇಂದ್ರ ಸಚಿವಾಲಯವು ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ಉಡಾನ್ ಯೋಜನೆಯ ಮೂಲ ಉದ್ದೇಶವೇ ಸಣ್ಣ ನಗರಗಳನ್ನು ಪ್ರಮುಖ ಮಹಾನಗರಗಳೊಂದಿಗೆ ಸಂಪರ್ಕಿಸುವುದಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಈ ಗುರಿಯನ್ನು ಸಾಧಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ. ಸಚಿವ ಎಂ.ಬಿ. ಪಾಟೀಲರ ಈ ಮನವಿಯು ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಸೂಕ್ತವಾಗಿದೆ. ಕೇಂದ್ರ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಅನುಮೋದನೆ ನೀಡಿದ್ದೇ ಆದಲ್ಲಿ, ಮಲೆನಾಡಿನ ಅಭಿವೃದ್ಧಿಗೆ ಹೊಸ ಚಾಲನೆ ಸಿಗಲಿದೆ. ಈ ವಿಮಾನ ಸೇವೆಯು ಮಲೆನಾಡಿನ ಲಕ್ಷಾಂತರ ಜನರ ಕನಸಾಗಿದ್ದು, ದೈನಂದಿನ ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಸಚಿವರ ಮಧ್ಯಪ್ರವೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯತೆಯನ್ನು ಹೆಚ್ಚಿಸುವುದಲ್ಲದೆ, ಪ್ರಾದೇಶಿಕ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಹೇಳಲಾಗಿದೆ.

