x

ಸಿಎಂ ಡಿಕೆಶಿಗೆ ಈಗ ʼಸಚಿವ ನಾಗೇಂದ್ರ ಸಂಕಷ್ಟʼ, ಜತೆಗೆ ಬಿಡದಿ ಪಾದಯಾತ್ರೆಯ ಬಿಸಿ

ಹಗರಣದ ಅರೋಪದಲ್ಲಿ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಡಿ.ಕೆ. ಶಿವಕುಮಾರ್‌ ಅವರು ಸಿಎಂ ಅದ ಸಚಿವ ಸಂಪುಟಕ್ಕೆ ಸೇರಿಸಿಕೊಂಡ ಬಳಿಕ ಈಗ ಮತ್ತೆ ಪ್ರಕರಣ ಕಾವು ಪಡೆದುಕೊಂಡಿದೆ.


Click the Play button to hear this message in audio format

ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ತನಿಖಾ ಸಂಸ್ಥೆಗಳಿಂದ ಹೊಸ ಸಂಕಷ್ಟ ಎದುರಾಗಿದೆ. ಹಗರಣದ ಅರೋಪದಲ್ಲಿ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಡಿ.ಕೆ. ಶಿವಕುಮಾರ್‌ ಅವರು ಸಿಎಂ ಅದ ಸಚಿವ ಸಂಪುಟಕ್ಕೆ ಸೇರಿಸಿಕೊಂಡ ಬಳಿಕ ಈಗ ಮತ್ತೆ ಪ್ರಕರಣ ಕಾವು ಪಡೆದುಕೊಂಡಿದೆ.

‘ವಾಲ್ಮೀಕಿ ಅಭಿವೃದ್ಧಿ ನಿಗಮ’ದ ಅನುದಾನ ಅಕ್ರಮ ವರ್ಗಾವಣೆ ಪ್ರಕರಣ ಹೊಸ ರೂಪ ಪಡೆದುಕೊಂಡಿದ್ದು, ಜಾರಿ ನಿರ್ದೇಶನಾಲಯ (ED) ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಸಚಿವಗಿರಿ ಸಿಕ್ಕರೂ ಖಾತೆ ಸಿಗುವ ಮುನ್ನವೇ ನಾಗೇಂದ್ರ ಅವರ ಮಂತ್ರಿ ಕುರ್ಗೆಗೆ ಕಂಟಕ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಜಾಮೀನು ನೀಡುವಾಗ ಕೋರ್ಟ್‌ ವಿಧಿಸಿದ್ದ ಷರತ್ತು ಉಲ್ಲಂಘಿಸಿ, ಅನುಮತಿಯನ್ನೇ ಪಡೆಯದೆ ನಾಗೇಂದ್ರ ದೆಹಲಿ ಪ್ರವಾಸ ಮಾಡಿದ್ದಾರೆ ಎಂಬ ಆರೋಪ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಗೆ ಮುಂದಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡಿತ್ತು.

ಆದರೆ, ಜುಲೈ 15ರಂದು ಇಂಡಿಗೋ ವಿಮಾನದಲ್ಲಿ ಬೆಳಿಗ್ಗೆ ಮತ್ತು ಜುಲೈ 26ರಂದು ಅಪರಾಹ್ನ ಇಂಡಿಗೋ ವಿಮಾನದಲ್ಲಿ ದೆಹಲಿಗೆ ಮತ್ತು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಬಗ್ಗೆ ದಾಖಲೆ ಲಭ್ಯವಾದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಚಿವ ಸಂಪುಟಕ್ಕೆ ಮತ್ತೊಂದು ಸವಾಲು ಎದುರಾಗುವ ಸಾಧ್ಯತೆ ಇದೆ. ಆಗಸ್ಟ್‌ ೧೩ ರಂದು ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯ ವಿರೋಧ ಪಕ್ಷಗಳಿಗೆ ಪ್ರಧಾನ ಅಸ್ತ್ರವಾಗುವ ಸಾಧ್ಯತೆ ಹೆಚ್ಚಿದೆ.

ಈ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿಗೆ ಸೋಮವಾರ ಪ್ರವಾಸ ಕೈಗೊಳ್ಳಲಿದ್ದು, ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯಾದ ಬಳಿಕ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಪಾದಯಾತ್ರೆ

ಬಿಡಿದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಜೆಡಿಎಸ್-ಬಿಜೆಪಿ ಮೈತ್ರಿಕೂಟ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಇಳಿದಿದ್ದು, ಭಾನುವಾರ ಬಿಡದಿಯಿಂದ ಬೆಂಗಳೂರಿನತ್ತ ಬೃಹತ್ ಪಾದಯಾತ್ರೆಯನ್ನು ಆರಂಭಿಸುವ ಮೂಲಕ ರಣಕಹಳೆ ಮೊಳಗಿಸಿದೆ. ಬಿಡದಿಯಿಂದ ಸಾಗುತ್ತಿರುವ ಈ ಪಾದಯಾತ್ರೆಯು ಮೈತ್ರಿಪಕ್ಷಗಳ ಒಗ್ಗಟ್ಟನ್ನು ಪ್ರದರ್ಶಿಸುವುದರ ಜತೆಗೆ, ಮುಂಬರುವ ದಿನಗಳಲ್ಲಿ ಆಡಳಿತ ಪಕ್ಷದ ವಿರುದ್ಧದ ಜನಾಭಿಪ್ರಾಯವನ್ನು ತೀವ್ರಗೊಳಿಸುವ ಮುನ್ಸೂಚನೆಯನ್ನು ನೀಡಿದೆ. ಆದರೆ, ಮೈತ್ರಿಕೂಟದ ಈ ಪಾದಯಾತ್ರೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ವಿಪಕ್ಷಗಳ ಈ ನಡೆಯನ್ನು 'ಪ್ರಾಯಶ್ಚಿತ್ತ ಪಾದಯಾತ್ರೆ' ಎಂದು ವ್ಯಂಗ್ಯವಾಡಿದ್ದಾರೆ. ಬಿಡದಿ ಯೋಜನೆಯನ್ನು ಜಾರಿಗೆ ತಂದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಈಗ ಈ ಯೋಜನೆ ವಿರುದ್ಧ ವಿರೋಧಾಭಾಸದ ಹೆಜ್ಜೆಯನ್ನಿಟ್ಟಿದ್ದು, ಈ ರೀತಿ 'ಪ್ರಾಯಶ್ಚಿತ್ತ' ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಸಹಿಸದೇ ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಇಂತಹ ಪಾದಯಾತ್ರೆಗಳ ನಾಟಕವಾಡುತ್ತಿವೆ ಎಂದು ಆರೋಪಿಸಿರುವ ಕೈ ನಾಯಕರು, ವಿಪಕ್ಷಗಳ ಪ್ರತಿಯೊಂದು ಆರೋಪಕ್ಕೂ ಸೂಕ್ತ ಪುರಾವೆಗಳೊಂದಿಗೆ ತಕ್ಕ ಉತ್ತರ ನೀಡಲು ಸಿದ್ಧ ಇರುವುದಾಗಿ ಹೇಳಿದ್ದಾರೆ.

Read More
Next Story