
ರಾಜ್ಯಾದ್ಯಂತ 3 ಕೋಟಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಚಿವ ಬೈರತಿ ಸುರೇಶ್ ಚಾಲನೆ
ಶಕ್ತಿ ಯೋಜನೆಯು ರಾಜ್ಯಾದ್ಯಂತ ಕೋಟ್ಯಂತರ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದೆ. ಈ ಯೋಜನೆ ಜಾರಿಯಾದ ಬಳಿಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ. 40 ರಷ್ಟು ಹೆಚ್ಚಾಗಿದೆ.
ಕರ್ನಾಟಕ ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಸುಗಮ, ಪಾರದರ್ಶಕ ಮತ್ತು ತಾಂತ್ರಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ನೂತನ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೈರತಿ ಸುರೇಶ್ ಮಹತ್ವದ ಘೋಷಣೆಗಳನ್ನು ಹೊರಡಿಸಿದ್ದಾರೆ. ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಅವರು, ಶಕ್ತಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು 'ಸ್ಮಾರ್ಟ್ ಕಾರ್ಡ್' ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ರಾಜ್ಯಾದ್ಯಂತ ಕೋಟ್ಯಂತರ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದೆ. ಈ ಯೋಜನೆ ಜಾರಿಯಾದ ಬಳಿಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ. 40 ರಷ್ಟು ಹೆಚ್ಚಾಗಿದೆ. ಈ ಭಾರಿ ಜನದಟ್ಟಣೆಯನ್ನು ನಿರ್ವಹಿಸಲು ಮತ್ತು ಪ್ರಯಾಣಿಕರ ದತ್ತಾಂಶವನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು ಸ್ಮಾರ್ಟ್ ಕಾರ್ಡ್ ಅತ್ಯಗತ್ಯವಾಗಿದೆ. ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ಸಂಪೂರ್ಣ ಉಚಿತವಾಗಿ ವಿತರಿಸಲಾಗುತ್ತದೆ. ಇದು ಅವರ ಗುರುತಿನ ಚೀಟಿಯಾಗಿಯೂ ಕೆಲಸ ಮಾಡಲಿದ್ದು, ಪ್ರತಿ ಬಾರಿಯೂ ಬಸ್ ಏರುವಾಗ ಹಾರ್ಡ್ ಕಾಪಿ ತೋರಿಸುವ ಅಗತ್ಯವನ್ನು ತಪ್ಪಿಸುತ್ತದೆ.
ಪುರುಷ ಪ್ರಯಾಣಿಕರಿಗೆ ಮೆಟ್ರೋ ಕಾರ್ಡ್ ಮಾದರಿಯಲ್ಲಿ ಈ ಕಾರ್ಡ್ ಲಭ್ಯವಿರಲಿದೆ. ಅವರು ಹಣ ಪಾವತಿಸಿ ಕಾರ್ಡ್ ಪಡೆದುಕೊಳ್ಳಬಹುದು ಮತ್ತು ಹಣ ಖಾಲಿಯಾದಾಗ ಆನ್‌ಲೈನ್ ಅಥವಾ ಬಸ್ ಡಿಪೋಗಳಲ್ಲಿ ರೀಚಾರ್ಜ್ ಮಾಡಿಕೊಳ್ಳಬಹುದು. ಈ ಕಾರ್ಡ್ ವ್ಯವಸ್ಥೆಯಿಂದ ಪ್ರತಿ ಬಸ್‌ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದಾರೆ, ಮಾರ್ಗಗಳ ಆದಾಯ ಎಷ್ಟು ಎಂಬುದು ನೈಜ ಸಮಯದಲ್ಲಿ ತಿಳಿದುಬರುತ್ತದೆ. ಇದರಿಂದ ಸೋರಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಾಗತಿಕ ಟೆಂಡರ್ - ಅನುಷ್ಠಾನ
ರಾಜ್ಯದಲ್ಲಿ ಸುಮಾರು 3 ಕೋಟಿಗೂ ಅಧಿಕ ಜನರಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಇಲಾಖೆ ಹೊಂದಿದೆ. ಇದೊಂದು ಬೃಹತ್ ಯೋಜನೆಯಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭದ್ರತೆಯುಳ್ಳ ಕಾರ್ಡ್‌ಗಳನ್ನು ಸಿದ್ಧಪಡಿಸಲು ಜಾಗತಿಕ ಟೆಂಡರ್ ಕರೆಯಲಾಗುವುದು. ಸದ್ಯಕ್ಕೆ ಪೈಲಟ್ ಯೋಜನೆಯಡಿ ಆಯ್ದ ಮಾರ್ಗಗಳಲ್ಲಿ ಇದನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸ್ಮಾರ್ಟ್ ಕಾರ್ಡ್‌ಗಳು ಎನ್.ಎಫ್.ಸಿ ತಂತ್ರಜ್ಞಾನವನ್ನು ಹೊಂದಿರಲಿದ್ದು, ಬಸ್‌ನಲ್ಲಿರುವ ಯಂತ್ರದ ಬಳಿ ಕಾರ್ಡ್ ತೋರಿಸಿದ ತಕ್ಷಣ ಪ್ರಯಾಣಿಕರ ವಿವರ ದೃಢೀಕರಣವಾಗಲಿದೆ.
ಸಾರಿಗೆ ಬಲವರ್ಧನೆ - 5000 ಹೊಸ ಬಸ್‌ಗಳ ಸೇರ್ಪಡೆ
ಸ್ಮಾರ್ಟ್ ಕಾರ್ಡ್‌ಗಳ ಜೊತೆಗೆ ಸಾರಿಗೆ ಸೇವೆಯನ್ನು ಮೇಲ್ದರ್ಜೆಗೇರಿಸಲು ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದಾರೆ. ವಿವಿಧ ನಿಗಮಗಳ ಬೇಡಿಕೆಗೆ ಅನುಗುಣವಾಗಿ 1000 ಹೊಸ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಪರಿಸರ ಸ್ನೇಹಿ ಸಂಚಾರಕ್ಕಾಗಿ ಕೇಂದ್ರ ಸರ್ಕಾರದ ಅನುದಾನದೊಂದಿಗೆ 4000 ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಇಂಧನ ವೆಚ್ಚ ತಗ್ಗಿ ನಿಗಮಗಳಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ನಿರ್ಭಯ ಯೋಜನೆಯಡಿ ಈಗಾಗಲೇ 1 ಲಕ್ಷಕ್ಕೂ ಅಧಿಕ ವಾಣಿಜ್ಯ ವಾಹನಗಳಲ್ಲಿ 'ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಂ' ಅಳವಡಿಸಲಾಗಿದೆ. ಇನ್ನುಳಿದ 4-5 ಲಕ್ಷ ವಾಹನಗಳಲ್ಲಿ ಮುಂದಿನ ಮೂರರಿಂದ ನಾಲ್ಕು ತಿಂಗಳೊಳಗೆ ಈ ವ್ಯವಸ್ಥೆ ಕಡ್ಡಾಯವಾಗಿರಬೇಕು. ಇದು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವುದಲ್ಲದೆ, ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ತಕ್ಷಣದ ನೆರವು ಒದಗಿಸಲು ಸಹಕಾರಿಯಾಗಿದೆ.

