ಮೇಕೆದಾಟು: ತಮಿಳುನಾಡಿಗೆ ವಾಟಾಳ್ ಎಚ್ಚರಿಕೆ; ಜು.15ಕ್ಕೆ ಗಡಿ ಬಂದ್
ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೇವಲ ಜಾತಿ ಮತ್ತು ಕೋಮು ರಾಜಕಾರಣದಲ್ಲಿ ಮುಳುಗಿವೆ ಹೊರತು, ಮೇಕೆದಾಟು, ಕಾವೇರಿ ಅಥವಾ ಬೆಳಗಾವಿ ಗಡಿ ವಿವಾದದಂತಹ ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚಿಸುತ್ತಿಲ್ಲ ಎಂದು ವಾಟಾಳ್ ನಾಗರಾಜ್ ದೂರಿದರು.
ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ನಿರಂತರವಾಗಿ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ, ಮುಂಬರುವ ಜುಲೈ 15 ರಂದು ತಮಿಳುನಾಡು ಗಡಿಭಾಗದಲ್ಲಿ ಕಂಪ್ಲೀಟ್ ಬಂದ್ ಆಚರಿಸಲಾಗುವುದು ಎಂದು ಕನ್ನಡಪರ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಅತ್ತಿಬೆಲೆ ಹಾಗೂ ಹೊಸೂರು ಗಡಿಭಾಗದಲ್ಲಿ ಅಂದು ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ತಮಿಳುನಾಡು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಯಾರೇ ಮುಖ್ಯಮಂತ್ರಿಯಾಗಲಿ, ಕಾವೇರಿ ಮತ್ತು ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ವಿರುದ್ಧ ಖ್ಯಾತೆ ತೆಗೆಯುವುದನ್ನು ರೂಢಿಸಿಕೊಂಡಿದ್ದಾರೆ. ಪ್ರಸ್ತುತ ಅಲ್ಲಿನ ನಟ, ರಾಜಕಾರಣಿ ವಿಜಯ್ ಜೋಸೆಫ್ (ದಳಪತಿ ವಿಜಯ್) ಹಾಗೂ ಅಲ್ಲಿನ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಒಂದು ಇಟ್ಟಿಗೆ ಇಡಲೂ ಬಿಡುವುದಿಲ್ಲ ಎಂದು ಜವಾಬ್ದಾರಿಯಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜಕಾರಣಿಗಳು, ಚಲನಚಿತ್ರ ರಂಗದ ಮೌನಕ್ಕೆ ಆಕ್ರೋಶ
ಕರ್ನಾಟಕದ ಹಿತಾಸಕ್ತಿ ಬಲಿಯಾಗುತ್ತಿದ್ದರೂ ರಾಜ್ಯದ ರಾಜಕಾರಣಿಗಳು, ಸಾಹಿತಿಗಳು ಹಾಗೂ ಕನ್ನಡ ಚಿತ್ರರಂಗದ ನಟರು ಮೌನಕ್ಕೆ ಶರಣಾಗಿರುವುದಕ್ಕೆ ವಾಟಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ತಮಿಳುನಾಡಿನಲ್ಲಿ ಸಿನಿಮಾ ನಟರು ರಾಜ್ಯದ ಪರವಾಗಿ ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ. ಆದರೆ ನಮ್ಮ ರಾಜ್ಯದ ನಟರು ಗೊರಕೆ ಹೊಡೆದು ಮಲಗಿದ್ದಾರೆ. ನಮ್ಮ ಕೂಗಿಗೆ ಎಚ್ಚರವಾಗುವ ಇವರಿಗೆ ಕನ್ನಡದ ನೆಲ, ಜಲದ ಬಗ್ಗೆ ಗಂಭೀರತೆ ಇಲ್ಲ. ಬಾಯಿ ಬಿಟ್ಟರೆ ಎಲ್ಲಿ ವ್ಯಾಪಾರಕ್ಕೆ ತೊಂದರೆಯಾಗುತ್ತದೋ ಎನ್ನುವ ಭೀತಿ ಇವರಲ್ಲಿದೆ. ಇವರು ನೆರೆಯ ರಾಜ್ಯದ ಕಲಾವಿದರನ್ನು ನೋಡಿ ಕಲಿಯಬೇಕು."ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೇವಲ ಜಾತಿ ಮತ್ತು ಕೋಮು ರಾಜಕಾರಣದಲ್ಲಿ ಮುಳುಗಿವೆ ಹೊರತು, ಮೇಕೆದಾಟು, ಕಾವೇರಿ ಅಥವಾ ಬೆಳಗಾವಿ ಗಡಿ ವಿವಾದದಂತಹ ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚಿಸುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಪಾದಯಾತ್ರೆ ಕೇವಲ 'ಪಂಚತಾರಾ ಯಾತ್ರೆ'
ಮೂರು ವರ್ಷಗಳ ಹಿಂದೆ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಕಟುವಾಗಿ ಟೀಕಿಸಿದ ಅವರು, "ಅದು ಪಾದಯಾತ್ರೆಯಲ್ಲ, ಅದೊಂದು ಪಂಚತಾರಾ (ಫೈವ್ ಸ್ಟಾರ್) ಯಾತ್ರೆ. ಉತ್ತಮ ಊಟ, ತಿಂಡಿ ಸವಿದು, ಆರಾಮವಾಗಿ ಮಲಗಿ ಬೆಂಗಳೂರು ತಲುಪಿದ ತಕ್ಷಣ ತಮ್ಮ ಕಾರುಗಳನ್ನು ಹತ್ತಿ ಮನೆಗೆ ಹೋದರು. ಈಗ ಅವರದೇ ಸರ್ಕಾರ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಯೋಜನೆಗೆ ಎಷ್ಟು ಜಮೀನು ಬೇಕು, ಸರ್ವೇ ಕಾರ್ಯ ಏನಾಗಿದೆ ಎನ್ನುವುದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಪ್ರಸ್ತುತ ಸರ್ಕಾರದ ನಿಲುವನ್ನು ಪ್ರಶ್ನಿಸಿದರು.
ʼದ ಫೆಡರಲ್ ಕರ್ನಾಟಕʼಕ್ಕೆ ವಾಟಾಳ್ ನಾಗರಾಜ್ ಅವರ ನೀಡಿರುವ ಸಂದರ್ಶನದ ಪೂರ್ಣ ಪಾಠ ಕೇಳಲು ಮೇಲಿನ ವಿಡಿಯೋ ನೋಡಿ..

