ಮೇಕೆದಾಟು ಯೋಜನೆಗೆ ಶೀಘ್ರ ಅನುಮೋದನೆ ನೀಡಲು ಕೇಂದ್ರ ಜಲ ಆಯೋಗಕ್ಕೆ ಮನವಿ
x

ನವದೆಹಲಿಯಲ್ಲಿ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಜಲ ಆಯೋಗದ ಅಧ್ಯಕ್ಷರೊಂದಿಗೆ ಸಭೆ ನಡೆಸಿದರು

ಮೇಕೆದಾಟು ಯೋಜನೆಗೆ ಶೀಘ್ರ ಅನುಮೋದನೆ ನೀಡಲು ಕೇಂದ್ರ ಜಲ ಆಯೋಗಕ್ಕೆ ಮನವಿ

ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಜತೆಗೆ ಬರದ ವರ್ಷಗಳಲ್ಲಿ ತಮಿಳುನಾಡಿಗೆ ನಿಗದಿತ ನೀರನ್ನು ನಿಯಮಿತವಾಗಿ ಹರಿಸಬಹುದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.


ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಅಗತ್ಯವಿರುವ ತಾಂತ್ರಿಕ ಅನುಮೋದನೆಯನ್ನು ಶೀಘ್ರದಲ್ಲೇ ನೀಡುವಂತೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಉನ್ನತ ಮಟ್ಟದ ನಿಯೋಗವು ಕೇಂದ್ರ ಜಲ ಆಯೋಗವನ್ನು ಒತ್ತಾಯಿಸಿದೆ. ಮೇಕೆದಾಟು ಯೋಜನೆ ಸಮಗ್ರ ಯೋಜನಾ ವರದಿ ಕುರಿತು ಕೇಂದ್ರ ಜಲ ಆಯೋಗವು ಈ ಹಿಂದೆ ವ್ಯಕ್ತಪಡಿಸಿದ್ದ ಆಕ್ಷೇಪಗಳು ಹಾಗೂ ತಾಂತ್ರಿಕ ಅಂಶಗಳಿಗೆ ಕರ್ನಾಟಕ ಸಲ್ಲಿಸಿರುವ ಸಮಗ್ರ ಅನುಸರಣಾ ವರದಿಯನ್ನು ಸಚಿವರು ಆಯೋಗದ ಮುಂದಿಟ್ಟು ವಿಸ್ತೃತವಾಗಿ ಚರ್ಚಿಸಿದ್ದಾರೆ.

ಸ್ಥಳೀಯ ವಾಸ್ತವಿಕ ಚಿತ್ರಣ ಹಾಗೂ ತಾಂತ್ರಿಕ ಸ್ಪಷ್ಟತೆಗಳ ಕುರಿತು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೆ, ಇಲಾಖೆ ವತಿಯಿಂದ ಅಗತ್ಯವಿರುವ ಹೆಚ್ಚುವರಿ ತಾಂತ್ರಿಕ ಸ್ಪಷ್ಟೀಕರಣಗಳನ್ನು ಸಮರ್ಥವಾಗಿ ಒದಗಿಸಿ ಯೋಜನೆಯ ತ್ವರಿತ ಮುನ್ನಡೆಗೆ ಕೇಂದ್ರ ಜಲ ಆಯೋಗವು ಸಂಪೂರ್ಣ ಸಹಕಾರ ನೀಡಬೇಕೆಂದು ಸಚಿವರು ಕೋರಿದ್ದಾರೆ.

ವಿಶೇಷವಾಗಿ, ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆಯಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮೇಕೆದಾಟು ಯೋಜನೆ ಅನಿವಾರ್ಯತೆಯನ್ನು ಸಚಿವರು ಬಲವಾಗಿ ಪ್ರತಿಪಾದಿಸಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಬೆಂಗಳೂರು ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ದಾಹ ತಣಿಯುವುದರ ಜೊತೆಗೆ ಜಲವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ, ಬರಗಾಲದ ಸಂಕಷ್ಟದ ವರ್ಷಗಳಲ್ಲಿ ತಮಿಳುನಾಡಿಗೆ ನಿಗದಿತ ನೀರನ್ನು ನಿಯಮಿತವಾಗಿ ಹರಿಸಲು ಈ ಸಮತೋಲನ ಜಲಾಶಯವು ಎರಡೂ ರಾಜ್ಯಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ವಿವರಿಸಿದ್ದಾರೆ.

ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬಲವಾದ ರಾಜಕೀಯ ಬದ್ಧತೆಯನ್ನು ಹೊಂದಿದ್ದು, ತಾಂತ್ರಿಕ ಪರಿಶೀಲನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಆದಷ್ಟು ಬೇಗ ಯೋಜನೆಗೆ ಹಸಿರು ನಿಶಾನೆ ತೋರಬೇಕೆಂದು ನಿಯೋಗವು ಸಿಡಬ್ಲ್ಯೂಸಿ ಅಧ್ಯಕ್ಷರನ್ನು ಒತ್ತಾಯಿಸಿತು.

ಈ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಎಂಜಿನಿಯರ್ ಮಹೇಶ್ ಹಾಗೂ ಸಿಡಬ್ಲ್ಯೂಸಿ ನೀರು ಯೋಜನೆ ಮತ್ತು ಯೋಜನಾ ವಿಭಾಗದ ಸದಸ್ಯ ಯೋಗೇಶ್ ಪೈತಾಂಕರ್ ನಿಯೋಗದಲ್ಲಿ ಇದ್ದರು.

Read More
Next Story