ಮುಂದಿನ ಆಗಸ್ಟ್‌ ತಿಂಗಳೊಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ?
x

ಮುಂದಿನ ಆಗಸ್ಟ್‌ ತಿಂಗಳೊಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ?

ಕಾವೇರಿ ಕೊಳ್ಳದ ಜನರ ಕುಡಿಯುವ ನೀರು ಹಾಗೂ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಮೇಕೆದಾಟು ಯೋಜನೆಯೇ ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಲಿದೆ ಎಂದು ಜಲಸಂಪನ್ಮೂಲ ಸಚಿವರು ಹೇಳಿದ್ದಾರೆ.


ಕಾವೇರಿ ಕೊಳ್ಳದ ಜಲ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮುಂದಿನ ಆಗಸ್ಟ್ ತಿಂಗಳ ಒಳಗಾಗಿ 'ಮೇಕೆದಾಟು ಯೋಜನೆ'ಗೆ ಶಂಕುಸ್ಥಾಪನೆ ನೆರವೇರಿಸಲು ತೀರ್ಮಾನಿಸಿದೆ.

ಶನಿವಾರ ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು, ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಪರಿಷ್ಕೃತ ವಿಸ್ಕೃತ ಯೋಜನಾ ವರದಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮರು ಸಲ್ಲಿಸಲಾಗಿದೆ. ತಾಂತ್ರಿಕ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಇಲಾಖೆಯ ತಜ್ಞರ ತಂಡಗಳು ಭರದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

20 ಸಾವಿರ ಎಕರೆ ಭೂಮಿ ಗುರುತು

ಯೋಜನೆಯ ಭೂಸ್ವಾಧೀನ ಕುರಿತು ವಿವರ ನೀಡಿದ ಸಚಿವರು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒಟ್ಟು 12,500 ಎಕರೆ ಜಮೀನಿನ ಅಗತ್ಯವಿದೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಸುರಕ್ಷತೆ ದೃಷ್ಟಿಯಿಂದ 20 ಸಾವಿರ ಪ್ರದೇಶವನ್ನು ಗುರುತಿಸಲಾಗಿದೆ. ಯೋಜನೆಯಿಂದ ನಷ್ಟವಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಬೇರೊಂದು ಕಡೆ ಸೂಕ್ತ ಭೂಮಿಯನ್ನು ಬಿಟ್ಟುಕೊಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಇಬ್ಬರು ನೀರಾವರಿ ಅಧಿಕಾರಿಗಳ ನಿಯೋಜನೆ

ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಸಂಬಂಧಪಟ್ಟ ಕೇಂದ್ರ ಪ್ರಾಧಿಕಾರಗಳಿಂದ ಶೀಘ್ರ ಅನುಮತಿ ಪಡೆಯುವ ಉದ್ದೇಶದಿಂದ ದೆಹಲಿಯಲ್ಲಿಯೇ ಇಬ್ಬರು ಹಿರಿಯ ನೀರಾವರಿ ಅಧಿಕಾರಿಗಳನ್ನು ನಿರಂತರ ನಿಗಾ ವಹಿಸಲು ನೇಮಕ ಮಾಡಲಾಗಿದೆ.

ಕಾವೇರಿ ಕೊಳ್ಳದ ಜನರ ಕುಡಿಯುವ ನೀರು ಹಾಗೂ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಮೇಕೆದಾಟು ಯೋಜನೆಯೇ ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಲಿದೆ ಎಂದು ಹೇಳಿದ್ದಾರೆ.

ತಮಿಳುನಾಡಿಗೆ ಅನಗತ್ಯ ನೀರು ಹರಿಸಿಲ್ಲ

ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂಬ ರೈತ ಸಂಘಟನೆಗಳ ಆರೋಪ ತಳ್ಳಿ ಹಾಕಿದ ಸಚಿವರು, ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಎದುರಾಗಿದ್ದ ಪರಿಸ್ಥಿತಿಯಿಂದಾಗಿ ತಮಿಳುನಾಡಿಗೆ ನಿಗದಿತ ನೀರು ಬಿಡಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಪ್ರಾಧಿಕಾರವು ದಿನಕ್ಕೆ 12 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಸೂಚಿಸಿದೆ.

ಕಬಿನಿ ಜಲಾಶಯದಿಂದಲೇ ಸುಮಾರು 10 ಸಾವಿರ ಕ್ಯುಸೆಕ್ ನೀರು ಹೊರಹೋಗುತ್ತಿದ್ದು, ಇದರೊಂದಿಗೆ ನದಿಯ ಸೋರಿಕೆ ನೀರು ಸೇರಿ ತಮಿಳುನಾಡು ತಲುಪುತ್ತಿದೆ. ಕೆಆರ್ಎಸ್ನಿಂದ ಪ್ರತ್ಯೇಕವಾಗಿ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ರೈತರು ಸರ್ಕಾರದ ಮೇಲೆ ನಂಬಿಕೆ ಇಡಬೇಕು. ಕಾವೇರಿ ಕೊಳ್ಳದ ರೈತರ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಬಲಿ ಕೊಡುವುದಿಲ್ಲ ಎಂದು ಚಲುವರಾಯಸ್ವಾಮಿ ಅಭಯ ನೀಡಿದ್ದಾರೆ.

Read More
Next Story