ಮೇಕೆದಾಟು ತಡೆಯಲು ತಮಿಳುನಾಡಿಗೆ ಹಕ್ಕಿಲ್ಲ: ಕೇಂದ್ರ ಜಲ ಆಯೋಗದ ತೀರ್ಮಾನವೇ ಅಂತಿಮ-ಡಿಕೆಶಿ
x

ಮೇಕೆದಾಟು ತಡೆಯಲು ತಮಿಳುನಾಡಿಗೆ ಹಕ್ಕಿಲ್ಲ: ಕೇಂದ್ರ ಜಲ ಆಯೋಗದ ತೀರ್ಮಾನವೇ ಅಂತಿಮ-ಡಿಕೆಶಿ

ಮೇಕೆದಾಟು ಯೋಜನೆಯ ಡಿಪಿಆರ್ ಸಿದ್ಧವಾಗಿದ್ದು, ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಮುಳುಗಡೆಯಾಗುವ ಪ್ರದೇಶಕ್ಕೆ ಬದಲಾಗಿ, ಅರಣ್ಯೀಕರಣಕ್ಕಾಗಿ ಪರ್ಯಾಯ ಜಮೀನು ಗುರುತಿಸಲಾಗುತ್ತಿದೆ.


Click the Play button to hear this message in audio format

ರಾಜ್ಯದ ಬಹುನಿರೀಕ್ಷಿತ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಯೋಜನೆಯ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧವಾಗಿದ್ದು, ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸರ್ಕಾರ ಸಜ್ಜಾಗಿದೆ. ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಾಗಿ, ಅರಣ್ಯೀಕರಣಕ್ಕಾಗಿ ಪರ್ಯಾಯ ಜಮೀನನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಜಲ ಆಯೋಗದ ಅನುಮತಿ ಪಡೆದ ನಂತರ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಈ ಯೋಜನೆಗೆ ತಡೆಯೊಡ್ಡುವ ಯಾವುದೇ ಕಾನೂನು ಹಕ್ಕು ತಮಿಳುನಾಡಿಗೆ ಇಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಜಲ ಆಯೋಗವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಕಾವೇರಿ ನೀರು ಹಂಚಿಕೆ: ವಾಸ್ತವ ಮತ್ತು ಸವಾಲು

ಕಾವೇರಿ ನೀರು ಹಂಚಿಕೆಯ ಕುರಿತು ಮಾತನಾಡಿದ ಅವರು, ತಮಿಳುನಾಡಿಗೆ 177 ಟಿಎಂಸಿ ನೀರು ಬಿಡುವ ನ್ಯಾಯಾಧಿಕರಣದ ಆದೇಶದ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಆದರೆ, ಮಳೆ ಕೊರತೆಯ ಸಂದರ್ಭದಲ್ಲಿ ರೈತರ ಹಿತ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಕಳೆದ ಎರಡು ವರ್ಷ ಉತ್ತಮ ಮಳೆಯಾಗಿತ್ತು. ಆದರೆ ಈ ವರ್ಷ ಮಳೆ ಕೊರತೆಯಾದರೆ ರೈತರನ್ನು ಕಾಪಾಡಲು ಪರ್ಯಾಯ ಮಾರ್ಗಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರದ ಮೂರು ವರ್ಷದ ಸಾಧನೆ: 'ಭೂ ಗ್ಯಾರಂಟಿ'ಯ ಹೊಸ ಹೆಜ್ಜೆ

ನಾವು ಅಧಿಕಾರದಲ್ಲಿರುವಾಗ ಏನು ಮಾಡುತ್ತೇವೆ ಎಂಬುದು ಮುಖ್ಯ. ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆರನೇ ಗ್ಯಾರಂಟಿಯಾದ 'ಭೂ ಗ್ಯಾರಂಟಿ' ಅಡಿಯಲ್ಲಿ ಫಲಾನುಭವಿಗಳ ಆಸ್ತಿ ದಾಖಲೆಗಳಿಗೆ ಫೋಟೋ ಅಳವಡಿಸಿ, ಅವರ ಮನೆ ಬಾಗಿಲಿಗೆ ಖಾತಾ ತಲುಪಿಸುವ ಕ್ರಾಂತಿಕಾರಿ ಕಾರ್ಯ ನಡೆಯುತ್ತಿದೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿರುವುದು ಇತಿಹಾಸದಲ್ಲಿ ಉಳಿಯುವ ಕೆಲಸ ಎಂದು ತಿಳಿಸಿದರು.

ಈ ನಡುವೆ, ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ದಶಕಗಳ ಹಳೆಯ ಮೌಢ್ಯವನ್ನು ಡಿ.ಕೆ. ಶಿವಕುಮಾರ್ ಸಾರಾಸಗಟಾಗಿ ತಳ್ಳಿಹಾಕಿದರು. ಚಾಮರಾಜನಗರ ಕಾವೇರಿ ನದಿ ತೀರದಲ್ಲಿರುವ ಪುಣ್ಯಭೂಮಿ. ಮಲೆ ಮಾದೇಶ್ವರ, ಮಧ್ಯರಂಗ, ಸಿದ್ದಪ್ಪಾಜಿ ಹಾಗೂ ಗೋಪಾಲಸ್ವಾಮಿ ಬೆಟ್ಟದಂತಹ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಮನುಷ್ಯನಿಗೆ ನೆಮ್ಮದಿ ಸಿಗುತ್ತದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತನ ಆಶೀರ್ವಾದವಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಈ ಭಾಗದ ಕೈಗಾರಿಕಾ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಸಚಿವ ಸಂಪುಟ ಸಭೆಯನ್ನು ನಡೆಸುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಮಲೆ ಮಹದೇಶ್ವರ ಮತ್ತು ಕಾವೇರಿ ಕಣಿವೆಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ತಾಣಗಳನ್ನು ವಿಶ್ವದರ್ಜೆಗೇರಿಸುವುದು ಸರ್ಕಾರದ ಗುರಿಯಾಗಿದೆ.

Read More
Next Story