
ಮೇಕೆದಾಟು ಅಣೆಕಟ್ಟಿಗೆ ಪರಿಷ್ಕೃತ ಡಿಪಿಆರ್ ಸಲ್ಲಿಕೆಯಾಗಿದ್ದು, ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದೆ.
ಮೇಕೆದಾಟು ಕೇವಲ ಕುಡಿಯುವ ನೀರಿನ ಯೋಜನೆ, ತಮಿಳುನಾಡು ನಿಯೋಗ ಖುದ್ದಾಗಿ ಪರಿಶೀಲಿಸಲಿ:ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿದ್ದು, 101 ತಾಲೂಕುಗಳಿಗೆ 700 ಕೋಟಿ ಅನುದಾನ ಕೋರಲಾಗಿತ್ತು. ಇದೀಗ ತಾಲೂಕುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪರಿಹಾರದ ಮೊತ್ತವೂ ಏರಿಕೆಯಾಗಲಿದೆ.
ಮೇಕೆದಾಟು ಯೋಜನೆಯು ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ನಿರ್ಮಿಸಲಾಗುತ್ತಿದ್ದು, ಇದರಿಂದ ನೀರಾವರಿಗೆ ಬಳಸಿಕೊಳ್ಳುವ ಯಾವುದೇ ಅವಕಾಶವಿಲ್ಲ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ತಮಿಳುನಾಡು ಸರ್ಕಾರವು ಯಾವುದೇ ಆತಂಕವಿಲ್ಲದೆ ತಮ್ಮ ನಿಯೋಗವನ್ನು ಕಳುಹಿಸಿ ಯೋಜನೆ ನಡೆಯುವ ಸ್ಥಳವನ್ನು ಖುದ್ದಾಗಿ ಪರಿಶೀಲನೆ ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯ ಬಳಿಕ ಕರ್ನಾಟಕ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜಲ ಯೋಜನೆಗಳು, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬರ ಪರಿಹಾರದ ಕುರಿತು ಕೇಂದ್ರದ ಮುಂದೆ ಇಟ್ಟಿರುವ ಪ್ರಸ್ತಾವನೆಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.
ತಮಿಳುನಾಡು ನಿಯೋಗ ಭೇಟಿಗೆ ಮುಕ್ತ ಅವಕಾಶ
ಮೇಕೆದಾಟು ಅಣೆಕಟ್ಟಿಗೆ ಪರಿಷ್ಕೃತ ಡಿಪಿಆರ್ ಸಲ್ಲಿಕೆಯಾಗಿದ್ದು, ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಕೆ.ಆರ್.ಎಸ್ ಭರ್ತಿಯಾಗದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಈ ಎಲ್ಲ ವಾಸ್ತವ ಅಂಶಗಳನ್ನು ಅರಿತುಕೊಂಡಿರುವ ಕೇಂದ್ರ ತಂಡವು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದೆ. ತಮಿಳುನಾಡು ತಂಡ ಭೇಟಿ ನೀಡಿದರೂ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ನೀರನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳಿಗೂ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿಯವರಿಗೂ ಯೋಜನೆ ಕುರಿತ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗುವುದು ಎಂದು ಅವರು ತಿಳಿಸಿದರು.
ಜಲವಿವಾದಗಳ ಇತ್ಯರ್ಥಕ್ಕೆ ಕೇಂದ್ರದ ಮಧ್ಯಸ್ಥಿಕೆ
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ, ಮಹದಾಯಿ ಸೇರಿದಂತೆ ಇತರೆ ಜಲವಿವಾದಗಳ ತ್ವರಿತ ಇತ್ಯರ್ಥಕ್ಕೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ರಾಜ್ಯದ ಯೋಜನೆಗಳಿಗೆ ಕೇಂದ್ರ ಮಧ್ಯಸ್ಥಿಕೆ ವಹಿಸಲು ಕೋರಲಾಗಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಮಹದಾಯಿ ಹಾಗೂ ಅರಣ್ಯ ಇಲಾಖೆ ವಿಚಾರಗಳಿಗೆ ಸಂಬಂಧಿಸಿದಂತೆ ಶೀಘ್ರವೇ ಜಂಟಿ ಸಭೆ ಕರೆಯುವ ಭರವಸೆ ಸಿಕ್ಕಿದೆ. ಇದೇ ವೇಳೆ, 2023ರ ಕೇಂದ್ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮೀಸಲಿಟ್ಟಿದ್ದ 5,300 ಕೋಟಿ ರೂಪಾಯಿ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ತಕ್ಷಣವೇ ಈ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಹಸಿರು ಉದ್ಯಾನವನ ನಿರ್ಮಾಣಕ್ಕೆ ಒಲವು
ಬೆಂಗಳೂರಿನ ಇಬ್ಬಲೂರು ಬಳಿ ಇರುವ ರಕ್ಷಣಾ ಇಲಾಖೆಯ 700 ಎಕರೆ ಖಾಲಿ ಜಾಗದಲ್ಲಿ ಬೃಹತ್ ಹಸಿರು ಉದ್ಯಾನವನ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ, ನಗರದ ಪ್ರಮುಖ ಟ್ರಾಫಿಕ್ ದಟ್ಟಣೆ ಪ್ರದೇಶಗಳಾದ ಮೇಕ್ರಿ ವೃತ್ತ ಹಾಗೂ ಸರ್ಜಾಪುರ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಇಲಾಖೆಯ ಜಮೀನು ಹಸ್ತಾಂತರಿಸಲು ಮನವಿ ಮಾಡಲಾಗಿದೆ. ರಕ್ಷಣಾ ಜಮೀನಿನಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ಅವಳಿ ಸುರಂಗ ಮಾರ್ಗ ಯೋಜನೆಗೂ ನೆರವು ಕೋರಲಾಗಿದೆ. ನಗರದಲ್ಲಿ ಸ್ಕೈ ಡೆಕ್ ನಿರ್ಮಾಣಕ್ಕೂ ದೇಶದ ಇತರೆ ರಾಜ್ಯಗಳ ಮಾದರಿಯಲ್ಲಿಯೇ ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಕೇಂದ್ರದ ಮುಂದೆ ಪ್ರಸ್ತಾಪ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಬರಪರಿಹಾರ ಮತ್ತು ಸರ್ವಪಕ್ಷ ನಿಯೋಗ
ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿದ್ದು, 101 ತಾಲೂಕುಗಳಿಗೆ 700 ಕೋಟಿ ಅನುದಾನ ಕೋರಲಾಗಿತ್ತು. ಇದೀಗ ತಾಲೂಕುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪರಿಹಾರದ ಮೊತ್ತವೂ ಏರಿಕೆಯಾಗಲಿದೆ. ಅಕ್ಟೋಬರ್ 3ರಂದು ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಲಿದೆ. ಕಸ್ತೂರಿ ರಂಗನ್ ವರದಿ, ಬರ ಮತ್ತು ನೀರಿನ ಸಮಸ್ಯೆಗಳ ಕುರಿತು ಚರ್ಚಿಸಲು ವಿರೋಧ ಪಕ್ಷಗಳನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ವಿರೋಧ ಪಕ್ಷದವರು ಆಯೋಜಿಸಿರುವ ರೈತ ಚೈತನ್ಯ ಯಾತ್ರೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅವರು ನನ್ನ ಕ್ಷೇತ್ರದಿಂದಲೇ ಯಾತ್ರೆ ಆರಂಭಿಸಿದರೂ ಅಭ್ಯಂತರವಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ವಿಪಕ್ಷಗಳು ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸಿ, ತಾವೂ ರೈತರ ಪರ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಕೇಂದ್ರ ಗೃಹ ಸಚಿವರು ದಕ್ಷಿಣ ವಲಯದ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದರು.

