ಮೇಕೆದಾಟು ಯೋಜನೆ: ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಡಿಎಂಕೆ
x

ಮೇಕೆದಾಟು ಯೋಜನೆ: ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಡಿಎಂಕೆ

ಕೇಂದ್ರ ಜಲ ಆಯೋಗ ಹಾಗೂ ಸುಪ್ರೀಂಕೋರ್ಟ್‌ ಸ್ಪಷ್ಟ ಮಾರ್ಗದರ್ಶನಗಳ ಹೊರತಾಗಿಯೂ, ತಮಿಳುನಾಡು ಸರ್ಕಾರ ಮತ್ತು ಡಿಎಂಕೆ ಪಕ್ಷವು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯನ್ನು ವಿಳಂಬಗೊಳಿಸುವ ಯತ್ನ ಮುಂದುವರಿಸಿತ್ತು.


ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ವಿರುದ್ಧ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯಸಭೆಯಲ್ಲಿ ಡಿಎಂಕೆ ಸಂಸದ ತಿರುಚಿ ಶಿವ ಅವರು ನಿಯಮ 267ರ ಅಡಿ ನಿಲುವಳಿ ಸೂಚನೆ ಮಂಡಿಸಿದ್ದು, ದೈನಂದಿನ ಕಲಾಪದಲ್ಲಿ ಈ ವಿಷಯದ ಕುರಿತು ತುರ್ತು ಚರ್ಚೆ ನಡೆಸುವಂತೆ ಆಗ್ರಹಿಸಿದೆ.

ಡಿಎಂಕೆ ಆರೋಪವೇನು?

ತಮ್ಮ ನಿಲುವಳಿ ಸೂಚನೆಯಲ್ಲಿ ವಿಷಯ ಪ್ರಸ್ತಾಪಿಸಿರುವ ತಿರುಚಿ ಶಿವ, ಕರ್ನಾಟಕವು ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿರುವುದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹಾಗೂ ನಿರ್ದೇಶನಗಳ ನೇರ ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ತಲುಪಬೇಕಾದ ಕಾವೇರಿ ನೀರಿನ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಲಿದ್ದು, ಕೆಳಭಾಗದ ರೈತರ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಈ ಯೋಜನೆಯನ್ನು ತಕ್ಷಣವೇ ತಡೆಯಲು ಮತ್ತು ವಿವಾದ ಇತ್ಯರ್ಥಕ್ಕೆ ವಿಶೇಷ ಮಧ್ಯಸ್ಥಿಕೆ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಮಿಳುನಾಡಿನ ಅಡ್ಡಿ, ಕಾನೂನಾತ್ಮಕ ವಾಸ್ತವ

ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಹಾಗೂ ಅಲ್ಲಿನ ರಾಜಕೀಯ ಪಕ್ಷಗಳು ಸತತವಾಗಿ ಅಡ್ಡಿಪಡಿಸುತ್ತಿರುವುದು ಇದೇ ಮೊದಲೇನಲ್ಲ. ಯೋಜನೆ ಪ್ರಸ್ತಾವನೆ ಹಂತಕ್ಕೆ ಬಂದಾಗಿನಿಂದಲೂ ತಮಿಳುನಾಡು ವಿವಿಧ ಹಂತಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ, ಈ ವಿಷಯದಲ್ಲಿ ಕಾನೂನಾತ್ಮಕ ಮತ್ತು ತಾಂತ್ರಿಕ ಸ್ಪಷ್ಟತೆಗಳು ಈಗಾಗಲೇ ಲಭ್ಯವಾಗಿವೆ. ಮೇಕೆದಾಟು ಯೋಜನೆಯ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ, ಈ ಯೋಜನೆಯ ತಾಂತ್ರಿಕ ಮತ್ತು ಸಮ್ಮತಿ ವಿಚಾರಗಳನ್ನು ಕೇಂದ್ರ ಜಲ ಆಯೋಗ (CWC) ತೀರ್ಮಾನಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.

ಕೇಂದ್ರ ಜಲ ಶಕ್ತಿ ಆಯೋಗವು ಈಗಾಗಲೇ ಸ್ಪಷ್ಟನೆ ನೀಡಿದ್ದು, ಕಾವೇರಿ ತೀರ್ಪಿನನ್ವಯ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ನಿರ್ವಹಿಸಿದರೆ ಸಾಕು. ನದಿಯ ಮೇಲ್ಭಾಗದಲ್ಲಿರುವ ರಾಜ್ಯವು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ನಿರ್ಮಾಣಕ್ಕಾಗಿ ಯೋಜನೆ ಕೈಗೆತ್ತಿಕೊಳ್ಳಲು ಕೆಳಭಾಗದ ರಾಜ್ಯಗಳ (ತಮಿಳುನಾಡು) ಪ್ರತ್ಯೇಕ ಒಪ್ಪಿಗೆ ಕಡ್ಡಾಯವಲ್ಲ ಎಂದು ತಿಳಿಸಿದೆ.

ಕೇಂದ್ರ ಜಲ ಆಯೋಗ ಹಾಗೂ ಸುಪ್ರೀಂಕೋರ್ಟ್‌ ಸ್ಪಷ್ಟ ಮಾರ್ಗದರ್ಶನಗಳ ಹೊರತಾಗಿಯೂ, ತಮಿಳುನಾಡು ಸರ್ಕಾರ ಮತ್ತು ಡಿಎಂಕೆ ಪಕ್ಷವು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯನ್ನು ವಿಳಂಬಗೊಳಿಸುವ ಯತ್ನ ಮುಂದುವರಿಸಿತ್ತು. ಇದೀಗ ಸಂಸತ್ತಿನ ಉಭಯ ಸದನಗಳಲ್ಲೂ ರಾಜಕೀಯ ಒತ್ತಡ ಹೇರುವ ತಂತ್ರವಾಗಿ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ತಂದಿದೆ.

ಕರ್ನಾಟಕದ ಪ್ರತಿಪಾದನೆ

ಮೇಕೆದಾಟು ಯೋಜನೆಯು ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ದಾಹ ತಣಿಸಲು ಮತ್ತು ವಿದ್ಯುತ್ ಉತ್ಪಾದನೆಗೆ ಅತ್ಯಗತ್ಯವಾದ ಯೋಜನೆ ಎಂಬುದು ಕರ್ನಾಟಕದ ದೃಢ ನಿಲುವು. ಹೆಚ್ಚುವರಿಯಾಗಿ ಮಳೆಗಾಲದಲ್ಲಿ ಸಮುದ್ರ ಸೇರಿ ಪೋಲಾಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಸಂಕಷ್ಟದ ವರ್ಷಗಳಲ್ಲಿ ತಮಿಳುನಾಡಿಗೆ ನಿಗದಿತ ನೀರು ಹರಿಸಲು ಈ ಜಲಾಶಯ ನೆರವಾಗಲಿದೆ.

ತಮಿಳುನಾಡಿನ ಈ ರಾಜಕೀಯ ಪ್ರೇರಿತ ನಡೆಯನ್ನು ಕರ್ನಾಟಕದ ಸಂಸದರು ಹಾಗೂ ನಾಯಕರು ತೀವ್ರವಾಗಿ ವಿರೋಧಿಸಿದ್ದು, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಶೀಘ್ರವೇ ಅಂತಿಮ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story