
ಮೇಕೆದಾಟುವಿನಲ್ಲಿ ಹರಿಯುತ್ತಿರುವ ಕಾವೇರಿ ನೀರು
ಮೇಕೆದಾಟು ಉಭಯ ರಾಜ್ಯಗಳಿಗೂ ವರ; ತಮಿಳುನಾಡನ್ನು ಮಾತುಕತೆಗೆ ಆಹ್ವಾನಿಸಿದ ರಾಮಲಿಂಗಾರೆಡ್ಡಿ
ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿದರೆ, ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ಸುಲಭವಾಗಿ ನೀರು ಬಿಡಬಹುದಿತ್ತು. ಅವರು ಇದನ್ನು ವಿರೋಧಿಸಿದರೆ ಅಲ್ಲಿನ ರೈತರಿಗೇ ಕಷ್ಟವಾಗುತ್ತದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿನ ರೈತರಿಗೂ ಸಹಕಾರಿಯಾಗಲಿದೆ. ಈ ವಿಷಯದಲ್ಲಿ ಕೋರ್ಟ್‌ಗೆ ಹೋಗಿ ಜಗಳವಾಡುವುದಕ್ಕಿಂತ ಉಭಯ ರಾಜ್ಯಗಳು ಒಟ್ಟಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುವುದು ಸೂಕ್ತ" ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮೇಕೆದಾಟು ಮತ್ತು ರಾಜ್ಯದ ಸದ್ಯದ ಜಲಸ್ಥಿತಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೇಕೆದಾಟು ನಮ್ಮ ಪಾಲಿನ ಮಹತ್ವಾಕಾಂಕ್ಷಿ ಯೋಜನೆ. ಇದು ಹೊಸದಾಗಿ ಕಟ್ಟುತ್ತಿರುವ ಅಣೆಕಟ್ಟು ಆಗಿದ್ದರೂ, ಇದು ಬರೀ ನೀರನ್ನು ಸಂಗ್ರಹಿಸಿಡುವ (ಸ್ಟೋರೇಜ್) ಯೋಜನೆ ಅಷ್ಟೇ. ಇದರಿಂದ ನಾವು ಒಂದು ಹನಿ ನೀರನ್ನೂ ವ್ಯವಸಾಯಕ್ಕೆ ಬಳಸುವುದಿಲ್ಲ. ಇದರಿಂದ ಬೆಂಗಳೂರು ನಗರಕ್ಕೆ 4.75 ಟಿಎಂಸಿ ಕುಡಿಯುವ ನೀರು ಸಿಗುತ್ತದೆ ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು" ಎಂದು ಸ್ಪಷ್ಟಪಡಿಸಿದರು.
ಎರಡು ರಾಜ್ಯಗಳಿಗೂ ಅನುಕೂಲ
"ತಮಿಳುನಾಡಿಗೆ ಹಂಚಿಕೆಯಾಗಿರುವ ನೀರಿನಲ್ಲಿ ನಮಗೆ ಒಂದು ಹನಿ ಕೂಡ ಜಾಸ್ತಿ ಬೇಡ. ಈಗಾಗಲೇ ಡಿಪಿಆರ್ (DPR) ಸಿದ್ಧವಾಗಿದೆ. ಒಂದು ವೇಳೆ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿದರೆ, ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ಸುಲಭವಾಗಿ ನೀರು ಬಿಡಬಹುದಿತ್ತು. ಅವರು ಇದನ್ನು ವಿರೋಧಿಸಿದರೆ ಅಲ್ಲಿನ ರೈತರಿಗೇ ಕಷ್ಟವಾಗುತ್ತದೆ." ಎಂದು ತಿಳಿಸಿದರು.
ತಮಿಳುನಾಡಿನ ಅರ್ಜಿ 2 ಬಾರಿ ರಿಜೆಕ್ಟ್!
ಕೇಂದ್ರದ ನಿಯಮಾವಳಿಗಳ ಪ್ರಕಾರ ತಮಿಳುನಾಡಿಗೆ ತಿಂಗಳಿಗೊಮ್ಮೆ ನೀರು ಬಿಡಬೇಕಿದೆ. ಜೂನ್ ತಿಂಗಳಲ್ಲಿ 9.19 ಟಿಎಂಸಿ ನೀರು ಬಿಡಬೇಕು. ಆದರೆ, ಜೂ. 18ರ ವರದಿಯ ಪ್ರಕಾರ ನಮ್ಮ ಬಳಿ ಇರುವುದು ಕೇವಲ 3 ಟಿಎಂಸಿ ನೀರು ಮಾತ್ರ. "ನಮ್ಮಲ್ಲಿ ಒಟ್ಟು 16 ಟಿಎಂಸಿ ನೀರಿದ್ದರೂ ಅದರಲ್ಲಿ ಕುಡಿಯುವ ನೀರನ್ನು ಹೊರತುಪಡಿಸಿದರೆ ಕೇವಲ 3 ಟಿಎಂಸಿ ಮಾತ್ರ ಉಳಿಯುತ್ತದೆ. ನಾವು ಇಲ್ಲಿಯವರೆಗೆ 2 ಟಿಎಂಸಿ ನೀರು ಬಿಟ್ಟಿದ್ದೇವೆ" ಎಂದರು.
"ತಮಿಳುನಾಡಿನವರು ಸುಪ್ರೀಂ ಕೋರ್ಟ್‌ಗೆ ಹಾಕಿದ್ದ ಮುಖ್ಯ ಅರ್ಜಿ ಹಾಗೂ ಮರುಪರಿಶೀಲನಾ ಅರ್ಜಿ ಎರಡೂ ತಿರಸ್ಕೃತಗೊಂಡಿವೆ. ಎರಡು ಬಾರಿ ಅರ್ಜಿ ರಿಜೆಕ್ಟ್ ಆಗಿದ್ದರೂ ಅಲ್ಲಿನ ಮುಖ್ಯಮಂತ್ರಿಗಳು ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ನಮಗೆ ಹಂಚಿಕೆಯಾಗಿರುವ ನೀರು ನಮಗೆ ಸಾಕು" ಎಂದು ತಿರುಗೇಟು ನೀಡಿದರು.
ಸಿಎಂ ವಿಜಯ್ ಜೊತೆ ಮಾತುಕತೆಗೆ ಮನವಿ
"ಇತ್ತೀಷೆಗಷ್ಟೇ ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಹದಾಯಿ ಹಾಗೂ ಮೇಕೆದಾಟು ವಿಚಾರಗಳ ಕುರಿತು ಸುದೀರ್ಘವಾಗಿ ಮಾತನಾಡಿದ್ದೇವೆ. ಈ ಸಮಸ್ಯೆಗೆ ಇತ್ಯರ್ಥ ಹಾಡಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಮ್ಮನ್ನು ಒಟ್ಟಿಗೆ ಕರೆಸಿ ಮಾತುಕತೆ ನಡೆಸಿ ಎಂದು ಕೇಂದ್ರಕ್ಕೆ ಕೋರಿದ್ದೇವೆ. ಕೃಷ್ಣಾ ನದಿ ನೀರು ಹಂಚಿಕೆ ವಿವಾದ 14 ವರ್ಷಗಳಿಂದ ಇತ್ಯರ್ಥವಾಗಿಲ್ಲ. ಇವೆಲ್ಲವನ್ನೂ ಕುಳಿತು ಮಾತನಾಡುವ ಮೂಲಕವೇ ಬಗೆಹರಿಸಿಕೊಳ್ಳಬೇಕಿದೆ" ಎಂದರು.
ರಾಜಕೀಯ ಮರೆತು ಒಗ್ಗಟ್ಟಿನ ಹೋರಾಟಕ್ಕೆ ಕರೆ
ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲದಿದ್ದರೂ, ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ 11 ಟಿಎಂಸಿ ಹಾಗೂ ಕಬಿನಿ ಜಲಾಶಯದಲ್ಲೂ ಉತ್ತಮ ನೀರಿದೆ. ಬೇಗ ಮಳೆ ಬಂದು ಜಲಾಶಯ ತುಂಬಿದರೆ ಯಾವುದೇ ತೊಂದರೆ ಇರುವುದಿಲ್ಲ. "ನೆಲ, ಜಲ ಮತ್ತು ಭಾಷೆಯ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಚುನಾವಣೆ ಮುಗಿದ ಮೇಲೆ ರಾಜಕೀಯ ವಿರೋಧವನ್ನು ಮರೆಯಬೇಕು. ರಾಜ್ಯದ ಹಿತದೃಷ್ಟಿಯಿಂದ ಹಾಗೂ ನೀರು ಪಡೆದುಕೊಳ್ಳುವ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ" ಎಂದು ವಿಪಕ್ಷಗಳಿಗೆ ಮನವಿ ಮಾಡಿದರು.

