
ತಮಿಳುನಾಡು ದಬ್ಬಾಳಿಕೆ ನಿಲ್ಲಿಸಲಿ: ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ
ಕಾವೇರಿ ಕೊಳ್ಳದ ಜನರಿಗೆ ಕುಡಿಯುವ ನೀರು ಒದಗಿಸಲು ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ಅತ್ಯಗತ್ಯ. ಈ ಯೋಜನೆಗೆ ತಮಿಳುನಾಡು ಮುಕ್ತ ಮನಸ್ಸಿನಿಂದ ಸಹಮತ ನೀಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು ನಗರ ಹಾಗೂ ಸುತ್ತಲಿನ ಜಿಲ್ಲೆಗಳ ಜನರ ಕುಡಿಯುವ ನೀರಿನ ದಾಹ ನೀಗಿಸುವ ಮೇಕೆದಾಟು ಯೋಜನೆಗೆ ತಮಿಳುನಾಡು ನಿರಂತರ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಕೇವಲ ರಾಜಕೀಯ ಲಾಭ ಹಾಗೂ ಪ್ರತಿಷ್ಠೆಗಾಗಿ ಅಲ್ಲಿನ ರಾಜಕೀಯ ಪಕ್ಷಗಳು ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೇಕೆದಾಟು ಯೋಜನೆಗೆ ತಮಿಳುನಾಡು ಅನಗತ್ಯವಾಗಿ ಅಡ್ಡಗಾಲು ಹಾಕುತ್ತಿದೆ. ಈ ನೀರಿನ ವಿವಾದ ಮತ್ತು ಕ್ಯಾತೆ ಇವತ್ತಿನದಲ್ಲ, ಸುಮಾರು 50 ವರ್ಷಗಳ ಹಳೆಯ ಸಮಸ್ಯೆ. ಕಾವೇರಿ ಕೊಳ್ಳದ ಜನರಿಗೆ ಕುಡಿಯುವ ನೀರು ಒದಗಿಸಲು ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ಅತ್ಯಗತ್ಯ. ಈ ಯೋಜನೆಗೆ ತಮಿಳುನಾಡು ಮುಕ್ತ ಮನಸ್ಸಿನಿಂದ ಸಹಮತ ನೀಡಬೇಕು," ಎಂದು ಒತ್ತಾಯಿಸಿದರು.
ʼದುಪ್ಪಟ್ಟು ನೀರು ಬಿಟ್ಟಿದ್ದೇವೆʼ
ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕವು ನೆರೆರಾಜ್ಯಕ್ಕೆ ಎಂದಿಗೂ ಅನ್ಯಾಯ ಮಾಡಿಲ್ಲ ಎಂಬುದನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ ಕುಮಾರಸ್ವಾಮಿ, "ರಾಜ್ಯದಲ್ಲಿ ಉತ್ತಮ ಮಳೆಯಾದಾಗಲೆಲ್ಲಾ ಕರ್ನಾಟಕವು ಕಾವೇರಿ ನ್ಯಾಯಮಂಡಳಿ ಆದೇಶಕ್ಕಿಂತಲೂ ಎರಡು ಪಟ್ಟು ನೀರನ್ನು ಹರಿಸಿದೆ. ಹೆಚ್ಚುವರಿಯಾಗಿ ಹರಿದುಹೋಗುವ ನೀರನ್ನು ಶೇಖರಿಸಿಡಲು ನಾವು ಜಲಾಶಯ ಕಟ್ಟಲು ಹೊರಟಿದ್ದೇವೆಯೇ ಹೊರತು ಯಾರದ್ದೋ ಪಾಲನ್ನು ಕಸಿಯುತ್ತಿಲ್ಲ," ಎಂದರು.
'ನಮ್ಮಲ್ಲೇ ನೀರಿಲ್ಲದಿದ್ದಾಗ ಒತ್ತಾಯಿಸುವುದು ತರವಲ್ಲʼ
ಇದೇ ವೇಳೆ ತಮಿಳುನಾಡಿನ ಏಕಪಕ್ಷೀಯ ಧೋರಣೆ ಖಂಡಿಸಿದ ಅವರು, "ಕರ್ನಾಟಕದಲ್ಲಿ ಮುಂಗಾರು ಕೈಕೊಟ್ಟಾಗ ಅಥವಾ ನಮ್ಮ ಜಲಾಶಯಗಳೇ ಭರ್ತಿಯಾಗದ ಕಠಿಣ ಪರಿಸ್ಥಿತಿಯಲ್ಲೂ ತಮಿಳುನಾಡು ನೀರಿಗಾಗಿ ಪಟ್ಟು ಹಿಡಿಯುವುದು ಮತ್ತು ಒತ್ತಾಯಿಸುವುದು ಎಷ್ಟು ಸೂಕ್ತ?, ತಮಿಳುನಾಡಿನ ನಾಯಕರು ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಯೋಜನೆಗೆ ರಾಜಕೀಯ ಬಣ್ಣ ಬಳಿಯುವುದನ್ನು ನಿಲ್ಲಿಸಬೇಕು," ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡು ವಿಧಾನಸಭೆಯು ಇತ್ತೀಚೆಗೆ ವಿರೋಧ ನಿರ್ಣಯ ಅಂಗೀಕರಿಸಿರುವ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕೀಯ ಹಾಗೂ ಅಂತರರಾಜ್ಯ ಜಲವಿವಾದ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

