
ಎಂ ಬಿ ಪಾಟೀಲ್
ರೈಲ್ವೆ ಯೋಜನೆಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ: ಎಂ.ಬಿ. ಪಾಟೀಲ ಆರೋಪ
ಅತಿದಟ್ಟಣೆಯ 7 ರೈಲ್ವೆ ಮಾರ್ಗಗಳ ಚತುಷ್ಪಥ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ರಾಜ್ಯದ ಯಾವುದೇ ಮಾರ್ಗವನ್ನು ಸೇರಿಸದಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಎಂದು ಸಚಿವರು ಕಿಡಿಕಾರಿದ್ದಾರೆ.
ದೇಶದ ಆರ್ಥಿಕತೆಯ ಇಂಜಿನ್ ಎಂದೇ ಕರೆಯಲ್ಪಡುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಅತಿದಟ್ಟಣೆಯ 7 ರೈಲ್ವೆ ಮಾರ್ಗಗಳ ಚತುಷ್ಪಥ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಕರ್ನಾಟಕದ ಯಾವುದೇ ಮಾರ್ಗವನ್ನು ಸೇರಿಸದಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯದ ಪರಮಾವಧಿ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ದೇಶದ 7 ಪ್ರಮುಖ ರೈಲು ಮಾರ್ಗಗಳನ್ನು (ದೆಹಲಿ-ಹೌರಾ, ಹೌರಾ-ಚೆನ್ನೈ, ಚೆನ್ನೈ-ಮುಂಬೈ, ಮುಂಬೈ-ದೆಹಲಿ, ದೆಹಲಿ-ಚೆನ್ನೈ, ಮುಂಬೈ-ಹೌರಾ, ದೆಹಲಿ-ಗುವಾಹಟಿ) ಚತುಷ್ಪಥ ಮಾರ್ಗಗಳನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದ್ದರು. ಆದರೆ, ಈ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಒಂದು ಮಾರ್ಗವೂ ಸ್ಥಾನ ಪಡೆದಿಲ್ಲ. ಬೆಂಗಳೂರು-ಪುಣೆ-ಮುಂಬೈ, ಬೆಂಗಳೂರು-ಮೈಸೂರು, ಬೆಂಗಳೂರು-ಮಂಗಳೂರು, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ವಿಜಯಪುರ ಮತ್ತು ಬೆಂಗಳೂರು-ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಹತ್ತಾರು ಅತಿದಟ್ಟಣೆಯ ಮಾರ್ಗಗಳಿವೆ. ಇವುಗಳಿಗೆ ತುರ್ತಾಗಿ ಚತುಷ್ಪಥ ರೈಲ್ವೆ ಮಾರ್ಗಗಳ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಹೆದ್ದಾರಿಗಳ ಮೇಲಿನ ಒತ್ತಡದ ಕುರಿತು ಕಳವಳ
ಕರ್ನಾಟಕದ ರಸ್ತೆ ಜಾಲಕ್ಕೆ ಪೂರಕವಾಗಿ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ವಿಫಲವಾಗಿದೆ. ರೈಲ್ವೆ ಸಂಪರ್ಕ ಸಮರ್ಪಕವಾಗಿಲ್ಲದ ಕಾರಣ, ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಹೆದ್ದಾರಿಗಳನ್ನೇ ಅವಲಂಬಿಸುವಂತಾಗಿದೆ. ಇದರಿಂದ ರಾಜ್ಯದ ಹೆದ್ದಾರಿಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಅಪಘಾತಗಳು ಮತ್ತು ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಕರಾವಳಿ ತೀರದ ಬಂದರು ಪಟ್ಟಣಗಳಾದ ಮಂಗಳೂರು, ಭಟ್ಕಳ, ಹೊನ್ನಾವರ, ಕುಂದಾಪುರ ಮತ್ತು ಕಾರವಾರಗಳನ್ನು ಒಳನಾಡಿನ ಪ್ರಮುಖ ನಗರಗಳಾದ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿಯೊಂದಿಗೆ ಸಂಪರ್ಕಿಸುವ ರೈಲು ಜಾಲದ ಕೊರತೆ ಇದೆ. ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್ ನಡುವೆ ಹೈಸ್ಪೀಡ್ ರೈಲು ಯೋಜನೆಗಳನ್ನು ಘೋಷಿಸಿದೆ. ಆದರೆ ಈ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದ ವ್ಯಾಪ್ತಿಯಲ್ಲಿ 100 ಕಿ.ಮೀ. ಗಿಂತ ಕಡಿಮೆ ಸಂಚರಿಸುತ್ತವೆ. ಇದರಿಂದ ತಮಿಳುನಾಡು ಮತ್ತು ಆಂಧ್ರ-ತೆಲಂಗಾಣಗಳಿಗೆ ಹೆಚ್ಚು ಲಾಭವಾಗಲಿದ್ದು, ಕರ್ನಾಟಕಕ್ಕೆ ಅಷ್ಟಾಗಿ ಪ್ರಯೋಜನವಿಲ್ಲ. ನಾನು ಈ ವಿಚಾರವಾಗಿ ಧ್ವನಿ ಎತ್ತಿ ಬೆಂಗಳೂರು-ಹುಬ್ಬಳ್ಳಿ-ಪುಣೆ ನಡುವೆ ಹೈಸ್ಪೀಡ್ ರೈಲು ಮಾರ್ಗದ ಅಗತ್ಯವಿದೆ ಎಂದು ಮನವಿ ಮಾಡಿದ್ದರೂ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ
ರಾಜ್ಯ ಸರ್ಕಾರವು ರೈಲ್ವೆ ಯೋಜನೆಗಳಿಗಾಗಿ 50:50 ವೆಚ್ಚ ಹಂಚಿಕೆ ಆಧಾರದಲ್ಲಿ ಸಹಕಾರ ನೀಡುತ್ತಿದೆಯಾದರೂ, ಕೇಂದ್ರದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ನೀಡುವ ಆದ್ಯತೆಯನ್ನು ಕರ್ನಾಟಕಕ್ಕೆ ನೀಡುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳು ಈ ತಾರತಮ್ಯದ ವಿರುದ್ಧ ಧ್ವನಿ ಎತ್ತಬೇಕು. ಮೌನಕ್ಕೆ ಶರಣಾಗುವುದು ಸರಿಯಲ್ಲ ಎಂದಿದ್ದಾರೆ.
ಬೆಂಗಳೂರು ನಗರವು ದೇಶದ ಐಟಿ ರಫ್ತು, ನವೋದ್ಯಮಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಕೇಂದ್ರಬಿಂದುವಾಗಿದೆ. ಇಂತಹ ಜಾಗತಿಕ ಮಟ್ಟದ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಕೇಂದ್ರದ ಕರ್ತವ್ಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಲ್ಲದೆ, ರೈಲ್ವೆ ಸಚಿವರನ್ನು ಖುದ್ದಾಗಿ ಭೇಟಿಯಾಗಿ ರಾಜ್ಯದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದಾಗಿ ಸಚಿವರು ತಿಳಿಸಿದ್ದಾರೆ.

