ರಾಜ್ಯಕ್ಕೆ 7,506 ಕೋಟಿ ಬಂಡವಾಳ ಹರಿವು: 28 ಸಾವಿರ ಮಂದಿಗೆ ಸಿಗಲಿದೆ ಉದ್ಯೋಗ
x

ರಾಜ್ಯಕ್ಕೆ 7,506 ಕೋಟಿ ಬಂಡವಾಳ ಹರಿವು: 28 ಸಾವಿರ ಮಂದಿಗೆ ಸಿಗಲಿದೆ ಉದ್ಯೋಗ

ಒಟ್ಟು 55 ಯೋಜನೆಗಳ ಪೈಕಿ 41 ಯೋಜನೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹೊರಗೆ ಸ್ಥಾಪನೆಯಾಗಲಿವೆ. ಇದು ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ದೊಡ್ಡ ಮಟ್ಟದ ವೇಗ ನೀಡಲಿದೆ.


Click the Play button to hear this message in audio format

ರಾಜ್ಯದ ಕೈಗಾರಿಕಾ ರಂಗದಲ್ಲಿ ಮತ್ತೊಂದು ಐತಿಹಾಸಿಕ ಬೆಳವಣಿಗೆ ನಡೆದಿದೆ. ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಉನ್ನತ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಬರೋಬ್ಬರಿ 7,506 ಕೋಟಿ ರೂ. ಮೊತ್ತದ 55 ಬೃಹತ್ ಕೈಗಾರಿಕಾ ಯೋಜನೆಗಳಿಗೆ ಅಧಿಕೃತವಾಗಿ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಘೋಷಿಸಿದ್ದಾರೆ.

ಈ ಬಾರಿಯ ಹೂಡಿಕೆಗಳ ವಿಶೇಷತೆಯೆಂದರೆ, ಕೈಗಾರಿಕೆಗಳನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಒಟ್ಟು 55 ಯೋಜನೆಗಳ ಪೈಕಿ 41 ಯೋಜನೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹೊರಗೆ (ಬಿಯಾಂಡ್ ಬೆಂಗಳೂರು) ಸ್ಥಾಪನೆಯಾಗಲಿವೆ. ಇದು ರಾಜ್ಯದ ಹಿಂದುಳಿದ ಹಾಗೂ ಅಭಿವೃದ್ಧಿಶೀಲ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಮಟ್ಟದ ವೇಗ ನೀಡಲಿದೆ.

ಕರ್ನಾಟಕವು ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮುಂದುವರಿದಿದೆ ಎಂಬುದಕ್ಕೆ ಈ ಸಭೆಯಲ್ಲಿ ಅನುಮೋದನೆ ಪಡೆದ 4 ವಿದೇಶಿ ನೇರ ಹೂಡಿಕೆ ಯೋಜನೆಗಳೇ ಸಾಕ್ಷಿಯಾಗಿದೆ. ತೈವಾನ್‌ನ ಟೀಮಿಂಗ್ ಆಟೋಮೇಷನ್ 20 ಕೋಟಿ ರೂ., ದಕ್ಷಿಣ ಕೊರಿಯಾದ ವೈ.ಜೆ.ಲಿಂಕ್ 177.96 ಕೋಟಿ ರೂ., ಜರ್ಮನಿಯ ರೇವುಂ 16.50 ಕೋಟಿ ರೂ., ಜಪಾನ್‌ನ ಶಿಂಕೋ ಕಂಪನಿ 100 ಕೋಟಿ ರೂ., ಹೂಡಿಕೆಗೆ ಮುಂದಾಗಿದ್ದು, ಒಟ್ಟಾರೆ 314.46 ಕೋಟಿ ರೂ. ಹೂಡಿಕೆಯೊಂದಿಗೆ ವಿದೇಶಿ ಕಂಪನಿಗಳು ರಾಜ್ಯಕ್ಕೆ ಆಗಮಿಸುತ್ತಿದ್ದು, ಇದರಿಂದ ತಾಂತ್ರಿಕ ವಲಯದಲ್ಲಿ 503ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ.

ಹೂಡಿಕೆಯ ವಿಂಗಡಣೆ ಮತ್ತು ಕ್ಷೇತ್ರಗಳು

ಅನುಮೋದನೆಗೊಂಡ 55 ಯೋಜನೆಗಳನ್ನು ಬಂಡವಾಳದ ಆಧಾರದ ಮೇಲೆ ವಿಂಗಡಿಸಲಾಗಿದೆ. 35 ಯೋಜನೆಗಳು ತಲಾ 50 ಕೋಟಿ ರೂ.ಗಿಂತ ಅಧಿಕ ಬಂಡವಾಳ ಹೊಂದಿವೆ. 15 ಯೋಜನೆಗಳು 15 ಕೋಟಿಯಿಂದ 50 ಕೋಟಿ ವ್ಯಾಪ್ತಿಯಲ್ಲಿವೆ. 5 ಕಂಪನಿಗಳು ತಮ್ಮ ಅಸ್ತಿತ್ವದಲ್ಲಿರುವ ಘಟಕಗಳಿಗೆ 223.61 ಕೋಟಿ ಹೆಚ್ಚುವರಿ ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ. ಮುಖ್ಯವಾಗಿ ಏರೋಸ್ಪೇಸ್, ಇ.ಎಸ್.ಡಿ.ಎಂ ಮತ್ತು ಜನರಲ್ ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಈ ಯೋಜನೆಗಳು ಹೆಚ್ಚಿನ ಉತ್ತೇಜನ ನೀಡಲಿವೆ.

ಜಿಲ್ಲಾವಾರು ಪ್ರಮುಖ ಹೂಡಿಕೆಗಳು

ಸಚಿವ ಎಂ.ಬಿ. ಪಾಟೀಲ್ ಅವರು ಪ್ರಮುಖ ಹೂಡಿಕೆದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಚಾಮರಾಜನಗರದಲ್ಲಿ ಕೇನ್ಸ್ ಎಲೆಕ್ಟ್ರಾನಿಕ್ಸ್ (495 ಕೋಟಿ), ದೊಡ್ಡಬಳ್ಳಾಪುರದಲ್ಲಿ ಎಸ್ಎಫ್ಒ ಟೆಕ್ನಾಲಜೀಸ್ (490 ಕೋಟಿ), ಕೋಲಾರದಲ್ಲಿ ಆರ್ಬಿಟ್ ಇಂಡಸ್ಟ್ರಿಯಲ್ ಪಾರ್ಕ್ (454 ಕೋಟಿ), ವಿಜಯಪುರದಲ್ಲಿ ಟೆರ್ರಾ ಸರ್ಕ್ಯೂಟ್ಸ್ (441 ಕೋಟಿ) ಮತ್ತು ಹೈಟೆಕ್ ಮೆಟಾಲಿಕ್ಸ್ (250 ಕೋಟಿ), ಬಳ್ಳಾರಿಯಲ್ಲಿ ಜಿಂದಾಲ್ ಪೋರ್ಟ್ (380 ಕೋಟಿ), ಕಲಬುರಗಿಯಲ್ಲಿ ಶಾಹಿ ಎಕ್ಸ್ ಪೋರ್ಟ್ಸ್ (337 ಕೋಟಿ), ದಕ್ಷಿಣ ಕನ್ನಡದಲ್ಲಿ ಇನ್ಫ್ರಾಗೆಲಾಕ್ಸಿ (300 ಕೋಟಿ), ಬೆಂಗಳೂರು ಗ್ರಾಮಾಂತರದಲ್ಲಿ ಬೆಲಾಟ್ರಿಕ್ಸ್ ಏರೋಸ್ಪೇಸ್ (404 ಕೋಟಿ), ಪ್ರಾಕ್ಸೈರ್ ಇಂಡಿಯಾ (210 ಕೋಟಿ), ಬಲ್ಕ್ ಲಿಕ್ವಿಡ್ ಸೊಲ್ಯೂಷನ್ಸ್ (110 ಕೋಟಿ) ಹೂಡಿಕೆ ಮಾಡಲಿದೆ. ಇದಲ್ಲದೆ, ತುಮಕೂರು, ಗದಗ ಮತ್ತು ಕೊಡಗು ಜಿಲ್ಲೆಗಳಲ್ಲೂ ಗಣನೀಯ ಮಟ್ಟದ ಹೂಡಿಕೆಗಳು ನಡೆಯುತ್ತಿದ್ದು, ಇದು ರಾಜ್ಯದ ಸಮತೋಲಿತ ಅಭಿವೃದ್ಧಿಗೆ ದಾರಿಯಾಗಿದೆ.

ಆರ್ಥಿಕತೆಯ ಮೇಲೆ ಪ್ರಭಾವ

ಈ 55 ಯೋಜನೆಗಳು ಕೇವಲ ಅಂಕಿ-ಅಂಶಗಳಾಗಿ ಉಳಿಯದೆ, ನೇರವಾಗಿ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲಿವೆ. ವಿಶೇಷವಾಗಿ ವಿಜಯಪುರ, ಬಳ್ಳಾರಿ ಮತ್ತು ಕಲಬುರಗಿಯಂತಹ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇಂತಹ ಬೃಹತ್ ಕೈಗಾರಿಕೆಗಳು ಬರುವುದು ಅಲ್ಲಿನ ಸ್ಥಳೀಯ ಯುವಕರಿಗೆ ದೊಡ್ಡ ಅವಕಾಶವಾಗಿದೆ. ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಬೆಳವಣಿಗೆಯು ರಾಜ್ಯವನ್ನು 'ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಹಬ್' ಆಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸರ್ಕಾರದ ಈ ತೀರ್ಮಾನವು ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸೃಷ್ಟಿಸಿದೆ. ಏಕಗವಾಕ್ಷಿ ಸಮಿತಿಯ ಮೂಲಕ ತ್ವರಿತವಾಗಿ ಅನುಮೋದನೆ ನೀಡುತ್ತಿರುವುದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಿದೆ.

Read More
Next Story