
Mangalore| ಸೆಪ್ಟೆಂಬರ್‌ನಲ್ಲಿ ಮಂಗಳೂರು - ತಣ್ಣೀರುಬಾವಿ ಬ್ರಿಡ್ಜ್ ಸಂಚಾರಕ್ಕೆ ಮುಕ್ತ!
ಮಂಗಳೂರಿಗೆ ಹತ್ತಿರದಲ್ಲಿದ್ದರೂ ತಣ್ಣೀರುಬಾವಿ ಬೀಚ್ ತಲುಪಲು ಪ್ರವಾಸಿಗರು, ಸ್ಥಳೀಯರು 15 ರಿಂದ 20 ಕಿ.ಮೀ ಸುತ್ತಿ ಬಳಸಿ ಬರಬೇಕಿತ್ತು. ರಾತ್ರಿ ವೇಳೆ ಹಾಗೂ ತುರ್ತು ಸಂದರ್ಭಗಳಲ್ಲಿ ದೋಣಿ ಪ್ರಯಾಣ ಕಷ್ಟಕರವಾಗಿತ್ತು.
ಕರಾವಳಿ ಜನರ ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು-ತಣ್ಣೀರುಬಾವಿ ಸಂಪರ್ಕಿಸುವ ಸೇತುವೆ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಇದರಿಂದ ತಣ್ಣೀರುಬಾವಿ ದಡದಲ್ಲಿರುವ ಸಾವಿರಾರು ಕುಟುಂಬಗಳ ಸಂಚಾರ ಸಂಕಷ್ಟಕ್ಕೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.
30 ನಿಮಿಷದ ದಾರಿ 10 ನಿಮಿಷಕ್ಕೆ ಇಳಿಕೆ
ಮಂಗಳೂರು ನಗರಕ್ಕೆ ಹತ್ತಿರದಲ್ಲಿದ್ದರೂ ತಣ್ಣೀರುಬಾವಿ ಬೀಚ್ ತಲುಪಲು ಪ್ರವಾಸಿಗರು ಮತ್ತು ಸ್ಥಳೀಯರು ಸುಮಾರು 15 ರಿಂದ 20 ಕಿ.ಮೀ ಸುತ್ತಿ ಬಳಸಿ ಬರಬೇಕಿತ್ತು. ದೋಣಿ ಮೂಲಕ ಸಂಚರಿಸುವುದು ಸುಲಭವಾಗಿದ್ದರೂ ರಾತ್ರಿ ವೇಳೆ ಹಾಗೂ ತುರ್ತು ಸಂದರ್ಭಗಳಲ್ಲಿ ಸಾಧ್ಯವಾಗುತ್ತಿರಲಿಲ್ಲ. ಈಗ ಸೇತುವೆ ನಿರ್ಮಾಣದಿಂದ 35 ನಿಮಿಷಗಳ ಪ್ರಯಾಣದ ಅವಧಿ ಕೇವಲ 10 ನಿಮಿಷಕ್ಕೆ ಇಳಿಕೆಯಾಗಲಿದೆ. ಕುಳೂರು ಮೂಲಕ ಸುತ್ತಿ ಬಳಸಿ ಹೋಗುವ ಕಿರಿಕಿರಿಯೂ ತಪ್ಪಲಿದ್ದು, ನಗರದಿಂದ ನೇರ ಸಂಪರ್ಕ ಸಿಗಲಿದೆ.
64 ಕೋಟಿ ರೂ. ವೆಚ್ಚದ 'ಬೋ-ಸ್ಟ್ರಿಂಗ್' ವಿನ್ಯಾಸ
ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಈ ಸೇತುವೆಯು ತಾಂತ್ರಿಕವಾಗಿ ಗಮನ ಸೆಳೆಯುತ್ತಿದೆ. ಒಟ್ಟು 285 ಮೀಟರ್ ಉದ್ದದ ಸೇತುವೆಯ ಮಧ್ಯಭಾಗದಲ್ಲಿ 100 ಮೀಟರ್ ಉದ್ದದ 'ಬೋ-ಸ್ಟ್ರಿಂಗ್' (Bow-string) ವಿನ್ಯಾಸ ಅಳವಡಿಸಲಾಗುತ್ತಿದೆ. ಇದು ಸೇತುವೆಗೆ ಬಲ ನೀಡಲಿದೆ. ದ್ವಿಚಕ್ರ ವಾಹನಗಳಿಂದ ಹಿಡಿದು ಭಾರೀ ವಾಹನಗಳವರೆಗೆ ಎಲ್ಲಾ ಮಾದರಿಯ ವಾಹನಗಳು ಸಂಚರಿಸುವಂತೆ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ.
"ತಣ್ಣೀರುಬಾವಿ ಭಾಗದ ಸುಮಾರು 4ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸೇತುವೆಯಿಂದ ವರದಾನವಾಗಲಿದೆ. ವೈದ್ಯಕೀಯ ತುರ್ತು ಅಥವಾ ದೈನಂದಿನ ಕೆಲಸಗಳಿಗಾಗಿ ನಗರಕ್ಕೆ ಬರುವವರಿಗೆ ದಶಕಗಳಿಂದ ಇದ್ದ ಅಡೆತಡೆಗಳು ಈ ಸೇತುವೆಯಿಂದ ನಿವಾರಣೆಯಾಗಲಿವೆ." ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಆನೆಬಲ
ತಣ್ಣೀರುಬಾವಿ ಪರಿಸರದಲ್ಲಿ ವಾಸಿಸುವ 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕಾಗಿ ಮಂಗಳೂರು ನಗರವನ್ನೇ ನೆಚ್ಚಿಕೊಂಡಿವೆ. ರಾತ್ರಿ ಹೊತ್ತು ದೋಣಿ ಸೇವೆ ಇಲ್ಲದಿದ್ದಾಗ ಅಥವಾ ಮಳೆಗಾಲದಲ್ಲಿ ಸಮುದ್ರ ರೌದ್ರಾವತಾರ ತಾಳಿದಾಗ ಈ ಕುಟುಂಬಗಳ ಬದುಕು ದುಸ್ತರವಾಗುತ್ತಿತ್ತು. ಈಗ ಸೇತುವೆ ಲೋಕಾರ್ಪಣೆಯಾದರೆ ಈ ಭಾಗದ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳಲಿವೆ. ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ಸಿಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳ ಗಡುವು ನೀಡಿದ್ದಾರೆ. ಆದರೆ, ಸದ್ಯಕ್ಕೆ ಕರಾವಳಿಯಲ್ಲಿ ಮಳೆಗಾಲ ಆರಂಭವಾಗುತ್ತಿರುವುದರಿಂದ ಬಾಕಿ ಉಳಿದಿರುವ ಅಲ್ಪಸ್ವಲ್ಪ ಕಾಮಗಾರಿಗಳು ವೇಗವಾಗಿ ನಡೆಯುತ್ತವೆಯೇ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.

