
ಮಂಗಳೂರಿನ ಅಳಿವೆಬಾಗಿಲಿನಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿಯ ರಕ್ಷಣೆ
ಆಳಸಮುದ್ರ ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬೋಟ್‌ನ ತಳಭಾಗ ಕಲ್ಲಿಗೆ ಬಡಿದು ಹಾನಿಯಾಗಿದೆ. ಸಮೀಪದ ಮತ್ತೊಂದು ಬೋಟ್‌ನವರು ತಕ್ಷಣ ನೆರವಿಗೆ ಧಾವಿಸಿದ್ದಾರೆ.
ಮೀನುಗಾರಿಕೆ ಮುಗಿಸಿ ದಡಕ್ಕೆ ಹಿಂದಿರುಗುತ್ತಿದ್ದ ಬೋಟ್ ಸಮುದ್ರದಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದು ಮುಳುಗಡೆಯಾದ ಘಟನೆ ಮಂಗಳೂರಿನ ಅಳಿವೆಬಾಗಿಲು ಸಮೀಪ ಶನಿವಾರ ಸಂಜೆ ನಡೆದಿದೆ. ಉಳ್ಳಾಲದಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಅಯಾನ್’ ಹೆಸರಿನ ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಬೋಟ್‌ನ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದು, ಎಲ್ಲರೂ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಇಬ್ರಾಹಿಂ ಖಲೀಲ್ ಅವರ ಮಾಲೀಕತ್ವದ ‘ಅಯಾನ್’ ಬೋಟ್ ಉಳ್ಳಾಲದಿಂದ ಮೀನುಗಾರಿಕೆಗಾಗಿ ಆಳಸಮುದ್ರಕ್ಕೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ಬೋಟ್ ವಾಪಸಾಗುತ್ತಿದ್ದ ವೇಳೆ ಮಂಗಳೂರಿನ ಅಳಿವೆಬಾಗಿಲು ಸಮೀಪ ಈ ಅವಘಡ ಸಂಭವಿಸಿದೆ.
ಬೋಟ್‌ನ ತಳಭಾಗ ಸಮುದ್ರದಲ್ಲಿದ್ದ ಕಲ್ಲಿಗೆ ಬಡಿದ ಪರಿಣಾಮ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ. ತಳಭಾಗ ಒಡೆದಿದ್ದರಿಂದ ಸಮುದ್ರದ ನೀರು ಬೋಟ್‌ನೊಳಗೆ ನುಗ್ಗಿದ್ದು. ಕೆಲವೇ ಸಮಯದಲ್ಲಿ ಬೋಟ್ ಮುಳುಗಿದೆ.
ಇತರ ಬೋಟ್‌ನಿಂದ ರಕ್ಷಣಾ ಕಾರ್ಯ
ಬೋಟ್ ಮುಳುಗುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ಮೀನುಗಾರರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಅಪಾಯಕ್ಕೆ ಸಿಲುಕಿದ್ದ ಆರು ಮಂದಿ ಮೀನುಗಾರರನ್ನು ಮತ್ತೊಂದು ಬೋಟ್‌ಗೆ ಸ್ಥಳಾಂತರಿಸಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೋಟ್‌ಗೆ ಉಂಟಾಗಿರುವ ಹಾನಿಯ ಪ್ರಮಾಣ ಮತ್ತು ಆರ್ಥಿಕ ನಷ್ಟದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಅಳಿವೆಬಾಗಿಲು ಸಮೀಪ ಎಚ್ಚರಿಕೆಯಿಂದ ಸಂಚಾರ
ಅಳಿವೆಬಾಗಿಲು ಪ್ರದೇಶದಲ್ಲಿ ಬೋಟ್‌ಗಳು ಸಮುದ್ರದಿಂದ ದಡದತ್ತ ಸಂಚರಿಸುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯ ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೋಟ್‌ನ ತಳಭಾಗ ಕಲ್ಲಿಗೆ ಬಡಿದು ಹಾನಿಗೊಳಗಾದ ಘಟನೆ ಹಿಂದೆಯೂ ನಡೆದಿದೆ ಎಂದು ಅವರು ಹೇಳಿದ್ದಾರೆ.

