ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ತುಳು: ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
x

ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ತುಳು: ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಸಾರ್ವಜನಿಕರ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.


Click the Play button to hear this message in audio format

ರಾಜ್ಯದ ಅಭಿವೃದ್ಧಿ ಪಥದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ವಿಶೇಷ ಒತ್ತು ನೀಡಲು ಮುಂದಾಗಿರುವ ರಾಜ್ಯ ಸಚಿವ ಸಂಪುಟವು, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಜಿಲ್ಲೆಯ ಹೆಸರು ಬದಲಾವಣೆಯಿಂದ ಹಿಡಿದು, ಭಾಷಾ ಮನ್ನಣೆ, ವೈದ್ಯಕೀಯ ಶಿಕ್ಷಣ, ಮತ್ತು ಪ್ರವಾಸೋದ್ಯಮದ ಭಾರಿ ಹೂಡಿಕೆಯವರೆಗೆ ಸರ್ಕಾರವು ಸಮಗ್ರ ಅಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸಿದೆ.

ದಶಕಗಳ ಬೇಡಿಕೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಡಳಿತಾತ್ಮಕ ಉದ್ದೇಶಗಳಿಗಾಗಿ ಕನ್ನಡದ ಜೊತೆಗೆ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಘೋಷಿಸಲು ಸಂಪುಟ ಅನುಮೋದನೆ ನೀಡಿದೆ. ಈ ಐತಿಹಾಸಿಕ ನಿರ್ಧಾರವು ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಗೆ ಸಿಕ್ಕ ದೊಡ್ಡ ಗೌರವವಾಗಿದೆ. ಜಿಲ್ಲಾಡಳಿತವನ್ನು ಈ ಯೋಜನೆ ಅನುಷ್ಠಾನದ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಸಾರ್ವಜನಿಕರ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಜಿಲ್ಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ಎಂಬ ಹೆಸರಿನಲ್ಲೇ ಗುರುತಿಸಲ್ಪಡುತ್ತಿರುವುದರಿಂದ, ಸಾರ್ವಜನಿಕರ ಅಭಿಪ್ರಾಯ ಪಡೆದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.

ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು

2025-26ರ ಬಜೆಟ್‌ನಲ್ಲಿ ಘೋಷಿಸಿದಂತೆ, ಪುತ್ತೂರಿನ ಬನ್ನೂರು ಗ್ರಾಮದ ಸೇಡಿಯಾವು ಬಳಿ 549.79 ಕೋಟಿ ರೂ. ವೆಚ್ಚದಲ್ಲಿ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಬೋಧನಾ ಆಸ್ಪತ್ರೆ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ. ಇದು ಈ ಭಾಗದ ಬಡ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆ ಕಲ್ಪಿಸುವುದಲ್ಲದೆ, ಕರಾವಳಿ ಭಾಗದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಆರ್ಥಿಕತೆಗೆ ಪ್ರವಾಸೋದ್ಯಮವೇ ಬೆನ್ನೆಲುಬು. ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಶೇ. 40-45ರಷ್ಟು ಜನರು ಈ ಭಾಗಕ್ಕೆ ಭೇಟಿ ನೀಡುತ್ತಾರೆ ಮತ್ತು ಸುಮಾರು 2876.44 ಕೋಟಿ ರೂ. ವಿದೇಶಿ ವಿನಿಮಯ ಆದಾಯವನ್ನು ಇದು ತರುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026ಕ್ಕೆ ಅನುಮೋದನೆ ನೀಡಿದೆ. ಇದರಿಂದ ಪ್ರವಾಸಿ ಸರ್ಕ್ಯೂಟ್‌ಗಳ ಅಭಿವೃದ್ಧಿ, ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿ, ಮೂಲಸೌಕರ್ಯಗಳ ಆಧುನೀಕರಣವನ್ನು ಒಳಗೊಂಡಿದೆ. ಇದರೊಂದಿಗೆ, ದೂರಗಾಮಿ ಯೋಜನೆ ಮೂಲಕ ಪ್ರವಾಸೋದ್ಯಮ ಸ್ವತ್ತುಗಳ ಮೌಲ್ಯಮಾಪನ ಮತ್ತು ಹೂಡಿಕೆ ವಿಧಾನಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ದ್ವೀಪಗಳ ಅಭಿವೃದ್ಧಿ ಮತ್ತು ಮೆಗಾ ಯೋಜನೆಗಳು

ಕರಾವಳಿ ಭಾಗವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ರೂಪಿಸಲು ಕರಾವಳಿಯ 12 ದ್ವೀಪಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಕೆಲವು ಪ್ರಮುಖ ಯೋಜನೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ. ಮಂಗಳೂರಿನ ಕೋಡಿಕಲ್‌ನಲ್ಲಿನ 16.5 ಎಕರೆ ಜಮೀನಿನಲ್ಲಿ 73 ಕೋಟಿ ರೂ. ವೆಚ್ಚದಲ್ಲಿ ‘ರಿವರ್‌ಫ್ರಂಟ್ ವೆಲ್‌ನೆಸ್ ರೆಸಾರ್ಟ್’, ತಣ್ಣೀರುಬಾವಿಯಲ್ಲಿ 53 ಕೋಟಿ ರೂ. ವೆಚ್ಚದಲ್ಲಿ ಬೀಚ್-ಫ್ರಂಟ್ ಗ್ಲ್ಯಾಂಪಿಂಗ್ ಮತ್ತು ಸಾಗರ ಅನುಭವ ಕೇಂದ್ರ. ಉಡುಪಿಯಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ರೆಸಾರ್ಟ್ ಮತ್ತು ಸಾಹಸ ಕ್ರೀಡಾ ವಲಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ 64 ಕೋಟಿ ರೂ. ವೆಚ್ಚದಲ್ಲಿ ಪರಿಸರ-ವಿಹಾರಧಾಮದ ಅಭಿವೃದ್ಧಿ ಮಾಡಲಾಗುವುದು ಎಂದರು.

ಕಾರವಾರ ವಿಮಾನ ನಿಲ್ದಾಣ ವಿಸ್ತರಣೆ

ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ, ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು 98.24 ಕೋಟಿ ರೂ.ಯಿಂದ 250.05 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತವಿರುವ 2000 ಮೀಟರ್ ರನ್‌ವೇಯನ್ನು 3250 ಮೀಟರ್‌ಗೆ ವಿಸ್ತರಿಸುವ ಮೂಲಕ, ಇಲ್ಲಿ ಏರ್-ಬಸ್ A-320 ನಂತಹ ದೊಡ್ಡ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ವಿವರಿಸಿದರು.

Read More
Next Story