
ಇಂದು ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ- ಕರಾವಳಿಯ ಬೇಡಿಕೆಗೆ ಸಿಗುತ್ತಾ ಮನ್ನಣೆ
ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಕರಾವಳಿಯ ಜನರ ಹಲವು ವರ್ಷಗಳ ಬೇಡಿಕೆಗಳು ಮುನ್ನೆಲೆಗೆ ಬಂದಿವೆ. ತುಳು ಅಧಿಕೃತ ಭಾಷೆ, ಮೀನುಗಾರಿಕೆ, ಸಂಪರ್ಕ, ಪ್ರವಾಸೋದ್ಯಮ, ಜಲಮೆಟ್ರೊ ಸೇರಿದಂತೆ ಹಲವು ನಿರೀಕ್ಷೆಗಳಿವೆ.
ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಹಲವು ಮಹತ್ವದ ನಿರ್ಧಾರಗಳ ನಿರೀಕ್ಷೆಯೊಂದಿಗೆ ಮಂಗಳೂರಿನಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ ಸಜ್ಜಾಗಿದೆ. ಸಭೆಯ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಜನರಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.
ನವ ಮಂಗಳೂರು ಬಂದರು, ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕ, ಉನ್ನತ ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್ ಕ್ಷೇತ್ರ, ಪಶ್ಚಿಮ ಘಟ್ಟ, ಕಡಲ ತೀರಗಳು ಹಾಗೂ ಧಾರ್ಮಿಕ ಕ್ಷೇತ್ರಗಳ ಮೂಲಕ ಕರಾವಳಿ ತನ್ನದೇ ಆದ ಆರ್ಥಿಕ ಮತ್ತು ಪ್ರವಾಸೋದ್ಯಮ ಸಾಮರ್ಥ್ಯ ಹೊಂದಿದೆ. ಈ ಅವಕಾಶಗಳನ್ನು ಬಳಸಿಕೊಂಡು ಪರಿಸರ ಮತ್ತು ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರ ಜತೆಗೆ ಸ್ಥಳೀಯರ ಬದುಕು ಬದಲಿಸುವಂತಹ ಯೋಜನೆಗಳಿಗೆ ಸರ್ಕಾರ ಒತ್ತು ನೀಡಬೇಕು ಎಂಬುದು ಜನರ ಆಶಯವಾಗಿದೆ.
ಕರಾವಳಿಯ ಪ್ರಮುಖ ಬೇಡಿಕೆಗಳ ಬಗ್ಗೆ ನಿರ್ಧಾರ
ಕರಾವಳಿಯ ಪ್ರಮುಖ ಬೇಡಿಕೆಗಳಲ್ಲಿ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವುದೂ ಸೇರಿದೆ. ಈ ಸಚಿವ ಸಂಪುಟ ಸಭೆಯಲ್ಲೇ ಈ ಕುರಿತು ಐತಿಹಾಸಿಕ ನಿರ್ಧಾರ ಹೊರಬರಬೇಕು ಎಂಬ ನಿರೀಕ್ಷೆ ಸ್ಥಳೀಯರಲ್ಲಿದೆ. ಮಳೆಗಾಲದಲ್ಲಿ ಘಾಟಿ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಉದ್ಯಮಿಗಳ ಪ್ರಮುಖ ಬೇಡಿಕೆಯಾಗಿದೆ. ರಾಜ್ಯದ ಇತರ ಭಾಗಗಳೊಂದಿಗೆ ಕರಾವಳಿಗೆ ಸರ್ವಋತು ಸಂಪರ್ಕ ಕಲ್ಪಿಸುವ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೀನುಗಾರಿಕಾ ಕ್ಷೇತ್ರದಲ್ಲೂ ಹಲವು ಸಮಸ್ಯೆಗಳಿವೆ. ಬಂದರುಗಳ ವಿಸ್ತರಣೆ ಆಗದ ಕಾರಣ ಮೀನುಗಾರಿಕಾ ದೋಣಿಗಳನ್ನು ನಿಲುಗಡೆ ಮಾಡಲು ಸ್ಥಳದ ಕೊರತೆ ಎದುರಾಗಿದೆ. ಅಳಿವೆ ಬಾಗಿಲುಗಳಲ್ಲಿ ತುಂಬಿರುವ ಹೂಳು ಮೀನುಗಾರರ ಸುರಕ್ಷತೆಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿರೀಕ್ಷೆಯಲ್ಲಿ ಮೀನುಗಾರರ ಸಮುದಾಯವಿದೆ.
ಕರಾವಳಿಯ ಮೂಲನಿವಾಸಿಗಳಾದ ಕೊರಗರು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಲವು ಕುಟುಂಬಗಳು ಇನ್ನೂ ಭೂಹೀನರಾಗಿದ್ದಾರೆ. ಅವರಿಗಾಗಿ ಮೀಸಲಿಟ್ಟಿರುವ ಡಿ.ಸಿ. ಮನ್ನಾ ಜಮೀನುಗಳ ಒತ್ತುವರಿ ತೆರವುಗೊಳಿಸಿ, ಅರ್ಹರಿಗೆ ಕೃಷಿ ಭೂಮಿ ಒದಗಿಸಬೇಕು ಎಂಬ ಬೇಡಿಕೆಯೂ ಇದೆ. ದೈವಾರಾಧನೆಯ ಚಾಕರಿ ವರ್ಗಕ್ಕೆ ಮಾಸಿಕ ವೇತನ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಇದರ ಜತೆಗೆ ಕರಾವಳಿಯ ಪ್ರಮುಖ ದ್ವೀಪಗಳ ಅಭಿವೃದ್ಧಿ, ಜಲಮೆಟ್ರೊ, ಅಂತರರಾಷ್ಟ್ರೀಯ ಐಷಾರಾಮಿ ಹಡಗುಗಳ ನಿಲ್ದಾಣ, ಮಂಗಳೂರು–ಮರವಂತೆ ಪ್ರಯಾಣಿಕರ ದೋಣಿ ಸೇವೆ, ಸಮುದ್ರಯಾನ ವಸ್ತುಸಂಗ್ರಹಾಲಯ, ಪ್ರವಾಸೋದ್ಯಮ ವಲಯ, ಬ್ಲೂ ಫ್ಲ್ಯಾಗ್ ಕಡಲತೀರಗಳ ಅಭಿವೃದ್ಧಿ ಹಾಗೂ ಸಮುದ್ರದಲ್ಲಿ ಸುರಕ್ಷಿತ ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡುವಂತಹ ಹಲವು ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿವೆ.
ಮಂಗಳೂರು ವಿಶೇಷ ಆರ್ಥಿಕ ವಲಯದ ಕೈಗಾರಿಕೆಗಳು, ಎಂಆರ್‌ಪಿಎಲ್‌ನಂತಹ ಬೃಹತ್ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಖಾತರಿಪಡಿಸುವ ಪೂರಕ ನಿಯಮಾವಳಿ ರೂಪಿಸಬೇಕು ಎಂಬ ಬೇಡಿಕೆಯೂ ಬಲವಾಗಿದೆ.
ಹೀಗಾಗಿ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಕೇವಲ ಆಡಳಿತಾತ್ಮಕ ಸಭೆಯಾಗದೆ, ಕರಾವಳಿಯ ಹಲವು ವರ್ಷಗಳ ಬೇಡಿಕೆಗಳಿಗೆ ಸ್ಪಂದಿಸುವ ಮಹತ್ವದ ವೇದಿಕೆಯಾಗಬೇಕು ಎಂಬುದು ಕರಾವಳಿ ಜನರ ನಿರೀಕ್ಷೆಯಾಗಿದೆ.

