
ಬಗರ್ ಹುಕುಂ ಹಗರಣ: ಐಎಎಸ್ ಮಟ್ಟದ ಅಧಿಕಾರಿಗಳಿಗೂ ತಟ್ಟಲಿದೆ ತನಿಖೆಯ ಬಿಸಿ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಅಧಿಕಾರಿಗಳೇ ಶಾಮೀಲಾಗಿ ಬರೋಬ್ಬರಿ 1 ಸಾವಿರ ಎಕರೆ ಬೆಲೆಬಾಳುವ ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಲೂಟಿ ಮಾಡಿರುವುದು ಗೊತ್ತಾಗಿದೆ.
ರಾಜ್ಯದ ಕಂದಾಯ ಇಲಾಖೆಯಲ್ಲಿ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ತನಿಖೆಯಿಂದ ಬಯಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಅಧಿಕಾರಿಗಳೇ ಶಾಮೀಲಾಗಿ ನಡೆಸಿದ ವ್ಯವಸ್ಥಿತ ಬಗರ್ ಹುಕುಂ ಭೂ ಮಂಜೂರಾತಿ ಹಗರಣವು ಇದೀಗ ರಾಜ್ಯ ರಾಜಕೀಯ ಮತ್ತು ಆಡಳಿತ ಯಂತ್ರದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬರೋಬ್ಬರಿ 1 ಸಾವಿರ ಎಕರೆ ಬೆಲೆಬಾಳುವ ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಲೂಟಿ ಮಾಡಿರುವುದು ಗೊತ್ತಾಗಿದೆ.
ಸುಮಾರು ಮೂರು ತಿಂಗಳ ಹಿಂದೆ ಲೋಕಾಯುಕ್ತ ಪೊಲೀಸರು ನಾಗಮಂಗಲ ತಾಲೂಕು ಕಚೇರಿ ಸೇರಿದಂತೆ ಹಲವು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಆಗಿನ ಪ್ರಾಥಮಿಕ ತನಿಖೆಯಲ್ಲಿ ಸುಮಾರು 238 ಎಕರೆ ಭೂಮಿಯ ಅಕ್ರಮ ಮಂಜೂರಾತಿ ಪತ್ತೆಯಾಗಿತ್ತು. ಆದರೆ, ಹಗರಣದ ವ್ಯಾಪ್ತಿ ಮತ್ತು ತೀವ್ರತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದರು. ಮಂಡ್ಯ ಎಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ, ಸಮಗ್ರ ತನಿಖೆಗೆ ಆದೇಶಿಸಿದ್ದರು. ವಿಸ್ತೃತ ತನಿಖೆ ನಡೆಸಿದಾಗ, ಲೂಟಿಯಾಗಿರುವ ಭೂಮಿಯ ಪ್ರಮಾಣ ಕೇವಲ 238 ಎಕರೆ ಅಲ್ಲ, ಅದು ಬರೋಬ್ಬರಿ 1 ಸಾವಿರ ಎಕರೆ ಎಂಬುದು ಗೊತ್ತಾಗಿದೆ.
ಭೂ ಮಾಫಿಯಾದ ವ್ಯವಸ್ಥಿತ ಸಂಚು
ಈ ಹಗರಣವು ಕೇವಲ ಒಂದು ಸಣ್ಣ ತಪ್ಪು ಅಲ್ಲ, ಬದಲಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪ್ರಭಾವಿ ಭೂ ಮಾಫಿಯಾದ ನಡುವಿನ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕೃಷಿ ಮಾಡದವರು ಮತ್ತು ನಾಗಮಂಗಲದ ಪರಿಚಯವೇ ಇಲ್ಲದ ಹೊರ ರಾಜ್ಯದ ಕೋಟ್ಯಧಿಪತಿಗಳ ಹೆಸರಿಗೆ ಸರ್ಕಾರಿ ಗೋಮಾಳ ಜಮೀನನ್ನು ಮಂಜೂರು ಮಾಡಲಾಗಿದೆ. ಅಕ್ರಮ ಮಂಜೂರಾತಿಗಾಗಿ ಅಧಿಕಾರಿಗಳು ನಕಲಿ ಸಾಗುವಳಿ ಚೀಟಿ, ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ. ಈ ಗೋಲ್ಮಾಲ್ ಮುಚ್ಚಿಹಾಕಲು ಕಚೇರಿಯಲ್ಲಿದ್ದ ಮೂಲ ದಾಖಲೆಗಳ ಪುಟಗಳನ್ನೇ ಹರಿದು ಹಾಕಿ, ಬೇಕಾಬಿಟ್ಟಿ ತಿದ್ದುಪಡಿಗಳನ್ನು ಮಾಡಿದ್ದಾರೆ. ಇದು ಕಂದಾಯ ಇಲಾಖೆಯ ಪಾವಿತ್ರ್ಯತೆಗೆ ತಂದಿರುವ ಅತಿದೊಡ್ಡ ಕಳಂಕವಾಗಿದೆ.
ಉಪಲೋಕಾಯುಕ್ತರ ಖಡಕ್ ಎಚ್ಚರಿಕೆ
ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ. ಕೆಳ ಹಂತದ ಸಿಬ್ಬಂದಿಯಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ ಈ ಹಗರಣದಲ್ಲಿ ಯಾರು ಭಾಗಿಯಾಗಿದ್ದರೂ, ಅವರೆಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅವರನ್ನು ಜೈಲಿಗೆ ಕಳುಹಿಸುವುದು ಖಚಿತ ಎಂದು ಎಚ್ಚರಿಸಿದ್ದಾರೆ. ಇತ್ತೀಚೆಗಷ್ಟೇ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದ್ದ ಅವರು, ಸಾರ್ವಜನಿಕ ಸೇವಕರಾದವರು ಲೂಟಿ ಮಾಡಲು ಅಧಿಕಾರಕ್ಕೆ ಬರುವುದಲ್ಲ, ಜನಸೇವೆ ಮಾಡಲು ಎಂದು ನೆನಪಿಸಿದ್ದಾರೆ.
ಸಚಿವರ ಕ್ರಮ
ಈ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲಾಖೆಯೊಳಗಿನ ಭ್ರಷ್ಟರ ವಿರುದ್ಧ ಸಮರ ಸಾರಿದ್ದಾರೆ. ಬೇಲಿ ಎದ್ದು ಹೊಲ ಮೇಯ್ದಂತೆ ಕಂದಾಯ ಅಧಿಕಾರಿಗಳು ವರ್ತಿಸಿದ್ದಾರೆ. ಮೂಲ ಕಡತಗಳನ್ನು ಹರಿದು ಹಾಕಿದ್ದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗರಣದ ವ್ಯಾಪ್ತಿಗೆ ಬರುವ 1 ಸಾವಿರ ಎಕರೆ ಜಮೀನಿನ ಎಲ್ಲಾ ಮಂಜೂರಾತಿ ಮತ್ತು ಖಾತೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಡಲಾಗಿದೆ. ತಹಶೀಲ್ದಾರ್, ಉಪತಹಶೀಲ್ದಾರ್, ಶಿರಸ್ತೆದಾರ್, ಆರ್.ಐ ಮತ್ತು ವಿ.ಎ ಮಟ್ಟದ ಎಲ್ಲ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸೇವೆಯಿಂದ ಅಮಾನತುಗೊಳಿಸಲು ಆದೇಶಿಸಲಾಗಿದೆ.

