
ಮಂಡ್ಯ ಮೈಶುಗರ್ ಕಾರ್ಖಾನೆ 4.60 ಲಕ್ಷ ಟನ್ ಕಬ್ಬಿನ ಒಪ್ಪಂದದ ಪೈಕಿ 2.10 ಲಕ್ಷ ಟನ್ ಮಾತ್ರ ಅರಿದು ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಡ್ಯ | ಅರ್ಧದಷ್ಟು ಕಬ್ಬು ಅರೆಯದೆ ಮೈಶುಗರ್ ಕಾರ್ಖಾನೆ ಬಂದ್; ರೈತರಿಗೆ ಸಂಕಷ್ಟ
ಬಾಯ್ಲಿಂಗ್ ಹೌಸ್ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದೆ. ಆದರೆ ಆಡಳಿತ ಮಂಡಳಿಯ ವೈಫಲ್ಯವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯದ ರೈತರ ಜೀವನಾಡಿಯಾಗಿರುವ ಸರ್ಕಾರಿ ಸ್ವಾಮ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವಿಕೆಯನ್ನು ದಿಢೀರ್ ಸ್ಥಗಿತಗೊಳಿಸಿದೆ. ಮುಂದಿನ ಹಂಗಾಮಿನವರೆಗೆ ಕಾರ್ಖಾನೆ ಕಾರ್ಯನಿರ್ವಹಿಸುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದ್ದು, ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅರ್ಧದಷ್ಟು ಕಬ್ಬನ್ನೂ ಅರೆಯದೆ ಕಾರ್ಖಾನೆ ಸ್ಥಗಿತಗೊಂಡಿರುವುದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
4.60 ಲಕ್ಷ ಟನ್ ಒಪ್ಪಂದ, ಅರಿದಿದ್ದು 2.10 ಲಕ್ಷ ಟನ್ ಮಾತ್ರ
ಪ್ರಸಕ್ತ ಹಂಗಾಮಿನಲ್ಲಿ ಮೈಶುಗರ್ ಕಾರ್ಖಾನೆ ಒಟ್ಟು 4.60 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈವರೆಗೆ ಕೇವಲ 2.10 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಮಾತ್ರ ಅರೆಯಲಾಗಿದೆ. ಉಳಿದ ಕಬ್ಬು ಇನ್ನೂ ರೈತರ ಹೊಲಗಳಲ್ಲೇ ಉಳಿದಿದೆ. ಇದರಿಂದ ರೈತರು ಮುಂದೇನು ಮಾಡಬೇಕು ಎಂಬ ಆತಂಕಕ್ಕೆ ಒಳಗಾಗಿದ್ದಾರೆ.
ಬಾಯ್ಲಿಂಗ್ ಹೌಸ್ ಕಾಮಗಾರಿ ನೆಪ?
ಬಾಯ್ಲಿಂಗ್ ಹೌಸ್ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದೆ. ಆದರೆ ಆಡಳಿತ ಮಂಡಳಿಯ ವೈಫಲ್ಯವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯಲ್ಲಿ ಪದೇಪದೆ ತಾಂತ್ರಿಕ ದೋಷಗಳು ಕಾಣಿಸಿಕೊಂಡು ಯಂತ್ರೋಪಕರಣಗಳು ಕೈಕೊಟ್ಟಿದ್ದವು. ಇದರಿಂದ ಕಬ್ಬು ಅರೆಯುವಿಕೆ ಹಲವು ಬಾರಿ ಸ್ಥಗಿತಗೊಂಡು ಕಾರ್ಯಾಚರಣೆಯಲ್ಲಿ ವಿಳಂಬವಾಗಿತ್ತು.
ತಾಂತ್ರಿಕ ದೋಷದಿಂದ ಕಾರ್ಮಿಕರು ವಾಪಸ್
ಕಾರ್ಖಾನೆಯಲ್ಲಿ ನಿರಂತರವಾಗಿ ಕೆಲಸ ಸ್ಥಗಿತಗೊಂಡಿದ್ದರಿಂದ ಕಬ್ಬು ಕಟಾವು ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ವಾಪಸಾಗಿದ್ದಾರೆ ಎನ್ನಲಾಗಿದೆ. ಕಾರ್ಮಿಕರ ಕೊರತೆಯಿಂದ ಕಬ್ಬು ಕಟಾವು ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಬಾಯ್ಲಿಂಗ್ ಹೌಸ್ ಕಾಮಗಾರಿಯ ನೆಪ ಹೇಳಿ ಕಾರ್ಖಾನೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂಬುದು ರೈತರ ಆರೋಪವಾಗಿದೆ.
ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಕ್ರಮ
ಮೈಶುಗರ್‌ನಲ್ಲಿ ಅರೆಯದೆ ಉಳಿದಿರುವ ಕಬ್ಬನ್ನು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ತಿಳಿಸಿದ್ದಾರೆ. ಆದರೆ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದರೆ ಹೆಚ್ಚುವರಿ ಸಾರಿಗೆ ವೆಚ್ಚವನ್ನು ರೈತರೇ ಭರಿಸಬೇಕಾಗುತ್ತದೆ. ಈಗಾಗಲೇ ನಷ್ಟ ಎದುರಿಸುತ್ತಿರುವ ರೈತರಿಗೆ ಇದು ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ.
ಸರ್ಕಾರಿ ಕಾರ್ಖಾನೆಯನ್ನೇ ನಂಬಿ ಕಬ್ಬು ಬೆಳೆದ ಮಂಡ್ಯದ ರೈತರು ಈಗ ಅನಿವಾರ್ಯವಾಗಿ ಖಾಸಗಿ ಕಾರ್ಖಾನೆಗಳತ್ತ ಮುಖ ಮಾಡುವಂತಾಗಿದೆ.

