
ವಿರೋಧಿಗಳಿಗೆ ಸ್ಥಳೀಯ ಚುನಾವಣೆ ಮೂಲಕವೇ ಉತ್ತರ: ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಪೊಳ್ಳು ಭರವಸೆಗಳನ್ನು ನೀಡುವಲ್ಲಿ ಮತ್ತು ಪೊಳ್ಳು ಮಾತನಾಡೋದ್ರಲ್ಲಿ ಇಡೀ ದೇಶದಲ್ಲೇ ಫೇಮಸ್ ಆಗಿದ್ದಾರೆ ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಮಂಡ್ಯ ಜಿಲ್ಲಾ ಕಾಂಗ್ರೆಸ್, ಇದೇ ಚುನಾವಣೆಯ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ ಅವರ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಪಕ್ಷದ ಕಾರ್ಯಕರ್ತರಿಗೆ ಒಗ್ಗಟ್ಟಿನ ಮಂತ್ರ ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, " ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಅಧಿಕಾರದ ಆಸೆ ಇದ್ದಿದ್ದರೆ, ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗಲೇ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ, ಅವರು ಅಧಿಕಾರಕ್ಕಿಂತ ದೇಶದ ಹಿತವೇ ಮುಖ್ಯವೆಂದು ಭಾವಿಸಿದವರು. ಅಧಿಕಾರಕ್ಕಾಗಿ ಹಂಬಲಿಸದ ನಾಯಕ ಅವರು" ಎಂದು ಬಣ್ಣಿಸಿದರು. ಕಾಂಗ್ರೆಸ್ ಪಕ್ಷದ ಭವ್ಯ ಇತಿಹಾಸ ಮತ್ತು ದೇಶಕ್ಕೆ ಪಕ್ಷ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ ಅವರು, ದೇಶದ ಸ್ವಾತಂತ್ರ್ಯ ಮತ್ತು ಭದ್ರ ಬುನಾದಿಯಲ್ಲಿ ಕಾಂಗ್ರೆಸ್ನ ಪಾತ್ರ ಚಿರಸ್ಮರಣೀಯ ಎಂದರು.
ತಾವು ಕಾಂಗ್ರೆಸ್ ಸೇರಿದ ದಿನಗಳನ್ನು ನೆನಪಿಸಿಕೊಂಡ ಸಚಿವರು, "ನಾನು ಸೇರಿದಂತೆ ಏಳು ಮಂದಿ ಬೇರೆ ಪಕ್ಷದಿಂದ ಕಾಂಗ್ರೆಸ್ಗೆ ಬಂದಾಗ, ಈ ಕುಟುಂಬ ನಮ್ಮನ್ನು ಅಷ್ಟು ಪ್ರೀತಿಯಿಂದ ಅಪ್ಪಿಕೊಂಡಿತು. ಎಂದಿಗೂ ನನ್ನನ್ನು ಹೊರಗಿನವನಂತೆ ನಡೆಸಿಕೊಂಡಿಲ್ಲ. ಇದು ಕಾಂಗ್ರೆಸ್ನ ಸಂಸ್ಕೃತಿ. ಇದೇ ಒಗ್ಗಟ್ಟನ್ನು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪ್ರದರ್ಶಿಸಬೇಕು" ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಮೂಲಕ, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಬೇಕೆಂದು ಸೂಚಿಸಿದರು.
ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳಿಗೆ ತಿರುಗೇಟು ನೀಡಿದ ಸಚಿವರು, "ಲೋಕಸಭಾ ಸದಸ್ಯರಾಗಿರುವ ಕುಮಾರಸ್ವಾಮಿ ಅವರು ಪೊಳ್ಳು ಭರವಸೆಗಳನ್ನು ನೀಡುವಲ್ಲಿ ಮತ್ತು ಪೊಳ್ಳು ಮಾತನಾಡೋದ್ರಲ್ಲಿ ಇಡೀ ದೇಶದಲ್ಲೇ ಫೇಮಸ್ ಆಗಿದ್ದಾರೆ. ಅವರ ಮಟ್ಟಕ್ಕೆ ಇಳಿದು ಪೊಳ್ಳು ಉತ್ತರ ನೀಡಲು ನಮಗೆ ಸಾಧ್ಯವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ನೀಡುವ ತೀರ್ಪಿನ ಮೂಲಕ ಅವರಿಗೆ ತಕ್ಕ ಉತ್ತರ ಸಿಗಲಿದೆ" ಎಂದು ಹರಿಹಾಯ್ದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕುಮಾರ್ ಕೊಪ್ಪ ಅವರು ಅಧಿಕಾರ ಸ್ವೀಕರಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವಂತೆ ಸಚಿವರು ಸಲಹೆ ನೀಡಿದರು. ನಿಕಟಪೂರ್ವ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕೋರಿದರು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೇ ಈಗಿನಿಂದಲೇ ಸಂಘಟನೆಗೆ ಒತ್ತು ನೀಡಬೇಕು ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಕಚೇರಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಬಹಿರಂಗಪಡಿಸಿದ ಸಚಿವರು, ಶೀಘ್ರವೇ ನೂತನ ಕಚೇರಿಗೆ ಭೂಮಿಪೂಜೆ ನೆರವೇರಲಿದೆ ಎಂದು ಘೋಷಿಸಿದರು. ಕಚೇರಿ ನಿರ್ಮಾಣಕ್ಕಾಗಿ ಒಂದು ಲಕ್ಷ ರೂ. ದೇಣಿಗೆ ನೀಡುವವರ ಹೆಸರುಗಳನ್ನು ಕಚೇರಿಯ ನಾಮಫಲಕದಲ್ಲಿ ಶಾಶ್ವತವಾಗಿ ಅಳವಡಿಸಲಾಗುವುದು ಎಂದು ತಿಳಿಸಿದರು.

