
ಒಂಟಿ ಆನೆಯ ದಾಳಿಗೆ 53 ವರ್ಷದ ವ್ಯಕ್ತಿ ಬಲಿ
ದಕ್ಷಿಣ ಕನ್ನಡ: ಮನೆಗೆ ಮರಳುತ್ತಿದ್ದ ವ್ಯಕ್ತಿ ಕಾಡಾನೆಗೆ ಬಲಿ
ಮಂಗಳೂರಿನ ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ರೇಖ್ಯ ಗ್ರಾಮದಲ್ಲಿ ಕಾಡಾನೆ ದಾಳಿಗೆ 53 ವರ್ಷದ ಬಾಲಕೃಷ್ಣ ಗೌಡ ಬಲಿಯಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಮರಳುವ ವೇಳೆ ದುರಂತ ಸಂಭವಿಸಿದೆ.
ಮಂಗಳೂರಿನ ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ರೇಖ್ಯ ಗ್ರಾಮದಲ್ಲಿ ಕಾಡಾನೆ ದಾಳಿಗೆ 53 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಶನಿವಾರ ಸಂಜೆ ನಡೆದಿದೆ. ಮೃತರನ್ನು ಬಾಲಕೃಷ್ಣ ಗೌಡ ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎಚ್.ಪಿ. ರಾಘವೇಂದ್ರ ಅವರ ಮಾಹಿತಿ ಪ್ರಕಾರ, ಸಂಜೆ 5.30ರಿಂದ 7.30ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಬಾಲಕೃಷ್ಣ ಗೌಡ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಕಾಡಾನೆ ದಾಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಒಂಟಿ ಆನೆಯ ಓಡಾಟದ ಸುಳಿವು
ಘಟನಾ ಸ್ಥಳದಲ್ಲಿ ಪತ್ತೆಯಾದ ಹೆಜ್ಜೆ ಗುರುತುಗಳ ಆಧಾರದ ಮೇಲೆ ಒಂಟಿ ಕಾಡಾನೆ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಅರಣ್ಯ ಇಲಾಖೆ ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯರಿಗೆ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ ನೀಡಲಾಗಿದೆ.
ಕಳೆದ ಜೂನ್‌ನಲ್ಲಿ ಕೊಡಗಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿ ಸಂಧ್ಯಾ ಅಚ್ಚಯ್ಯ (51) ಅವರು ಕುಟುಂಬದ ಕಾಫಿ ತೋಟಕ್ಕೆ ತೆರಳಿದ್ದ ವೇಳೆ ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದರು. ಇದಲ್ಲದೆ ಕಳೆದ ಮೇ ತಿಂಗಳಿನಲ್ಲಿ ದುಬಾರೆ ಆನೆ ಶಿಬಿರದಲ್ಲಿ ಸ್ನಾನ ಮಾಡುತ್ತಿದ್ದ ಎರಡು ಸಾಕಾನೆಗಳು ಪರಸ್ಪರ ಕಾದಾಡಿದಾಗ, ಅವುಗಳನ್ನು ವೀಕ್ಷಿಸುತ್ತಿದ್ದ ತಮಿಳುನಾಡಿನ 33 ವರ್ಷದ ಮಹಿಳಾ ಪ್ರವಾಸಿಗೆಯೊಬ್ಬರು ಆನೆಯಡಿ ಸಿಲುಕಿ ಮೃತಪಟ್ಟಿದ್ದರು. ಬಳಿಕ ರಾಜ್ಯ ಸರ್ಕಾರ ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಆನೆಗಳಿಗೆ ಆಹಾರ ನೀಡುವುದು, ಹತ್ತಿರ ಹೋಗುವುದು ಮತ್ತು ಸ್ನಾನ ಮಾಡಿಸುವ ಚಟುವಟಿಕೆಗಳಿಗೆ ನಿರ್ಬಂಧ ಹೇರಿತ್ತು.

