ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಂಚಲನ: ನಾಯಕರ ರಹಸ್ಯ ಮಾತುಕತೆ
x

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರುಗಳೊಂದಿಗೆ ಇತ್ತೀಚೆಗೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಪ್ರಭಾವಿ ಸಚಿವರೊಬ್ಬರ ಖಾಸಗಿ ಕಟ್ಟಡದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಂಚಲನ: ನಾಯಕರ ರಹಸ್ಯ ಮಾತುಕತೆ

ಮುಖ್ಯಮಂತ್ರಿಗಳನ್ನು ಭೇಟಿಯಾದ ಬಳಿಕ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಗೃಹ ಸಚಿವ ಪರಮೇಶ್ವರ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಅವರು ಪ್ರತ್ಯೇಕವಾಗಿ ರಹಸ್ಯ ಸ್ಥಳವೊಂದರಲ್ಲಿ ಗುಪ್ತ ಮಾತುಕತೆ ನಡೆಸಿದ್ದಾರೆ.


Click the Play button to hear this message in audio format

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ 'ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲವನ್ನು ಶೀಘ್ರವಾಗಿ ಬಗೆಹರಿಸುತ್ತೇವೆ ಮತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ. ಈ ಹೇಳಿಕೆಯ ನಂತರ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ರಹಸ್ಯವಾಗಿ ಸಭೆ ಸೇರಿ ಮುಂದಿನ ರಾಜಕೀಯ ನಡೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರುಗಳೊಂದಿಗೆ ಇತ್ತೀಚೆಗೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಪ್ರಭಾವಿ ಸಚಿವರೊಬ್ಬರ ಖಾಸಗಿ ಕಟ್ಟಡದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವ ಜಮೀರ್ ಅಹಮದ್ ಖಾನ್, ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಹೈಕಮಾಂಡ್‌ನ ಮುಂದಿನ ನಿರ್ಧಾರಗಳು ಮತ್ತು ತಮ್ಮ ಬಣದ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಹರಿಪ್ರಸಾದ್, ಪರಮೇಶ್ವರ್, ಜಮೀರ್ ರಹಸ್ಯ ಮಾತುಕತೆ

ಮುಖ್ಯಮಂತ್ರಿಗಳನ್ನು ಭೇಟಿಯಾದ ಬಳಿಕ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಗೃಹ ಸಚಿವ ಪರಮೇಶ್ವರ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಅವರು ಪ್ರತ್ಯೇಕವಾಗಿ ರಹಸ್ಯ ಸ್ಥಳವೊಂದರಲ್ಲಿ ಗುಪ್ತ ಮಾತುಕತೆ ನಡೆಸಿದ್ದಾರೆ. ದೆಹಲಿ ಮಟ್ಟದಲ್ಲಿ ಹಾಗೂ ಹೈಕಮಾಂಡ್ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಸಂಪೂರ್ಣ ಮಾಹಿತಿಯನ್ನು ಬಿ.ಕೆ. ಹರಿಪ್ರಸಾದ್ ಅವರು ಮುಖ್ಯಮಂತ್ರಿಗಳಿಗೆ ಮತ್ತು ಈ ನಾಯಕರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಮುಂದುವರಿಕೆ ಪರ ಬ್ಯಾಟಿಂಗ್

ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡುವ ಪ್ರಸ್ತಾಪ ಮುಂದಿಟ್ಟರೆ, ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಲು ಬಲವಾದ ವಾದ ಮಂಡಿಸಲು ಈ ನಾಯಕರು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯವಾಗಿ ಅವರು ಮುಂದಿಡಲಿರುವ ಕಾರಣಗಳೆಂದರೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ.

ಆಡಳಿತದ ಮಟ್ಟದಲ್ಲಿ ಯಾವುದೇ ಗುರುತರ ಅಥವಾ ಗಂಭೀರ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿಲ್ಲ. ಪ್ರಬಲ ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಈಗ ಅಧಿಕಾರದಿಂದ ಕೆಳಗಿಳಿಸಿದರೆ, ಅದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ಹೈಕಮಾಂಡ್ ಮುಂದೆ ವಾದಿಸಲು ಮೂವರು ನಾಯಕರು ತೀರ್ಮಾನಿಸಿದ್ದಾರೆ.

Read More
Next Story