ದಲಿತ ನಾಯಕನೆಂದು ಮೈದಾನದ ಶುದ್ಧೀಕರಣ ದೇಶವೇ ತಲೆತಗ್ಗಿಸುವಂತಾಗಿದೆ - ಪರಮೇಶ್ವರ್‌
x

ದಲಿತ ನಾಯಕನೆಂದು ಮೈದಾನದ ಶುದ್ಧೀಕರಣ ದೇಶವೇ ತಲೆತಗ್ಗಿಸುವಂತಾಗಿದೆ - ಪರಮೇಶ್ವರ್‌

ಮಲ್ಲಿಕಾರ್ಜುನ ಖರ್ಗೆಯವರು ಭಾಗವಹಿಸಿದ್ದ ಕಾರ್ಯಕ್ರಮದ ನಂತರ, ಅದೇ ಸ್ಥಳವನ್ನು ‘ಶುದ್ಧೀಕರಣ’ ಹೆಸರಿನಲ್ಲಿ ಯಾಗ ಮಾಡಲಾಗಿದೆ. ಇದು ಭಾರತೀಯ ಸಮಾಜದ ಕೊಳಕು ಮುಖವನ್ನು ಜಗಜ್ಜಾಹೀರು ಮಾಡಿದೆ.


Click the Play button to hear this message in audio format

ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಆಧುನಿಕತೆಯ ಶಿಖರಗಳನ್ನು ಏರುತ್ತಿರುವ ಭಾರತದ ಒಂದೆಡೆ ಈ ವೈಭವವಿದ್ದರೆ, ಮತ್ತೊಂದೆಡೆ ಅದೇ ಭಾರತದ ಮಣ್ಣಿನಲ್ಲಿ ಇಂದಿಗೂ ಮಾನವತೆಯನ್ನು ಅಣಕಿಸುವ ಅಸ್ಪೃಶ್ಯತೆಯ ಭೂತ ಜೀವಂತವಾಗಿದೆ ಎಂಬುದು ದೇಶದ ದುರಂತ. ಇತ್ತೀಚೆಗೆ ಉತ್ತರಾಖಂಡದ ಹಲ್ದ್‌ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಘಟನೆಯೊಂದು ಭಾರತೀಯ ಸಮಾಜದ ಕೊಳಕು ಮುಖವನ್ನು ಜಗಜ್ಜಾಹೀರು ಮಾಡಿದೆ. ಎಐಸಿಸಿ ಅಧ್ಯಕ್ಷರು ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಭಾಗವಹಿಸಿದ್ದ ಕಾರ್ಯಕ್ರಮದ ನಂತರ, ಅದೇ ಸ್ಥಳವನ್ನು ‘ಶುದ್ಧೀಕರಣ’ ಹೆಸರಿನಲ್ಲಿ ಯಾಗ ಮಾಡಲಾಗಿದೆ. ಈ ಘಟನೆ ಕೇವಲ ಒಬ್ಬ ವ್ಯಕ್ತಿಗೆ ಆದ ಅವಮಾನವಲ್ಲ, ಇದು ಭಾರತದ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಲಾದ ಗಂಭೀರ ಅಪರಾಧ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ನಿಂತಿದೆ. ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಿದೆ. ಅಂದರೆ, ಭಾರತದ ನೆಲದಲ್ಲಿ ಜಾತಿಯ ಹೆಸರಿನಲ್ಲಿ ಅಥವಾ ಹುಟ್ಟಿನ ಆಧಾರದ ಮೇಲೆ ಯಾರೊಬ್ಬರನ್ನು ಕೀಳಾಗಿ ಕಾಣುವುದು ಕಾನೂನುಬಾಹಿರ. ಆದರೆ, ಹಲ್ದ್‌ವಾನಿಯಲ್ಲಿ ನಡೆದ ಘಟನೆಯು ಸಂವಿಧಾನವನ್ನು ಮೀರಿ, ಮನುಸ್ಮೃತಿಯ ಕರಾಳ ಆಲೋಚನೆಗಳು ಇಂದಿಗೂ ಸಮಾಜದ ಒಂದು ವರ್ಗದ ರಕ್ತದಲ್ಲಿ ಹರಿಯುತ್ತಿವೆ ಎಂಬುದನ್ನು ಸಾಬೀತುಪಡಿಸಿದೆ. ದೇಶದ ಪ್ರಮುಖ ಸಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸಿರುವ ವ್ಯಕ್ತಿಯೇ ಈ ಮಟ್ಟದ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂದಾದರೆ, ಹಳ್ಳಿಗಳಲ್ಲಿನ ಸಾಮಾನ್ಯ ದಲಿತರ ಮತ್ತು ಶೋಷಿತರ ಪರಿಸ್ಥಿತಿ ಹೇಗಿರಬಹುದು? ಇದು ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕಿಡಿಕಾರಿದ್ದಾರೆ.

ರಾಷ್ಟ್ರೀಯ ನಾಯಕನಿಗೆ ಅವಮಾನ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು, ಮಲ್ಲಿಕಾರ್ಜುನ ಖರ್ಗೆಯವರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಹಿರಿಯ ರಾಜಕಾರಣಿ. ಅವರ ಹಿನ್ನೆಲೆ, ಅವರ ಅನುಭವ ಮತ್ತು ಅವರ ಸಂಸದೀಯ ಪಾಂಡಿತ್ಯದ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಅವರು ಒಬ್ಬ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕಾಗಿ, ಅವರು ಕುಳಿತ ಜಾಗವನ್ನು ಪವಿತ್ರಗೊಳಿಸಲು ಶುದ್ಧೀಕರಣ ಮಾಡುವುದು ಎಂದರೆ, ಆ ಸಮುದಾಯವನ್ನು ಇಂದಿಗೂ ಅಪವಿತ್ರ ಎಂದು ಭಾವಿಸುವ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ವೈಯಕ್ತಿಕ ಘಟನೆಯಲ್ಲ, ಇದು ದಲಿತ ಸಮುದಾಯದ ಆತ್ಮಗೌರವದ ಮೇಲೆ ನಡೆಸಿದ ದಾಳಿ. ಇಂತಹ ಕೃತ್ಯಗಳಿಗೆ ಮೌನ ವಹಿಸುವುದು ಎಂದರೆ, ಇಂತಹ ಜಾತಿವಾದಿ ಶಕ್ತಿಗಳನ್ನು ಬೆಂಬಲಿಸಿದಂತೆಯೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪಕ್ಷಗಳಲ್ಲಿರುವ ದಲಿತರ ಆತ್ಮವಿಮರ್ಶೆ

ಇಂದು ಆಡಳಿತಾರೂಢ ಬಿಜೆಪಿಯಲ್ಲಿ ಹಲವು ದಲಿತ, ಹಿಂದುಳಿದ ವರ್ಗದ ನಾಯಕರಿದ್ದಾರೆ. ಈ ಘಟನೆ ಅವರಲ್ಲಿ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಬೇಕು. ನಾವು ಯಾರ ಕೈ ಬಲಪಡಿಸುತ್ತಿದ್ದೇವೆ? ನಮ್ಮ ಸಮುದಾಯದ ಹಿರಿಯ ನಾಯಕರನ್ನೇ ಅವಮಾನಿಸುವ ವಾತಾವರಣವನ್ನು ಸೃಷ್ಟಿಸುತ್ತಿರುವ ಶಕ್ತಿಗಳ ಜೊತೆ ನಾವು ನಿಂತಿದ್ದೇವೆಯೇ? ಎಂದು ಪ್ರತಿಯೊಬ್ಬ ದಲಿತ ನಾಯಕನೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಜಾತಿ ಕ್ರೌರ್ಯವನ್ನು ಮೆರೆಯುವ ಶಕ್ತಿಗಳು ಆಡಳಿತದಲ್ಲಿ ಪ್ರಬಲವಾಗಿದ್ದರೆ, ಸಾಮಾಜಿಕ ನ್ಯಾಯದ ಕನಸು ನನಸಾಗುವುದು ಹೇಗೆ? ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಘೋಷಿಸುತ್ತಾರೆ. ಆದರೆ, ದಲಿತರ ಮೇಲೆ ಇಂತಹ ದೌರ್ಜನ್ಯ ನಡೆಯುತ್ತಿದ್ದರೆ, ಅವರ ಸರ್ಕಾರ ಅದಕ್ಕೆ ಏನು ಉತ್ತರ ನೀಡುತ್ತದೆ? ಶುದ್ಧೀಕರಣದ ನೆಪದಲ್ಲಿ ಸಂವಿಧಾನವನ್ನು ಅವಮಾನಿಸಿರುವ, ಅಸ್ಪೃಶ್ಯತೆಯನ್ನು ಪ್ರೋತ್ಸಾಹಿಸಿರುವ ಆ ದುಷ್ಟ ಶಕ್ತಿಗಳ ಮೇಲೆ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಅಸ್ಪೃಶ್ಯತೆ ಆಚರಿಸುವುದು ಕೇವಲ ಸಾಮಾಜಿಕ ಪಿಡುಗಲ್ಲ, ಅದು ಕ್ರಿಮಿನಲ್ ಅಪರಾಧ. ದೇಶದ ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಯಾರೇ ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ಸಂವಿಧಾನವನ್ನು ಧಿಕ್ಕರಿಸುವವರಿಗೆ ಶಿಕ್ಷೆಯಾಗದಿದ್ದರೆ, ಈ ದೇಶದಲ್ಲಿ ಕಾನೂನಿನ ಆಡಳಿತ ಮುಗಿದಿದೆ ಎಂದು ಅರ್ಥ ಎಂದಿದ್ದಾರೆ.

ಮುಂದಿನ ಪೀಳಿಗೆಗೆ ನಾವು ಏನು ಉತ್ತರಿಸುತ್ತೇವೆ?

ನಾವು ಚಂದ್ರನ ಮೇಲೆ ನೌಕೆ ಇಳಿಸಿ ಅಭಿವೃದ್ಧಿಯ ಮಾತಾಡಬಹುದು, ಆದರೆ ನಮ್ಮ ಮನಸ್ಸಿನಿಂದ ಜಾತಿಯ ಮಲೀನತೆಯನ್ನು ತೊಳೆಯದ ಹೊರತು ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಬಾಬಾ ಸಾಹೇಬರು ನಮಗೆ ಘನತೆಯ ಬದುಕನ್ನು ನೀಡಲು ಶ್ರಮಿಸಿದರೆ, ಇಂದಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆ ಘನತೆಯನ್ನು ಕಸಿಯಲು ಯತ್ನಿಸುತ್ತಿವೆ. ಇವರು ರಾಷ್ಟ್ರ ನಿರ್ಮಾಣದ ಕೆಲಸ ಮಾಡುತ್ತಿಲ್ಲ, ಬದಲಿಗೆ ದೇಶದ ಏಕತೆಯನ್ನು ಛಿದ್ರಗೊಳಿಸುವ ದೇಶವಿರೋಧಿ ಕೆಲಸ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಘನತೆಗೆ ಚ್ಯುತಿ ತಂದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು. ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ. ಜಾತಿ ವ್ಯವಸ್ಥೆಯ ಕರಾಳತೆಯನ್ನು ಕಿತ್ತೊಗೆಯುವವರೆಗೂ, ಈ ದೇಶದ ದಲಿತರು ಮತ್ತು ಶೋಷಿತರು ಸಂವಿಧಾನದ ಆಶಯಗಳಿಗಾಗಿ ಹೋರಾಟವನ್ನು ಮುಂದುವರಿಸಲೇಬೇಕು. ಈ ಘಟನೆ ನಮ್ಮ ಕಣ್ಣು ತೆರೆಸಬೇಕು. ಜಾತಿ ವ್ಯವಸ್ಥೆ ಎಂಬ ವಿಷವೃಕ್ಷವನ್ನು ಬುಡಸಮೇತ ಕಿತ್ತೊಗೆಯುವ ಪ್ರತಿಜ್ಞೆಯನ್ನು ನಾವೆಲ್ಲರೂ ಕೈಗೊಳ್ಳಬೇಕಿದೆ. ಇಲ್ಲವಾದರೆ, ಬರುವ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ, ಇತಿಹಾಸ ನಮಗೆ ಕಠಿಣ ಶಿಕ್ಷೆಯನ್ನು ವಿಧಿಸುತ್ತದೆ ಎಂದು ತಿಳಿಸಿದ್ದಾರೆ.

Read More
Next Story