
ನಾಯಕತ್ವ ಬದಲಾವಣೆ ಬಿಕ್ಕಟ್ಟು; ರಾಜಕೀಯ ಚರ್ಚೆಗೆ ನಾಂದಿ ಹಾಡಿದ ಖರ್ಗೆ ಮಾತು
ಭವಿಷ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಡದೊಂದು ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಹೊಸ ತಿರುವು ಪಡೆದುಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ತಾವೂ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಕುರ್ಚಿ ಕಚ್ಚಾಟದ ಲಾಭವು ಮೂರನೇ ವ್ಯಕ್ತಿಯ ಪಾಲಾಗುವ ಆತಂಕದ ಜತೆಗೆ ಉಭಯ ನಾಯಕರ ಬಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ವಿಪಕ್ಷಗಳು ಕೂಡ ಕಾಂಗ್ರೆಸ್ ಆಂತರಿಕ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಭವಿಷ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಡದೊಂದು ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನನಗೂ ಸಿಎಂ ಆಗುವ ಆಸೆ ಇದೆ ಅಂದಿದ್ದಾರೆ. ಹೀಗಿರುವಾಗ ಏನಾಗಲಿದೆ ಎಂಬುದೇ ಕುತೂಹಲ ಕೆರಳಿಸಿದೆ ಎಂದು ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಕುರಿತು ಮಾತನಾಡಿದ ಬೊಮ್ಮಾಯಿ, ಅಸ್ಸಾಂನಲ್ಲಿ ಮೂರನೇ ಎರಡರಷ್ಟು ಬಹುಮತ ಎನ್‌ಡಿಎಗೆ ಬರಲಿದೆ. ನಾವು ನಿರೀಕ್ಷಿಸಿದಷ್ಟೇ ಎಕ್ಸಿಟ್ ಪೋಲ್ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯವರು ಎಷ್ಟೆ ಸಮಸ್ಯೆ ಮಾಡಲಿ, ಏನೇ ಹಿಂಸೆ ಕೊಡಲಿ, ಜನ ಬದಲಾವಣೆ ಬಯಸಿದ್ದಾರೆ. ಅಲ್ಲಿನ ಜನ ಶೇ 90 ರಷ್ಟು ಮತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಫಲಿತಾಂಶವು ದೇಶಕ್ಕೆ ದಿಕ್ಸೂಚಿ ಆಗಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಸತ್ತಿದೆ!
ಬೆಂಗಳೂರಿನಲ್ಲಿ ಭಾರೀ ಮಳೆಗೆ ಸಾವು-ನೋವು ಸಂಭವಿಸಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆಯೋ, ಬದುಕಿದೆಯೋ ಗೊತ್ತಿಲ್ಲ. ಮಳೆ ಹಿನ್ನೆಲೆಯಲ್ಲಿ ಸರ್ಕಾರ ಯಾವ ತಯಾರಿಯನ್ನೂ ಮಾಡಿಕೊಂಡಿಲ್ಲ. ಭಾರಿ ಮಳೆ ಆಗಬಹುದು ಅಂತ ಹವಾಮಾನ ಇಲಾಖೆ ಹೇಳುತ್ತಲೇ ಬಂದಿದೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಜನರ ಪಾಲಿಗೆ ಸತ್ತಂತಿದೆ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.
ಬದಲಾವಣೆ ಗಾಳಿ
ಇನ್ನು ಮಾಜಿ ಮುಖ್ಯ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರ ಅಭಿಮಾನೋತ್ಸವದ ಮೂಲಕ ರಾಜ್ಯದ ಮೂಲೆ ಮೂಲೆಗೂ ಸಂದೇಶ ಕೊಡುತ್ತೇವೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬಹಳ ದೊಡ್ಡ ರಾಜಕೀಯ ಬದಲಾವಣೆ ಆಗಲಿದೆ. ಈ ಕಾರ್ಯಕ್ರಮ ಬಿಜೆಪಿ ಆಕಾಶದತ್ತೆರಕ್ಕೆ ಹಾರುವ ಕಾರ್ಯಕ್ರಮ. ಬಿ.ಎಸ್ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ದಾಖಲೆ ಪ್ರಮಾಣದಲ್ಲಿ ಕಾರ್ಯಕ್ರಮ ಆಗಲಿದೆ ಎಂದು ಹೇಳಿದ್ದಾರೆ.

