
ಅನ್ಯಕಾರ್ಯಗಳಿಗೆ ಶಿಕ್ಷಕರ ಬಳಕೆ ತಡೆಗೆ ಮಸೂದೆ ಜಾರಿ - ಮಧು ಬಂಗಾರಪ್ಪ
ಎಸ್ಐಆರ್ ಸೇರಿದಂತೆ ಯಾವುದೇ ಆಡಳಿತಾತ್ಮಕ ಸರ್ವೇ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಸೇರಿದಂತೆ ಯಾವುದೇ ಆಡಳಿತಾತ್ಮಕ ಸರ್ವೇ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದ್ದು, ಇದಕ್ಕಾಗಿ ಶೀಘ್ರದಲ್ಲೇ ಹೊಸ ವಿಧೇಯಕವೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಕರನ್ನು ಎಸ್ಐಆರ್ ಪ್ರಕ್ರಿಯೆಗೆ ಬಳಸಿಕೊಳ್ಳುತ್ತಿರುವುದರಿಂದ ಶಾಲಾ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದರು. ಪ್ರಸ್ತುತ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಪಾಠಗಳು ನಡೆಯುತ್ತಿಲ್ಲ. ಹಲವು ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಬಳಿಕ ಶಿಕ್ಷಕರೇ ಇಲ್ಲದ ಕಾರಣ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂಬ ದೂರುಗಳು ಪೋಷಕರಿಂದ ಬರುತ್ತಿವೆ. ಮಧ್ಯವಾರ್ಷಿಕ ಪರೀಕ್ಷೆಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ಶಿಕ್ಷಕರು ಶಾಲೆಯಲ್ಲಿ ಇಲ್ಲದಿರುವುದು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. "ಮಕ್ಕಳ ಭವಿಷ್ಯ ಅತಿ ಮುಖ್ಯ, ಆದರೆ ಚುನಾವಣಾ ಆಯೋಗವು ಈ ವಾಸ್ತವಿಕತೆಯನ್ನು ಅರಿತುಕೊಳ್ಳದೆ, ಮಾನವೀಯತೆಯಿಲ್ಲದಂತೆ ಶಿಕ್ಷಕರನ್ನು ಸರ್ವೇ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಯ್ದೆಯ ಮೂಲಕ ಶಾಶ್ವತ ಪರಿಹಾರ
ಶಿಕ್ಷಕರನ್ನು ಇಂತಹ ಕೆಲಸಗಳಿಂದ ಮುಕ್ತಗೊಳಿಸಲು ಸರ್ಕಾರವು ಹೊಸ ವಿಧೇಯಕವೊಂದನ್ನು ರೂಪಿಸುತ್ತಿದೆ. "ಜಾತಿ ಗಣತಿ, ಎಸ್ಐಆರ್, ಆಡಳಿತಾತ್ಮಕ ಸರ್ವೆಗಳು ಹೀಗೆ ಎಲ್ಲದಕ್ಕೂ ಶಿಕ್ಷಕರನ್ನೇ ಬಳಸುವ ಪದ್ಧತಿ ಬದಲಾಗಬೇಕು. ಇದಕ್ಕಾಗಿ ನಾನು ಕಾನೂನುಬದ್ಧವಾದ ಹೊಸ ವಿಧೇಯಕದ ಕರಡು ಸಿದ್ಧಪಡಿಸುತ್ತಿದ್ದೇನೆ. ಶೀಘ್ರವೇ ಇದನ್ನು ಸಚಿವ ಸಂಪುಟದ ಮುಂದಿಟ್ಟು, ಅಧಿವೇಶನದಲ್ಲಿ ಕಾನೂನಾಗಿ ಜಾರಿಗೆ ತರುತ್ತೇವೆ. ಇದರಿಂದ ಶಿಕ್ಷಕರಿಗೆ ಪಾಠ ಮಾಡುವ ಕೆಲಸ ಮಾತ್ರ ಉಳಿಯುತ್ತದೆ" ಎಂದು ಭರವಸೆ ನೀಡಿದರು.
ಚುನಾವಣಾ ಆಯೋಗಕ್ಕೆ ಸಚಿವರ ನೇರ ಎಚ್ಚರಿಕೆ
ಚುನಾವಣಾ ಆಯೋಗವು ಸಂವಿಧಾನಬದ್ಧ ಸಂಸ್ಥೆಯಾದರೂ, ಸರ್ಕಾರದ ಆಡಳಿತಾತ್ಮಕ ಕಾರ್ಯಗಳಿಗೆ ಶಿಕ್ಷಕರನ್ನು ಬಲವಂತವಾಗಿ ಬಳಸುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಈ ವಿಚಾರದಲ್ಲಿ ಮಾನವೀಯತೆ ತೋರಬೇಕು. ರಾಜ್ಯ ಸರ್ಕಾರ ಈಗಾಗಲೇ ಅನೇಕ ಸರ್ವೇಗಳನ್ನು ನಡೆಸಿದೆ, ಆದರೆ ಆ ಸಮಯದಲ್ಲಿ ಶಿಕ್ಷಣಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಎಸ್ಐಆರ್ ವಿಷಯದಲ್ಲಿ ಮಾತ್ರ ಆಯೋಗ ಕಠಿಣ ನಿಲುವು ತಾಳುತ್ತಿರುವುದು ಶಿಕ್ಷಕರ ದುರ್ಬಳಕೆಯಲ್ಲದೆ ಮತ್ತೇನೂ ಅಲ್ಲ ಎಂದು ಕಿಡಿಕಾರಿದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಮೇಲ್ಮನೆಯಲ್ಲಿ ಹಲವು ಬಾರಿ ಈ ವಿಷಯ ಪ್ರಸ್ತಾಪಿಸಿ ಶಿಕ್ಷಕರನ್ನು ಮುಕ್ತಗೊಳಿಸುವಂತೆ ಒತ್ತಡ ಹೇರಿದ್ದಾರೆ. ಸಚಿವರನ್ನು ಭೇಟಿ ಮಾಡಿರುವ ಅನೇಕ ಜನಪ್ರತಿನಿಧಿಗಳು, ಪೋಷಕರು ಮತ್ತು ಶಿಕ್ಷಕ ಸಂಘಟನೆಗಳು ಈ ವ್ಯವಸ್ಥೆ ಬದಲಾಗಬೇಕೆಂದು ಆಗ್ರಹಿಸಿವೆ ಎಂದರು.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಮತ್ತು ದೋಷಗಳ ಬಗ್ಗೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "ಪ್ರಜಾಪ್ರಭುತ್ವದ ಅಡಿಪಾಯವೇ ಮತದಾನ. ಅಂತಹ ಪಟ್ಟಿಗಳ ಪರಿಷ್ಕರಣೆಯಲ್ಲಿ ಅಕ್ರಮಗಳಾದರೆ ಅದು ಸಂವಿಧಾನಕ್ಕೆ ಮಾಡುವ ಅಪಚಾರ. ಮತದಾರರ ಪಟ್ಟಿಯ ಮೇಲೆ ಜನರಿಗೆ ನಂಬಿಕೆ ಉಳಿಯಬೇಕು" ಎಂದರು. ಶಿಕ್ಷಕರನ್ನು ಅಕ್ರಮಗಳನ್ನು ತಡೆಯುವ ಅಥವಾ ಸರಿಪಡಿಸುವ ಕೆಲಸಕ್ಕೆ ಬಳಸುವ ಬದಲು, ಮಕ್ಕಳ ಕಲಿಕೆಗೆ ಆದ್ಯತೆ ನೀಡಬೇಕೆಂದು ಪ್ರತಿಪಾದಿಸಿದರು.
ಶೂ-ಸಾಕ್ಸ್ ವಿವಾದಕ್ಕೆ ತೆರೆ
ಇದೇ ಸಂದರ್ಭದಲ್ಲಿ, ಸರ್ಕಾರಿ ಶಾಲೆಗಳಲ್ಲಿ ವಿತರಿಸಲಾದ ಶೂ ಮತ್ತು ಸಾಕ್ಸ್ಗಳ ಗುಣಮಟ್ಟದ ಕುರಿತು ಕೇಳಿಬಂದಿರುವ ಆರೋಪಗಳಿಗೆ ಸಚಿವರು ಸ್ಪಷ್ಟನೆ ನೀಡಿದರು. "ವಿತರಿಸಲಾದ ಶೂ-ಸಾಕ್ಸ್ಗಳ ಗುಣಮಟ್ಟ ಕಳಪೆಯಾಗಿಲ್ಲ. ಆದರೆ, ಸೈಜ್ಗಳಲ್ಲಿ ಮಾತ್ರ ವ್ಯತ್ಯಾಸವಾಗಿರುವುದು ಗಮನಕ್ಕೆ ಬಂದಿದೆ. ಲೋಕಾಯುಕ್ತರು ಪ್ರಕರಣ ದಾಖಲಿಸುವ ಮುನ್ನವೇ ನಾನು ಸಿಇಒಗಳಿಗೆ ಸೂಚನೆ ನೀಡಿ, ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೇನೆ. ಯಾವುದೇ ಮಗುವಿಗೂ ಅನ್ಯಾಯವಾಗದಂತೆ ಸೈಜ್ ಸಮಸ್ಯೆ ಪರಿಹರಿಸಲಾಗುವುದು" ಎಂದು ಮಾಹಿತಿ ನೀಡಿದರು.

