ಸರ್ಕಾರಿ ಶಾಲೆಗಳ ಪುನಶ್ಚೇತನ: 3 ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚು ಶಾಲೆಗಳ ದುರಸ್ತಿ
x

ಸರ್ಕಾರಿ ಶಾಲೆಗಳ ಪುನಶ್ಚೇತನ: 3 ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚು ಶಾಲೆಗಳ ದುರಸ್ತಿ

ಮುಂದಿನ ದಿನದಲ್ಲಿ 1,252 ಕೋಟಿ ರೂ. ವೆಚ್ಚದಲ್ಲಿ 8,355 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿಕ್ಷಣದ ಗುಣಮಟ್ಟ ಮತ್ತು ಸ್ಥಳಾವಕಾಶವನ್ನು ಹೆಚ್ಚಿಸಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.


Click the Play button to hear this message in audio format

ಕಳೆದ ಮೂರು ವರ್ಷಗಳಲ್ಲಿ 10,241 ಶಾಲೆಗಳನ್ನು 321.44 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಪಡಿಸಲಾಗಿದೆ. ಅಲ್ಲದೆ, 1,252 ಕೋಟಿ ರೂ. ಖರ್ಚು ಮಾಡಿ, 8,355 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಸರ್ಕಾರವು ಶಾಲಾ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಲ್ಲಿ ಭಾರಿ ಮೊತ್ತವನ್ನು ವ್ಯಯಿಸಿದೆ. ಸುಮಾರು 10,241 ಶಾಲೆಗಳ ದುರಸ್ತಿಗಾಗಿ 321.44 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 1,252 ಕೋಟಿ ರೂ. ವೆಚ್ಚದಲ್ಲಿ 8,355 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿಕ್ಷಣದ ಗುಣಮಟ್ಟ ಮತ್ತು ಸ್ಥಳಾವಕಾಶವನ್ನು ಹೆಚ್ಚಿಸಲಾಗಿದೆ ಎಂದರು.

ಕಲಬುರಗಿ ಜಿಲ್ಲೆಯ ಸಂಗೋಳಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ತಾರಸಿ ಕುಸಿದಿರುವ ಘಟನೆ ಮತ್ತು ಕಲಬುರಗಿ ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜಿನ ಚಾವಣಿ ಕುಸಿದಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಲು ಅವಕಾಶವಿಲ್ಲ. ರಾಜ್ಯದ ಯಾವುದೇ ಶಾಲೆಯು ಶಿಥಿಲಾವಸ್ಥೆಯಲ್ಲಿದ್ದರೆ, ತಕ್ಷಣವೇ ಆ ಕಟ್ಟಡವನ್ನು ಬಳಸದಂತೆ ಸೂಚನೆ ನೀಡಲಾಗಿದೆ. ಇಲಾಖೆಯ ಬಿಇಒ ಮತ್ತು ಡಿಡಿಪಿಐ ಅಧಿಕಾರಿಗಳಿಗೆ ಶಾಲೆಗಳ ಭೌತಿಕ ಪರಿಶೀಲನೆ ನಡೆಸಿ, ಅಪಾಯಕಾರಿ ಕಟ್ಟಡಗಳ ಬಗ್ಗೆ ವರದಿ ನೀಡಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಹೇಳಿದರು.

ಪದವಿ ಪೂರ್ವ ಕಾಲೇಜುಗಳಿಗೆ ವಿಶೇಷ ಒತ್ತು

ಕೇವಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಷ್ಟೇ ಅಲ್ಲದೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಿದೆ. 248 ಪದವಿ ಪೂರ್ವ ಕಾಲೇಜುಗಳ 978 ತರಗತಿ ಕೊಠಡಿಗಳ ದುರಸ್ತಿಗೆ 30.21 ಕೋಟಿ ರೂ. ಬಿಡುಗಡೆ. 118 ಶೌಚಾಲಯಗಳ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು ಆಗಿದೆ.

2025-26ನೇ ಸಾಲಿನಲ್ಲಿ 117 ಕಾಲೇಜುಗಳಿಗೆ 266 ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕೆ 75.98 ಕೋಟಿ ರೂ. ಮತ್ತು 96 ಕಾಲೇಜುಗಳ 267 ಕೊಠಡಿಗಳ ದುರಸ್ತಿಗೆ 5.24 ಕೋಟಿ ರೂ. ಅನುದಾನ ಬಿಡುಗಡೆ. ಜತೆಗೆ 67 ಕಾಲೇಜುಗಳಲ್ಲಿ 123 ಶೌಚಾಲಯ ನಿರ್ಮಾಣಕ್ಕೆ 12.60 ಕೋಟಿ ರೂ. ಅನುದಾನವನ್ನು ಈಗಾಗಲೇ ಒದಗಿಸಲಾಗಿದೆ ಎಂದು ತಿಳಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ

2026-27ನೇ ಸಾಲಿಗಾಗಿ ಸರ್ಕಾರವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿದೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 59 ಸರ್ಕಾರಿ ಶಾಲೆಗಳನ್ನು ದುರಸ್ತಿಪಡಿಸಲಾಗುತ್ತಿದ್ದು, ಸುಮಾರು 121.07 ಕೋಟಿ ರೂ. ವೆಚ್ಚದಲ್ಲಿ 55 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಶಾಲೆಗಳ ಕಟ್ಟಡಗಳ ಗುಣಮಟ್ಟದ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸರ್ಕಾರ ಸಹಿಸುವುದಿಲ್ಲ. ಶಾಲೆಗಳ ದುರಸ್ತಿ ಕಾರ್ಯಗಳಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಅಥವಾ ಅನುದಾನದ ದುರ್ಬಳಕೆಯಾದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ, ಅವರಿಗೆ ಸುರಕ್ಷಿತ ವಾತಾವರಣ ಮೊದಲ ಅವಶ್ಯಕತೆ. ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಶಾಲಾ ಕಟ್ಟಡಗಳ ಸುರಕ್ಷತಾ ವರದಿಯನ್ನು ಸಲ್ಲಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಈ ಅಂಕಿಅಂಶಗಳು ಶಾಲಾ ಮೂಲಸೌಕರ್ಯದ ಅಭಿವೃದ್ಧಿಗೆ ಇರುವ ಬದ್ಧತೆಯನ್ನು ತೋರಿಸುತ್ತವೆ. ಆದರೆ, ಸವಾಲು ಇರುವುದು ಅನುದಾನದ ಬಿಡುಗಡೆಗಿಂತ, ಅದು ಸಕಾಲದಲ್ಲಿ ತಲುಪುವುದು ಮತ್ತು ನಿರ್ಮಾಣ ಕಾರ್ಯಗಳು ಅತ್ಯುನ್ನತ ಗುಣಮಟ್ಟದಲ್ಲಿ ನಡೆಯುವುದರಲ್ಲಿ. ಶಿಥಿಲವಾದ ಶಾಲೆಗಳನ್ನು ಗುರುತಿಸಿ, ಅವುಗಳನ್ನು ತಕ್ಷಣವೇ ದುರಸ್ತಿಗೊಳಿಸುವುದು ಇಲಾಖೆಯ ತಳಮಟ್ಟದ ಅಧಿಕಾರಿಗಳ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ.

Read More
Next Story