ಉಸಿರಾಡಲೂ ಪರದಾಟ: ಕಲ್ಲು ಕ್ವಾರಿಗಳ ಹಾವಳಿಗೆ ಮಾದಾಪಟ್ಟಣ ಗ್ರಾಮಸ್ಥರ ನರಕ ಯಾತನೆ

ಗ್ರಾಮದ ಪ್ರತಿ ಮನೆಯ ಗೋಡೆ, ಅಡುಗೆ ಪಾತ್ರೆ, ಕುಡಿಯುವ ನೀರು, ಆಹಾರ ಪದಾರ್ಥ ಹಾಗೂ ಮಲಗುವ ಹಾಸಿಗೆಗಳ ಮೇಲೆ ಧೂಳಿನ ದಪ್ಪನೆಯ ಪದರವೇ ಆವರಿಸಿದೆ. ದಿನವೊಂದಕ್ಕೆ ನಾಲ್ಕೈದು ಬಾರಿ ಮನೆ ಸ್ವಚ್ಛಗೊಳಿಸಿದರೂ ಧೂಳಿನ ಹಾವಳಿ ಮಾತ್ರ ತಪ್ಪುತ್ತಿಲ್ಲ.


Click the Play button to hear this message in audio format

ಬಂಡೆ ಕುಸಿದು ಏಳು ಮಂದಿ ಕಾರ್ಮಿಕರು ಮೃತಪಟ್ಟ ಭೀಕರ ದುರಂತದ ಬೆನ್ನಲ್ಲೇ, ಮಾದಾಪಟ್ಟಣ ಗ್ರಾಮದ ನಿವಾಸಿಗಳು ಈಗ ಮತ್ತೊಂದು ಗಂಭೀರವಾದ ಜೀವಭಯದಲ್ಲಿ ದಿನದೂಡುತ್ತಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಕಲ್ಲು ಕ್ವಾರಿಗಳು ಹಾಗೂ ಕ್ರಷರ್‌ಗಳಿಂದ ಏಳುತ್ತಿರುವ ವಿಪರೀತ ಧೂಳಿನಿಂದಾಗಿ ಗ್ರಾಮಸ್ಥರ ಜೀವನ ನರಕಸದೃಶವಾಗಿದ್ದು, ನೆಮ್ಮದಿಯಾಗಿ ಉಸಿರಾಡಲೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮನೆ ಮನೆಯಲ್ಲೂ ಧೂಳಿನ ಸಾಮ್ರಾಜ್ಯ

ಗ್ರಾಮದ ಪ್ರತಿ ಮನೆಯ ಗೋಡೆ, ಅಡುಗೆ ಪಾತ್ರೆ, ಕುಡಿಯುವ ನೀರು, ಆಹಾರ ಪದಾರ್ಥ ಹಾಗೂ ಮಲಗುವ ಹಾಸಿಗೆಗಳ ಮೇಲೆ ಧೂಳಿನ ದಪ್ಪನೆಯ ಪದರವೇ ಆವರಿಸಿದೆ. ದಿನವೊಂದಕ್ಕೆ ನಾಲ್ಕೈದು ಬಾರಿ ಮನೆ ಸ್ವಚ್ಛಗೊಳಿಸಿದರೂ ಧೂಳಿನ ಹಾವಳಿ ಮಾತ್ರ ತಪ್ಪುತ್ತಿಲ್ಲ. "ಬೆಳಗ್ಗೆಯಿಂದ ಸಂಜೆಯವರೆಗೆ ಕಸ ಗುಡಿಸುವುದೇ ನಮ್ಮ ಕೆಲಸವಾಗಿದೆ. ಮನೆ ಬಾಗಿಲು ಮುಚ್ಚಿ ಒಳಗಿದ್ದರೂ ಧೂಳು ನುಗ್ಗುತ್ತಿದೆ. ಅಡುಗೆಯಲ್ಲೂ ಧೂಳು ಸೇರುತ್ತಿದ್ದು, ನೆಮ್ಮದಿಯಿಂದ ಊಟ ಮಾಡಲೂ ಸಾಧ್ಯವಾಗುತ್ತಿಲ್ಲ" ಎಂದು ಗ್ರಾಮದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

ಹದಗೆಡುತ್ತಿರುವ ಆರೋಗ್ಯ

ಕ್ವಾರಿಗಳಿಂದ ಹೊರಬರುವ ಸಣ್ಣಪುಟ್ಟ ಕಲ್ಲಿನ ಪುಡಿಯಿಂದಾಗಿ ಗ್ರಾಮದ ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅನೇಕರು ಅಸ್ತಮಾ, ಅಲರ್ಜಿ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ವೃದ್ಧೆಯೊಬ್ಬರು, "ಧೂಳಿನಿಂದಾಗಿ ಉಸಿರಾಡಲು ಗಾಳಿ ಸಿಗದಂತಾಗಿದೆ. ಪ್ರತಿ ಮೂರು ದಿನಕ್ಕೊಮ್ಮೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಇದೆ. ಮನೆ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಡಾಕ್ಟರ್ ಹೇಳುತ್ತಾರೆ, ಆದರೆ ಇಡೀ ಊರೇ ಧೂಳಿನಿಂದ ತುಂಬಿರುವಾಗ ನಾವು ಹೇಗೆ ತಾನೆ ಸ್ವಚ್ಛವಾಗಿರಲು ಸಾಧ್ಯ?" ಎಂದು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗ್ರಾಮಸ್ಥರ ಆಕ್ರೋಶ

ನೂರಾರು ಲಾರಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮವಿಲ್ಲದೆ ಅತಿ ವೇಗವಾಗಿ ಸಂಚರಿಸುತ್ತಿವೆ. ಲಾರಿಗಳಿಗೆ ಟಾರ್ಪಲ್ ಅಳವಡಿಸದೆ ಕಲ್ಲು ಮತ್ತು ಪುಡಿಯನ್ನು ಸಾಗಿಸಲಾಗುತ್ತಿದೆ. ಧೂಳು ಏಳದಂತೆ ರಸ್ತೆಗಳಿಗೆ ನೀರು ಹಾಕುವ ಕನಿಷ್ಠ ಜವಾಬ್ದಾರಿಯನ್ನು ಕ್ರಷರ್ ಮಾಲೀಕರು ತೋರುತ್ತಿಲ್ಲ. ಗ್ರಾಮ ಪಂಚಾಯತ್ ಆಗಲಿ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪವಾಗಿದೆ.

Read More
Next Story