ಚಿಕ್ಕಮಗಳೂರು|ಶಾಲಾ ಮಕ್ಕಳನ್ನು ಅಟ್ಟಿಸಿಕೊಂಡು ಬಂದ ಒಂಟಿ ಸಲಗ
x

ಒಂಟಿ ಕಾಡಾನೆಯೊಂದು ಶಾಲಾ ಮಕ್ಕಳನ್ನು ಅಟ್ಟಿಸಿಕೊಂಡು ಬಂದ ಘಟನೆ ನಡೆದಿದೆ.

ಚಿಕ್ಕಮಗಳೂರು|ಶಾಲಾ ಮಕ್ಕಳನ್ನು ಅಟ್ಟಿಸಿಕೊಂಡು ಬಂದ ಒಂಟಿ ಸಲಗ

ಸಿದ್ದನಕೊಡಿಗೆ ಕಾಲೊನಿಯ ವಿದ್ಯಾರ್ಥಿಗಳು ಬಿ.ಹೆಚ್.ಕೈಮರ ಹಾಗೂ ಮೂಡಬಾಗಿಲು ಪ್ರೌಢಶಾಲೆಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಏಕಾಏಕಿ ರಸ್ತೆಗೆ ಬಂದ ಕಾಡಾನೆ ಮಕ್ಕಳತ್ತ ಧಾವಿಸಿದೆ.


Click the Play button to hear this message in audio format

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಗುಬ್ಬಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಕೊಡಿಗೆ ಕಾಲೊನಿಯಲ್ಲಿ ಮಂಗಳವಾರ ಬೆಳಗ್ಗೆ ಒಂಟಿ ಕಾಡಾನೆಯೊಂದು ಶಾಲಾ ಮಕ್ಕಳನ್ನು ಅಟ್ಟಿಸಿಕೊಂಡು ಬಂದ ಘಟನೆ ನಡೆದಿದೆ. ಮುಖ್ಯ ರಸ್ತೆಯಲ್ಲಿ ಶಾಲಾ ಬಸ್‌ಗಾಗಿ ಕಾಯುತ್ತಿದ್ದ ಆರು ವಿದ್ಯಾರ್ಥಿಗಳು ಕಾಡಾನೆಯನ್ನು ಕಂಡು ಭಯಭೀತರಾಗಿ ಓಡಿ ಹೋಗಿ ಸಮೀಪದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಸಿದ್ದನಕೊಡಿಗೆ ಕಾಲೊನಿಯ ವಿದ್ಯಾರ್ಥಿಗಳು ಬಿ.ಹೆಚ್.ಕೈಮರ ಹಾಗೂ ಮೂಡಬಾಗಿಲು ಪ್ರೌಢಶಾಲೆಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಏಕಾಏಕಿ ರಸ್ತೆಗೆ ಬಂದ ಕಾಡಾನೆ ಮಕ್ಕಳತ್ತ ಧಾವಿಸಿದೆ. ಆತಂಕಗೊಂಡ ಮಕ್ಕಳು ತಮ್ಮ ಶಾಲಾ ಬ್ಯಾಗ್‌ಗಳನ್ನು ಸ್ಥಳದಲ್ಲೇ ಬಿಟ್ಟು ಜೀವ ಉಳಿಸಿಕೊಳ್ಳಲು ಮನೆಗಳತ್ತ ಓಡಿದ್ದಾರೆ. ಕಾಡಾನೆ ಕೆಲ ದೂರ ಮಕ್ಕಳನ್ನು ಹಿಂಬಾಲಿಸಿದ ಬಳಿಕ ಸಮೀಪದ ಅಕೇಶಿಯಾ ತೋಪಿನತ್ತ ತೆರಳಿದೆ.

ಘಟನೆ ತಿಳಿದು ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದಾಗ ಕಾಡಾನೆ ಅಲ್ಲಿರಲಿಲ್ಲ. ಆದರೆ, ಪ್ರದೇಶದಲ್ಲಿ ಕಾಡಾನೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಆರು ತಿಂಗಳಿಂದ ಗ್ರಾಮಗಳ ಸುತ್ತ ಅಲೆದಾಡುತ್ತಿರುವ ಕಾಡಾನೆ

ಗ್ರಾಮಸ್ಥರ ಪ್ರಕಾರ, ಕಳೆದ ಆರು ತಿಂಗಳಿಂದ ಒಂಟಿ ಕಾಡಾನೆಯೊಂದು ಅರಳಿಕೊಪ್ಪ, ವಾಗಡೆ, ಸಂಕಸೆ ಹಾಗೂ ಗುಬ್ಬಿಗ ಗ್ರಾಮಗಳ ಸುತ್ತ ಸಂಚರಿಸುತ್ತಿದೆ. ಕಾಡಾನೆ ಅಡಿಕೆ, ಬಾಳೆ ಹಾಗೂ ತೆಂಗಿನ ಮರಗಳನ್ನು ಹಾನಿಗೊಳಿಸುವುದರ ಜೊತೆಗೆ ಭತ್ತದ ಗದ್ದೆಗಳನ್ನೂ ನಾಶಪಡಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಡಾನೆಯನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ಹಲವು ಬಾರಿ ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೂ ಕಾಡಾನೆ ಪದೇ ಪದೆ ಗ್ರಾಮಗಳತ್ತ ನುಗ್ಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಮಕ್ಕಳನ್ನು ಕಾಡಾನೆ ಅಟ್ಟಿಸಿಕೊಂಡು ಬಂದ ಘಟನೆ ಬಳಿಕ ನೂರಾರು ಗ್ರಾಮಸ್ಥರು ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಕಾಡಾನೆಗಳು ಗ್ರಾಮಗಳಿಗೆ ನುಗ್ಗದಂತೆ ತಕ್ಷಣ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಸುರಕ್ಷತೆಯ ದೃಷ್ಟಿಯಿಂದ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More
Next Story