x

ಕರ್ನಾಟಕದ 5 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ; ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಶೋಧ

ಕರ್ನಾಟಕದ ಐದು ಜಿಲ್ಲೆಗಳ 8 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಶೋಧ ನಡೆಸಲಾಗಿದ್ದು, ಅಕ್ರಮ ಆಸ್ತಿ ಹಾಗೂ ಲಂಚ ಪ್ರಕರಣಗಳ ತನಿಖೆ ಮುಂದುವರಿದಿದೆ.


ಸರ್ಕಾರಿ ಅಧಿಕಾರಿಗಳ ವಿರುದ್ಧ ಕೇಳಿಬಂದಿರುವ ಅಕ್ರಮ ಆಸ್ತಿ ಗಳಿಕೆ ಹಾಗೂ ಲಂಚದ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಕಲಬುರಗಿ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ಚಿತ್ರದುರ್ಗದಲ್ಲಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ಕಲಬುರಗಿಯಲ್ಲಿ ಜೆಸ್ಕಾಂ ಎಇಇ ಮನೆ, ಕಚೇರಿ ಮೇಲೆ ದಾಳಿ

ಕಲಬುರಗಿಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ವರಿ ಅವರಿಗೆ ಸೇರಿದ ಮೂರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅವರ ಮುಖ್ಯ ನಿವಾಸ, ಖಾದ್ರಿ ಚೌಕ್‌ನಲ್ಲಿರುವ ಮತ್ತೊಂದು ಮನೆ ಹಾಗೂ ಜೆಸ್ಕಾಂ ಕಚೇರಿಯಲ್ಲಿ ಪರಿಶೀಲನೆ ನಡೆದಿದೆ.

ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಇಇ ದಂಪತಿಗೆ ಸೇರಿದ ಸ್ಥಳಗಳಲ್ಲಿ ಶೋಧ

ಹುಬ್ಬಳ್ಳಿಯಲ್ಲಿ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣಕುಮಾರ್ ಬೈಂದೂರ್ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಪತ್ನಿ ಪ್ರೀತಿ ಕೂಡ ಹೆಸ್ಕಾಂನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಕ್ಷಯ್ ಪಾರ್ಕ್‌ನಲ್ಲಿರುವ ನಿವಾಸ, ತಬೀಬ್ ಲ್ಯಾಂಡ್‌ನಲ್ಲಿರುವ ಕಿರಣಕುಮಾರ್ ಅವರ ಕಚೇರಿ, ಗೋಪನಕೊಪ್ಪ ಹೆಸ್ಕಾಂ ಕಚೇರಿ ಹಾಗೂ ಕಿರಣಕುಮಾರ್ ಅವರ ಸಹೋದರನ ಮನೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಶೋಧ ನಡೆದಿದೆ. ಪ್ರಮುಖ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲೂ ರೇಡ್‌

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಗೌಡ ಅವರ ವಿರುದ್ಧವೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಒಟ್ಟು ಎಂಟು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ಬೆಂಗಳೂರಿನಲ್ಲಿರುವ ದರ್ಶನ್ ಗೌಡ ಅವರಿಗೆ ಸಂಬಂಧಿಸಿದ ಏಳು ಮನೆಗಳು ಹಾಗೂ ವಾಣಿಜ್ಯ ಆಸ್ತಿಗಳಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಬೀದರ್‌ನಲ್ಲಿ ನಿವೃತ್ತ ಕೃಷಿ ಅಧಿಕಾರಿಗೆ ಸೇರಿದ ಸ್ಥಳಗಳಲ್ಲಿ ದಾಳಿ

ಬೀದರ್‌ನಲ್ಲಿ ಇತ್ತೀಚೆಗೆ ನಿವೃತ್ತರಾದ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ ಅವರ ನಿವಾಸಗಳು ಹಾಗೂ ಫಾರ್ಮ್‌ಹೌಸ್‌ನಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬೀದರ್ ನಗರದ ಹಕ್ ಕಾಲನಿ, ಹುಮನಾಬಾದ್‌ನ ಟೀಚರ್ ಕಾಲನಿ ಹಾಗೂ ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಏಕಕಾಲಕ್ಕೆ ಪರಿಶೀಲನೆ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.

ಚಿತ್ರದುರ್ಗದಲ್ಲಿ 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಎಫ್‌ಡಿಎ ವಶಕ್ಕೆ

ಚಿತ್ರದುರ್ಗದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಎಂಬುವವರನ್ನು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ್ಲೋಡು ಗ್ರಾಮದ ಹನುಮಂತಪ್ಪ ಅವರ ಪಹಣಿ ತಿದ್ದುಪಡಿ ಮಾಡಿಕೊಡಲು 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಮಂಗಳೂರಿನಲ್ಲಿ ಪೊಲೀಸ್ ನಿರೀಕ್ಷಕ ಲೋಕಾಯುಕ್ತ ಬಲೆಗೆ

ಇದೇ ವೇಳೆ ಮಂಗಳೂರಿನ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಸೊತ್ತುಗಳನ್ನು ಬಿಡುಗಡೆ ಮಾಡಲು ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ₹15 ಸಾವಿರವನ್ನು ಮುಂಚಿತವಾಗಿ ಪಡೆದಿದ್ದ ಅವರು, ಹೆಚ್ಚುವರಿಯಾಗಿ ₹5 ಸಾವಿರ ಸ್ವೀಕರಿಸುವ ವೇಳೆ ಸೆಪ್ಟೆಂಬರ್ 21ರಂದು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಸದ್ಯ ವಿವಿಧೆಡೆ ನಡೆದಿರುವ ದಾಳಿಗಳಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳು, ಆಸ್ತಿ ವಿವರಗಳು ಹಾಗೂ ಲಂಚದ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಬಳಿಕ ಆರೋಪಗಳ ಕುರಿತು ಮತ್ತಷ್ಟು ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

Read More
Next Story