ಲೋಕಾಯುಕ್ತ ದಾಳಿಯಲ್ಲಿ ಆಹಾರ ನಿಗಮದ ಗೋಡೌನ್‌ಗಳ ಅಕ್ರಮ ಬಯಲು
x

ಲೋಕಾಯುಕ್ತ ದಾಳಿಯಲ್ಲಿ ಆಹಾರ ನಿಗಮದ ಗೋಡೌನ್‌ಗಳ ಅಕ್ರಮ ಬಯಲು

ಬೆಂಗಳೂರು, ರಾಮನಗರ ಸೇರಿದಂತೆ 17 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ. ಆಹಾರ ಇಲಾಖೆ ಗೋಡೌನ್‌ಗಳಲ್ಲಿ ಅಕ್ಕಿ ಮೂಟೆಗಳ ಲೆಕ್ಕ ವ್ಯತ್ಯಾಸ, ಅಧಿಕಾರಿಗಳ ಗೈರು ಹಾಜರಿ, ಹಮಾಲಿಗಳಿಗೆ ಜೀವ ವಿಮೆ ಇಲ್ಲದಿರುವುದು ಸೇರಿದಂತೆ ಹಲವು ಅಕ್ರಮಗಳು ಪತ್ತೆ.


ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಅಕ್ರಮಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ಮತ್ತು ರಾಮನಗರ ಸೇರಿದಂತೆ 17 ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದ ಹಲವು ಗೋಡೌನ್‌ಗಳಲ್ಲಿ ಅಕ್ರಮಗಳು, ಕರ್ತವ್ಯಲೋಪ ಹಾಗೂ ಆಹಾರ ದಾಸ್ತಾನು ಲೆಕ್ಕದಲ್ಲಿ ವ್ಯತ್ಯಾಸಗಳು ಬೆಳಕಿಗೆ ಬಂದಿವೆ.

ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಆಹಾರ ದಾಸ್ತಾನುಗಳ ಸರಿಯಾದ ಲೆಕ್ಕಪತ್ರ ನಿರ್ವಹಣೆ ಆಗದಿರುವುದು, ಅಧಿಕಾರಿಗಳು ಕರ್ತವ್ಯಕ್ಕೆ ಗೈರಾಗಿರುವುದು, ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಹಲವು ಗಂಭೀರ ಅಂಶಗಳು ಪತ್ತೆಯಾಗಿವೆ.

ಶಾಂತಿನಗರ ಆಹಾರ ಇಲಾಖೆ ಗೋಡೌನ್‌ನಲ್ಲಿ ಲೆಕ್ಕ ವ್ಯತ್ಯಾಸ

ಶಾಂತಿನಗರದ ಆಹಾರ ಇಲಾಖೆ ಗೋಡೌನ್‌ನಲ್ಲಿ ಪರಿಶೀಲನೆ ನಡೆಸಿದ ವೇಳೆ 50 ಕೆಜಿ ತೂಕದ 1,130 ಅಕ್ಕಿ ಮೂಟೆಗಳ ಲೆಕ್ಕ ತಾಳೆಯಾಗದಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಅಧಿಕಾರಿಗಳು ಈ ಕುರಿತು ಯಾವುದೇ ಸಮರ್ಪಕ ವಿವರಣೆ ನೀಡಲು ವಿಫಲರಾಗಿದ್ದಾರೆ.

ಇದಲ್ಲದೆ, ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಐದು ಹಮಾಲಿಗಳಿಗೆ ಜೀವ ವಿಮೆ ಮಾಡಿಸದೇ ಇರುವುದೂ ಪತ್ತೆಯಾಗಿದೆ. ಕಾರ್ಮಿಕರ ಸುರಕ್ಷತೆ ಕುರಿತು ಅಗತ್ಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪವೂ ಬೆಳಕಿಗೆ ಬಂದಿದೆ.

ಬೊಬ್ಬನಹಳ್ಳಿ ಸಗಟು ಮಳಿಗೆಯಲ್ಲಿ ಅಧಿಕಾರಿಯ ಗೈರು ಹಾಜರಿ

ಬೆಂಗಳೂರು ದಕ್ಷಿಣ ವ್ಯಾಪ್ತಿಯ ಬೊಬ್ಬನಹಳ್ಳಿ ಸಗಟು ಮಳಿಗೆಯಲ್ಲಿ ದಾಳಿ ವೇಳೆ ಗೋಡೌನ್ ಅಧಿಕಾರಿ ಅಚ್ಯುತ್ ಯಾವುದೇ ಮಾಹಿತಿ ನೀಡದೆ ಗೈರಾಗಿರುವುದು ಕಂಡುಬಂದಿದೆ. ಇಲ್ಲಿ ಕೆಲಸ ಮಾಡುತ್ತಿದ್ದ 10 ಹಮಾಲಿಗಳಿಗೂ ಜೀವ ವಿಮೆ ಸೌಲಭ್ಯ ಕಲ್ಪಿಸದಿರುವುದು ಪತ್ತೆಯಾಗಿದೆ. ಅಲ್ಲದೆ, ಗೋದಾಮಿನಲ್ಲಿ ಹಾಜರಿದ್ದ ಶಿವಲಿಂಗಯ್ಯ ಸ್ವೀಕರಿಸಿದ ಅಕ್ಕಿ ಮೂಟೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಪರಿಶೀಲನೆಯ ವೇಳೆ ನಿಯಮಬಾಹಿರವಾಗಿ ಲಾರಿಗೆ 25 ಟನ್ ಅಕ್ಕಿ ಮೂಟೆಗಳನ್ನು ಲೋಡ್ ಮಾಡಲಾಗುತ್ತಿದ್ದದ್ದು ಕೂಡ ಪತ್ತೆಯಾಗಿದೆ.

ಬಸವನಗುಡಿ ಗೋಡೌನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಮಾಲಿಗಳಿಗೆ ಜೀವ ವಿಮೆ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ಕಲ್ಪಿಸದಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ದಾಖಲೆಗಳಲ್ಲಿ ಉಲ್ಲೇಖಿಸಿದ್ದ ಪ್ರಮಾಣಕ್ಕಿಂತ ಕಡಿಮೆ ಅಕ್ಕಿ ಮೂಟೆಗಳು ಗೋಡೌನ್‌ನಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳ ಬಳಿ ಇದ್ದ ನಗದು ಹಣದ ಕುರಿತು ಕೂಡ ಸಮರ್ಪಕ ಸಮಜಾಯಿಷಿ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.

ಹನುಮಂತನಗರ ಗೋಡೌನ್‌ನಲ್ಲಿ ರಾಗಿ, ಅಕ್ಕಿ ದಾಸ್ತಾನು ನಾಪತ್ತೆ

ಹನುಮಂತನಗರ ಗೋಡೌನ್‌ನಲ್ಲಿ ನಾಲ್ವರು ಹಮಾಲಿಗಳಿಗೆ ಜೀವ ವಿಮೆ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳಿಲ್ಲದಿರುವುದು ಪತ್ತೆಯಾಗಿದೆ. ರಿಜಿಸ್ಟರ್ ದಾಖಲೆಗಳನ್ನು ಪರಿಶೀಲಿಸಿದ ವೇಳೆ ದಾಖಲೆಗಳಲ್ಲಿ ನಮೂದಿಸಿದ್ದ ಅಕ್ಕಿ ಹಾಗೂ ರಾಗಿ ಮೂಟೆಗಳ ಪ್ರಮಾಣ ಮತ್ತು ವಾಸ್ತವಿಕ ದಾಸ್ತಾನು ನಡುವೆ ವ್ಯತ್ಯಾಸ ಕಂಡುಬಂದಿದೆ. ಕೆಲವು ಮೂಟೆಗಳು ಲೆಕ್ಕಕ್ಕೆ ಸಿಗದಿರುವುದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ.

ರಾಜ್ಯಾದ್ಯಂತ 17 ಕಡೆ ದಾಳಿ

ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಹಲವು ಇಲಾಖೆಗಳ ಕಚೇರಿಗಳು ಮತ್ತು ಗೋಡೌನ್‌ಗಳನ್ನು ಪರಿಶೀಲಿಸಿದ್ದಾರೆ. ಆಹಾರ ದಾಸ್ತಾನು ನಿರ್ವಹಣೆ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಹಾಗೂ ಆಡಳಿತಾತ್ಮಕ ಅಕ್ರಮಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಗಿರುವ ಅಂಶಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಆಹಾರ ದಾಸ್ತಾನು ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Read More
Next Story