
7 ಜಿಲ್ಲೆಗಳ 10 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ, ದಾಖಲೆಗಳ ಶೋಧ
ಅಕ್ರಮ ಆಸ್ತಿ ಸಂಪಾದನೆ ಮತ್ತು ಅಧಿಕಾರದ ದುರ್ಬಳಕೆಯ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಲಾಗಿದ್ದು, ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ.
ರಾಜ್ಯದ ಏಳು ಜಿಲ್ಲೆಗಳಲ್ಲಿನ 10 ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿದೆ. ಅಕ್ರಮ ಆಸ್ತಿ ಸಂಪಾದನೆ ಮತ್ತು ಅಧಿಕಾರದ ದುರ್ಬಳಕೆಯ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಧಾರವಾಡ, ಚಿತ್ರದುರ್ಗ, ರಾಯಚೂರು, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಜರುಗಿದೆ. ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಅಧಿಕಾರಿಗಳ ತಂಡ, ಸಂಬಂಧಪಟ್ಟ ಅಧಿಕಾರಿಗಳ ಮನೆಗಳ ಬಾಗಿಲು ತಟ್ಟಿ ದಾಖಲೆಗಳನ್ನು ಪರಿಶೀಲಿಸಲು ಪ್ರಾರಂಭಿಸಿತು. ಒಂದೇ ದಿನ ಹತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ನಡೆದಿರುವ ಈ ದಾಳಿ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಏರಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ.
ಕಲಬುರಗಿಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮೃತ್ ರಾವ್, ಚಿತ್ರದುರ್ಗದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್, ಅರಣ್ಯಾಧಿಕಾರಿ ದುರ್ಗಪ್ಪ, ಶಿವಮೊಗ್ಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಅಂಗಡಿ, ರಾಯಚೂರಿನಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕಾರ್ಯನಿರ್ವಾಹಕ ಎಂಜಿನಿಯರ್ ಬಸನಗೌಡ ಪಾಟೀಲ್, ಬೆಂಗಳೂರು ನಗರದಲ್ಲಿ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಕುಮಾರ್, ಕೆಆರ್‌ಐಡಿಎಲ್ ಸೂಪರಿಟೆಂಡೆಂಟ್ ಎಂಜಿನಿಯರ್ ಪ್ರವೀಣ್ ಬಿ. ಶ್ರೀಹರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಉಪನಿರ್ದೇಶಕಿ ಪುಷ್ಪಾ.ಡಿ.ಆರ್., ತುಮಕೂರಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮಧುಸೂದನ್.ಎನ್., ಬೆಂಗಳೂರು ದಕ್ಷಿಣದಲ್ಲಿ ಆರ್‌ಡಿಪಿಆರ್‌ನ ಪಿಡಿಒ ತಿಮ್ಮೇಗೌಡ ಅವರಿಗೆ ಸೇರಿದ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಭ್ರಷ್ಟಾಚಾರದ ಸ್ವರೂಪ
ಈ ದಾಳಿಗಳಲ್ಲಿ ಸಿಕ್ಕಿಬಿದ್ದಿರುವ ಅಧಿಕಾರಿಗಳು ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಇದ್ದಾರೆ. ಎಂಜಿನಿಯರ್‌ಗಳು, ಅರಣ್ಯ ಅಧಿಕಾರಿಗಳು ಮತ್ತು ಪ್ರೊಫೆಸರ್‌ಗಳ ಮೇಲೆ ನಡೆದ ಈ ದಾಳಿಗಳು ಸಮಾಜದ ಉನ್ನತ ವರ್ಗದವರು ಹೇಗೆ ವ್ಯವಸ್ಥೆಯನ್ನು ಬಳಸಿಕೊಂಡು ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಬೇನಾಮಿ ಆಸ್ತಿಗಳಾಗಿ ಪರಿವರ್ತಿಸುವುದು, ಕೃಷಿ ಜಮೀನುಗಳ ಹೆಸರಿನಲ್ಲಿ ಹಣ ಹೂಡಿಕೆ ಮಾಡುವುದು ಮತ್ತು ಸಂಬಂಧಿಕರ ಹೆಸರಿನಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪಿಸುವುದು ಮುಂತಾದ ವಿಧಾನಗಳನ್ನು ಭ್ರಷ್ಟರು ಅನುಸರಿಸುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ದಾಳಿ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಒಟ್ಟಾರೆ ಆಸ್ತಿಯ ಮೌಲ್ಯ ತಿಳಿದುಬರಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ.
ದಾಳಿ ನಡೆಸುವುದು ಮೊದಲ ಹಂತವಾದರೆ, ಆರೋಪಪಟ್ಟಿ ಸಿದ್ಧಪಡಿಸಿ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸುವುದು ನಿಜವಾದ ಸವಾಲಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ನೀತಿಯ ಲಾಭವನ್ನು ಪಡೆಯಲು ಭ್ರಷ್ಟ ಅಧಿಕಾರಿಗಳು ಪ್ರಯತ್ನಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಂಡು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ವೇಗವಾಗಬೇಕಿದೆ.

